ಚಿತ್ರ: ಲ್ಯಾಂಡ್‌ಲಾರ್ಡ್
ನಿರ್ದೇಶನ: ಜಡೇಶ್ ಕೆ ಹಂಪಿ
ನಿರ್ಮಾಣ: ಸಾರಥಿ ಫಿಲಂಸ್
ತಾರಾಗಣ: ವಿಜಯ್ ಕುಮಾರ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ಉಮಾಶ್ರೀ, ಮಿತ್ರಾ, ರಿತನ್ಯಾ ವಿಜಯ್ ಹಾಗೂ ಶಿಶಿರ್ ಬೈಕಾಡಿ ಇತರರು.
ರೇಟಿಂಗ್ಸ್: 3.5
– ಗಣೇಶ್ ರಾಣೆಬೆನ್ನೂರು
ಆಳುವವರು ಆಳುತ್ತಲೇ ಇರುತ್ತಾರೆ… ಉಳುವವರು ಉಳುತ್ತಲೇ ಇರುತ್ತಾರೆ. ಉಳ್ಳವರ ದರ್ಪ, ಶೋಷಿತರ ಮೇಲೆ ನಿರಂತರ ಶೋಷಣೆ ಅನಾದಿ ಕಾಲದಿಂದಲೂ ಇತ್ತು, ಈಗಲೂ ಇದೆ ಎಂಬುದನ್ನು ನೇರವಾಗಿಯೇ ತೆರೆದಿಟ್ಟಿದ್ದಾರೆ ನಿರ್ದೇಶಕ ಜಡೇಶ್ ಕೆ ಹಂಪಿ.
ತುಂಡು ಭೂಮಿ ತಮ್ಮದಾಗಿಸಿಕೊಳ್ಳಲು ರೈತರು ಎಷ್ಟೆಲ್ಲಾ ಕಷ್ಟಪಡಬೇಕು… ಆಗಿನಿಂದಲೂ ಊರನ್ನು ಆಳಿದ ದೊರೆಗಳು ತಮ್ಮ ಕಪಿಮುಷ್ಠಿಯಲ್ಲಿ ಸರ್ಕಾರ, ಕಾನೂನು, ಸಮಾಜವನ್ನು ಹೇಗೆ ಹಿಡಿದಿಟ್ಟುಕೊಂಡಿರುತ್ತಾರೆ ಎಂಬುದನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.
ಇದು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ನಡೆಯುವ ಕಥೆ ಎಂದು ಹೇಳದೇ, ಎಲ್ಲವನ್ನೂ ಹೇಳಿ ಮುಗಿಸುತ್ತಾರೆ ಜಡೇಶ್. ಅವರು ಕಥೆಗಾಗಿ ಮಾಡಿರುವ ಹಿನ್ನೆಲೆ ಕೆಲಸ, ಒಂದೊಂದು ಮಾತಿಗೂ ಮಾಡಿರುವ ಕುಸುರಿ ಕೆಲಸ (ಸಂಭಾಷಣೆ-ಮಾಸ್ತಿ), ಸ್ವಾಮಿ ಜೆ ಗೌಡ ಕ್ಯಾಮೆರಾ ಕೈಚಳಕ, ಪಾತ್ರಧಾರಿಗಳು ಆಯಾ ಪಾತ್ರವನ್ನು ಆವಾಹನೆ ಮಾಡಿಕೊಂಡ ರೀತಿ… ಎಲ್ಲವೂ ಸೇರಿ ಒಂದೊಳ್ಳೆ ಕಲಾಕೃತಿಯಾಗಿದೆ.
ಇದನ್ನೂ ಓದಿ: Movie Review: ಹೊಸ ಯುಗದ ಪ್ರೇಮ್ ಕಹಾನಿ
ನಿಜವಾದ ಭೂಮಿ ಒಡೆಯರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುತ್ತದೆ. ಆಗೆಲ್ಲ ಹೆಚ್ಚು ಅಕ್ಷರ ಜ್ಞಾನವಿಲ್ಲದೇ ದೊಡ್ಡವರು ಹೇಳಿದ್ದೇ ವೇದವಾಕ್ಯ ಎಂದು ನಂಬಿಕೊಂಡು ಹೋಗುವ ಜಾಯಮಾನವಿತ್ತು. ಆದರೆ ಕಾಲ ಬದಲಾಗುತ್ತಿದ್ದಂತೇ ಓದು ತಲೆಗೆ ಹಚ್ಚಿಕೊಂಡವರ ಸಂಖ್ಯೆ ಏರಿಕೆಯಾಗತೊಡಗಿದಂತೆ ಅದೇ ದೊಡ್ಡವರ ಬಣ್ಣ ಬಯಲಾಗುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ ಎಂಬುದಕ್ಕೂ ಇಲ್ಲಿ ಸಾಕಷ್ಟು ಉದಾಹರಣೆಗಳಿವೆ.
ವಿಜಯ್ ಕುಮಾರ್ ರಾಚಯ್ಯನಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿಂಗವ್ವ ಪಾತ್ರಧಾರಿಯಾಗಿ ರಚಿತಾ ರಾಮ್ ಸಿನಿಮಾದುದ್ದಕ್ಕೂ ಆವರಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಅಬ್ಬರಿಸಿದರೆ, ಮಿತ್ರಾ ತಣ್ಣಗೆ ಮಸಲತ್ತು ಮಾಡುತ್ತಾರೆ. ರಿತನ್ಯಾ ವಿಜಯ್ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಉಮಾಶ್ರೀ ಕೆಲವೇ ನಿಮಿಷ ಬಂದರೂ ಸಿಕ್ಸರ್ ಭಾರಿಸಿದ್ದಾರೆ. ಶಿಶಿರ್ ಬೈಕಾಡಿ, ರಾಕೇಶ್ ಅಡಿಗ, ಅಚ್ಯುತ್ ಕುಮಾರ್ ಇತರರ ಅಭಿನಯ ಸೊಗಸು. ಅಜನೀಶ್ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್‌ಗಳಲ್ಲೊಂದು.























