ಚಿತ್ರ: ಕಲ್ಟ್
ನಿರ್ದೇಶನ: ಅನಿಲ್ ಕುಮಾರ್
ನಿರ್ಮಾಣ: ಲೋಕಿ ಸಿನಿಮಾಸ್
ತಾರಾಗಣ: ಝೈದ್ ಖಾನ್, ರಚಿತಾ ರಾಮ್, ಮಲೈಕಾ ವಸುಪಾಲ್, ರಂಗಾಯಣ ರಘು, ಅಚ್ಯುತ್ ಕುಮಾರ್, ಅಲೋಕ್ ಹಾಗೂ ಕಿಶನ್ ಮತ್ತಿತರರು.
ರೇಟಿಂಗ್ಸ್: 3.5
– ಜಿ.ಆರ್.ಬಿ
ಒಂದು ಪ್ರೇಮಕಥೆಯನ್ನು ವಿವಿಧ ದೃಷ್ಟಿಕೋನಗಳಲ್ಲಿ ಹೇಳಬಹುದು. ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಲವ್‌ಸ್ಟೋರಿಗಳಿರುತ್ತವೆ. ಅದಕ್ಕೆಲ್ಲ ಅಂತಿಮ ಘಟ್ಟ ಎಂಬುದೂ ಇರುತ್ತದೆ. ಇತ್ತೀಚಿನ ಲವ್, ಯುವ ಜನಾಂಗದ ಪ್ರೇಮ್ ಕಹಾನಿಗಳಿಗೆ ಆಯಸ್ಸು ಎಷ್ಟಿದೆ, ಅವರ ಪ್ರೀತಿಯ ಪರಿಪಾಠಗಳು ಹೇಗೆಲ್ಲ ಇರುತ್ತವೆ ಎಂಬುದನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅನಿಲ್ ಕುಮಾರ್.
ಕರಾವಳಿ, ಬೆಂಗಳೂರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರೇಮಕಥೆಗಳು ತೆರೆದುಕೊಳ್ಳುತ್ತವೆ. ಇದು ತ್ರಿಕೋನ ಪ್ರೇಮಕಥೆಯಾದರೂ ಎಲ್ಲಾ ಕಥೆಗಳಿಗೂ ಪೂರ್ಣವಿರಾಮ ಹಾಗೂ ಅದಕ್ಕೊಂದು ನೀತಿಪಾಠ ಹೇಳಿ ಮುಗಿಸಲಾಗಿದೆ. ಯಾರು ಯಾರಿಗೆ ಸಿಗುತ್ತಾರೆ ಎಂಬುದಕ್ಕೆ ಕ್ಲೈಮ್ಯಾಕ್ಸ್‌ವರೆಗೂ ಕಾಯಲೇಬೇಕು.
ಹದಿಹರೆಯದ ಪ್ರೇಮ, ಹಸಿಬಿಸಿ ಪ್ರೇಮ ಹಾಗೂ ಮೆಚೂರ‍್ಡ್ ಲವ್ ಸ್ಟೋರಿಯನ್ನು ಭಿನ್ನ ರೂಪದಲ್ಲಿ ಹರವಿಡಲಾಗಿದೆ. ಈಗೆಲ್ಲ ಪ್ರೀತಿ ಎಂಬುದು ಅಪ್ಪಟ ಪ್ರೀತಿಯಾಗಿ ಉಳಿಯದೇ ಅಳತೆಗೋಲನ್ನು ಮೀರಿ ಲವ್ ಹೆಸರಲ್ಲಿ ‘ಬೇರೆಲ್ಲ’ ನಡೆಯುತ್ತಿದೆ. ಇದರ ಫಲಿತಾಂಶವೇನು ಎಂಬುದನ್ನು ತೋರಿಸುತ್ತಲೇ, ಒಂದು ಹೆಣ್ಣು ಅತ್ಯಾಚಾರಕ್ಕೊಳಗಾದ ನಂತರ ಆಕೆಯ ಜೀವನದ ಬಗ್ಗೆ ಯಾರು ಚಿಂತಿಸುತ್ತಾರೆ… ಆಕೆಗೆ ಯಾರು ಬಾಳು ಕೊಡುತ್ತಾರೆ..?
ಇದನ್ನೂ ಓದಿ: ‘ಅಶೋಕ’ನ ಜನಪದ ಸೊಗಡು: ಟ್ರೆಂಡಿಂಗ್‌ನಲ್ಲಿ ‘ಕಲ್ಯಾಣವೇ’ ಹಾಡು
ಈ ರೀತಿಯ ವಿಷಯವನ್ನು ನೀಟಾಗಿ ಹೇಳುವುದರ ಜತೆಗೆ ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಅಂಶಗಳನ್ನೂ ಸೇರಿಸಿ ಹದವಾಗಿ ಅಡುಗೆ ಮಾಡಿ ಬಡಿಸಿದ್ದಾರೆ ಅನಿಲ್.
ನಾಯಕ ನಟ ಝೈದ್ ಖಾನ್ ‘ಕಲ್ಟ್’ ಮೂಲಕ ಸಾಕಷ್ಟು ಮಾಗಿದ್ದಾರೆ. ಡೈಲಾಗ್ ಡೆಲಿವರಿ, ಮ್ಯಾನರಿಸಂ, ನಟನೆ, ಆಕ್ಷನ್… ಹೀಗೆ ಎಲ್ಲದರಲ್ಲೂ ಪಕ್ವತೆ ಕಾಪಾಡಿಕೊಂಡು ಭರವಸೆ ಮೂಡಿಸಿದ್ದಾರೆ. ರಚಿತಾರಾಮ್ ಹಾಗೂ ಮಲೈಕಾ ವಸುಪಾಲ್ ಪಾತ್ರಗಳು ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳ ಉದಾಹರಣೆಯಾಗಿ ನಿಲ್ಲುತ್ತವೆ. ರಂಗಾಯಣ ರಘು ಇದ್ದಷ್ಟು ಹೊತ್ತು ಗಮನ ಸೆಳೆಯುತ್ತಾರೆ. ಅಚ್ಯುತ್ ಕುಮಾರ್, ಅಲೋಕ್, ಕಿಶನ್ ಇತರರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.
ಅರ್ಜುನ್ ಜನ್ಯ ಹಾಡುಗಳು ಹಾಗೂ ಜಗದೀಶ್ ವಾಲಿ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.









