ಅಕ್ರಮ ಮರಳು ತಡೆಗೆ ಅಗತ್ಯ ಕ್ರಮ: ಐಜಿಪಿ ಡಾ. ಹರ್ಷ

0
1

ರಾಯಚೂರು: ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಗಳಿದ್ದರೂ ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮಕ್ಕೆ ಬದ್ಧ ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರ್ದೇಶಕ ಐಜಿಪಿ ಡಾ. ಪಿ.ಎಸ್ ಹರ್ಷಾ ಹೇಳಿದರು.

ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮ ಮರಳು ಜಿಲ್ಲೆಯ ತಡೆಗಟ್ಟಲು ಎಸ್ಪಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ. ಅಕ್ರಮದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳೂ ಪರೋಕ್ಷವಾಗಿ ಭಾಗಿಯಾಗಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಅಕ್ರಮ ಚಟುವಟಿಕೆಗಳಲ್ಲಿ ಯಾರೇ ಭಾಗಿಯಾದರೂ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ದೇವದುರ್ಗ ಸೇರಿದಂತೆ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಕಾನೂನು ಬಾಹಿರವಾಗಿ ಸಾಗಣೆಗೆ ತಡೆಯಲು ವಿವಿಧ ಇಲಾಖೆಗಳ ಜೊತೆಗೂಡಿ ಕೆಲಸ ಮಾಡುತ್ತಿದೆ. ಅಕ್ರಮದಲ್ಲಿ ಪ್ರಭಾವಿಗಳು, ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ‌ ಆರೋಪಗಳು, ಪತ್ರಿಕಾ ವರದಿಗಳಿಂದ ಮಾಹಿತಿ ಬಂದಿದ್ದು, ಪೊಲೀಸ್ ಸೇರಿ ಯಾವುದೇ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದರೆ ನಿಖರವಾಗಿ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯಪಾಲರಿಂದ ಸಂವಿಧಾನಾತ್ಮಕ ವಿಧಿಗಳ ಸ್ಪಷ್ಟ ಉಲ್ಲಂಘನೆ

ಅಕ್ರಮ ಮರಳು ಗಣಿಗಾರಿಕೆ ತಡೆಗೆ ಪೊಲೀಸ್ ಇಲಾಖೆಯ ಜೊತೆ ಗಣಿ‌ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆಯ ಪಾತ್ರವೂ ಮುಖ್ಯವಾಗಿದೆ. ಹೆಚ್ಚು ಕ್ರಿಯಾಶೀಲರಾಗಬೇಕು. ಟಾಸ್ಕ್ ಫೋರ್ಸ್ ಸಮಿತಿಯಲ್ಲಿರುವ ಅಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು ಈ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಚರ್ಚಿಸಲಾಗುವುದು ಎಂದರು.

ದೇವದುರ್ಗ ಶಾಸಕಿಗೆ ಭದ್ರತೆ: ಅಕ್ರಮ ಮರಳು ಸಾಗಣೆ ತಡೆಗೆ ಮುಂದಾಗಿರುವ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ ಅವರಿಗೆ ಬೆದರಿಕೆ ಹಾಕಿದ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಆರಂಭವಾಗಿದೆ, ಪ್ರಕರಣದ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ತಪ್ಪಿತಸ್ಥರಾದರೆ ಕ್ರಮ ಕೈಗೊಳ್ಳಲಿದ್ದಾರೆ. ಶಾಸಕಿ ಮಾತ್ರವಲ್ಲ ಸಾಮಾನ್ಯ ನಾಗರಿಕರಿಗೂ ಭದ್ರತೆ ಒದಗಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ. ಅವರಿಗೆ ಅಗತ್ಯ ರಕ್ಷಣೆ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಖಾಲಿ‌ ಇರುವ ಪೊಲೀಸ್ ಸಿಬ್ಬಂದಿ ಭರ್ತಿಗೆ ಸರ್ಕಾರಕ್ಕೆ ಪ್ರಸ್ರಾವನೆ ಸಲ್ಲಿಸಲಾಗಿದೆ. ಬೇರೆ ಜಿಲ್ಲೆಯಷ್ಟು ತೀವ್ರ ವಿಕೋಪದ ಪರಿಸ್ಥಿತಿ ಇಲ್ಲ. ಪೊಲೀಸರ ಮೇಲಿನ ಒತ್ತಡ ನಿವಾರಣೆಗೆ ಅನೇಕ ಯೋಜನೆ ರೂಪಿಸಲಾಗಿದೆ. ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ, ಅಡ್ಡಿಪಡಿಸುವುದು ಸಂಜ್ಞೆಯ ಅಪರಾಧವಾಗಿದೆ. ಪೊಲೀಸ್ ಇಲಾಖೆ ಪ್ರಜಾಪ್ರಭುತ್ವ ಭದ್ರವಾಗಿಡಲು ಕೆಲಸ ಮಾಡುವ ಒಂದು ವ್ಯವಸ್ಥೆ. ಖಾಕಿಯ ಮೇಲೆ ಸವಾರಿ ಮಾಡಲು ಯತ್ನಿಸಿದರೆ ಸುಮ್ಮನಿರಲ್ಲ, ಅವರು ರಾಜಕೀಯ ನಾಯಕರಾಗಲಿ, ಅಧಿಕಾರಸ್ಥರಾಗಿರಲಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುತ್ತೇವೆ. ಪೊಲೀಸರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಭಯಮುಕ್ತವಾಗಿ ಕೆಲಸ ಮಾಡಬೇಕು ಏನೇ ಅಡ್ಡಿಆತಂಕಗಳಿದ್ದರೂ ಹಿರಿಯ ಅಧಿಕಾರಿಗಳ ನೆರವು ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಲವಂಗದ ಗಮ್ಮತ್ತು ನಿಮಗೆಷ್ಟು ಗೊತ್ತು? ಸಣ್ಣ ಸಾಂಬಾರ ಪದಾರ್ಥದ ಹಿಂದಿದೆ ಬೆಟ್ಟದಷ್ಟು ಆರೋಗ್ಯ ಭಾಗ್ಯ!

ಜಿಲ್ಲೆಯಲ್ಲಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಸಶಕ್ತವಾಗಿದೆ. ಈಗ 10 ವರ್ಷದಲ್ಲಿ ಕಳ್ಳತನ ಆಗುವಷ್ಟು 6 ತಿಂಗಳಲ್ಲಿ ಸೈಬರ್ ಕಳ್ಳತನವಾಗುತ್ತಿವೆ. ಸೈಬರ್ ವಂಚನೆ ತಡೆಗೆ ಪೊಲೀಸರಿಗೆ ಆಧುನಿಕ ತಂತ್ರಜ್ಞಾನ ಸೇರಿ ಎಲ್ಲಾ ರೀತಿಯ ಸಹಾಯ ನೀಡಲಾಗಿದೆ. ಅನೇಕರಿಗೆ ತರಬೇತಿ ನೀಡಿದ್ದರಿಂದ ಪರಿಣಿತರಾಗಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಂಚನೆಗೊಳಗಾದವರು ಗೋಲ್ಡನ್ ಹವರ್ (ಹಣ ಕಳೆದುಕೊಂಡ ಒಂದು‌ ತಾಸಿನೊಳಗಿನ ಅವಧಿ) ನಲ್ಲಿ ಸೈಬರ್ ಠಾಣೆಗೆ ಸಂಪರ್ಕಿಸಿದರೆ ಹಣ ವಾಪಸ್ ಸಿಗಲಿದೆ ತಡವಾಗಿದ್ದಲ್ಲಿ ರಿಕವರಿ ಕಷ್ಟ ಹೀಗಾಗಿ ಸಾರ್ವಜನಿಕರು ಹೆಚ್ಚು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.

Previous articleಲವಂಗದ ಗಮ್ಮತ್ತು ನಿಮಗೆಷ್ಟು ಗೊತ್ತು? ಸಣ್ಣ ಸಾಂಬಾರ ಪದಾರ್ಥದ ಹಿಂದಿದೆ ಬೆಟ್ಟದಷ್ಟು ಆರೋಗ್ಯ ಭಾಗ್ಯ!