ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ : ಸ್ಪೀಕರ್‌ಗೆ R ಅಶೋಕ ದೂರು

0
18

ಬೆಂಗಳೂರು: ವಿಧಾನಸಭೆಯ ವಿಶೇಷ ಅಧಿವೇಶನದ ಮೊದಲ ದಿನವಾದ ಗುರುವಾರ ರಾಜ್ಯ ರಾಜಕೀಯದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾದ ಘಟನೆ ನಡೆದಿದೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೆ, ತಾವೇ ಬರೆದು ತಂದ ಭಾಷಣವನ್ನು ಆರಂಭಿಸಿ ಕೇವಲ ಒಂದೇ ವಾಕ್ಯ ಓದಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸಭಾಂಗಣದಿಂದ ನಿರ್ಗಮಿಸಿದ ಘಟನೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರು ಹೊರಹೋಗುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಶಾಸಕರು ಅವರನ್ನು ಅಡ್ಡಗಟ್ಟಲು ಯತ್ನಿಸಿದರೆಂದು ಆರೋಪಿಸಲಾಗಿದ್ದು, ಈ ನಡೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಠಿಣವಾಗಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದ ಮುಂದೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದಿನವನ್ನು ‘ಕರಾಳ ದಿನ’ ಎಂದು ಕರೆದಿದ್ದಾರೆ.

ಇದನ್ನೂ ಓದಿ:  ತಮಿಳುನಾಡು, ಕೇರಳ ಬಳಿಕ ಕರ್ನಾಟಕದಲ್ಲೂ ರಾಜ್ಯಪಾಲ–ಸರ್ಕಾರ ಭಾಷಣ ಸಂಘರ್ಷ

ಸಂವಿಧಾನದ ಪ್ರಕಾರ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಿ ಸದನವನ್ನು ಉದ್ದೇಶಿಸಿ ಧನ್ಯವಾದ ತಿಳಿಸಿ ನಿರ್ಗಮಿಸಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ರಾಜ್ಯಪಾಲರು ಭಾಷಣವನ್ನು ಸಂಪೂರ್ಣವಾಗಿ ಓದದೇ ಹೊರಡುವ ಅಧಿಕಾರವೂ ಸಂವಿಧಾನದ ಅಡಿಯಲ್ಲಿ ಅವರಿಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿದ್ದು ಗೂಂಡಾಗಿರಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಧಿವೇಶನವನ್ನು ಕಾಂಗ್ರೆಸ್ ಪಕ್ಷ ಕರಾಳ ರೀತಿಯಲ್ಲಿ ನಡೆಸಿದ್ದು, ಸದನದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಅಶೋಕ್ ಆರೋಪಿಸಿದರು. ಇದೇ ರಾಜ್ಯಪಾಲರು ಈ ಹಿಂದೆ ಸರ್ಕಾರ ತಂದ ಅನೇಕ ಮಸೂದೆಗಳಿಗೆ ಸಹಿ ಹಾಕಿದ್ದಾರೆ. ಆಗ ರಾಜ್ಯಪಾಲರು ಸರಿಯಾಗಿದ್ದರು, ಈಗ ಮಾತ್ರ ತಪ್ಪಾಗಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಇದನ್ನೂ ಓದಿ:  ರಾಜ್ಯಪಾಲರಿಂದ ಸಂವಿಧಾನಾತ್ಮಕ ವಿಧಿಗಳ ಸ್ಪಷ್ಟ ಉಲ್ಲಂಘನೆ

ಸದನದಲ್ಲಿ ಅಗೌರವ – ಸ್ಪೀಕರ್‌ಗೆ ದೂರು: ರಾಜ್ಯಪಾಲರಿಗೆ ಅಡ್ಡಿಪಡಿಸಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಆರ್. ಅಶೋಕ್, ಈ ಸಂಬಂಧ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಸದನದಲ್ಲಿ ಅಗೌರವ ತೋರಿದ ಸದಸ್ಯರನ್ನು ಹೊರಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದೂರಿನಲ್ಲಿ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ-27 ಅನ್ನು ಉಲ್ಲೇಖಿಸಿರುವ ಅಶೋಕ್, ಸಂವಿಧಾನದ 175 ಅಥವಾ 176ನೇ ಅನುಚ್ಛೇದದಡಿ ರಾಜ್ಯಪಾಲರು ಭಾಷಣ ಮಾಡುವಾಗ ಅಥವಾ ಸದನದಿಂದ ನಿರ್ಗಮಿಸುವಾಗ ಯಾವುದೇ ಸದಸ್ಯರು ಅಡ್ಡಿ ಅಥವಾ ವಿಘ್ನ ಉಂಟುಮಾಡುವುದು ಗಂಭೀರ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ.

ವಿಡಿಯೋ ನೋಡಿ: ರಾಜ್ಯಪಾಲರನ್ನ ಅಡ್ಡಗಟ್ಟಿ ಕಾಂಗ್ರೆಸ್‌ ಆಕ್ರೋಶ

ರಾಜ್ಯಪಾಲರು ನಿರ್ಗಮಿಸುವ ವೇಳೆ ಅವರನ್ನು ಅಡ್ಡಗಟ್ಟಿ, ತಳ್ಳಾಡಿ ಅಗೌರವ ತೋರಿದ ಸದಸ್ಯರ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

‘ಲೋಕಭವನವನ್ನು ಕಾಂಗ್ರೆಸ್ ಭವನವನ್ನಾಗಿಸುವ ಯತ್ನ’: ಈ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಆರ್. ಅಶೋಕ್, ಲೋಕಭವನವನ್ನು ಕಾಂಗ್ರೆಸ್ ಭವನವನ್ನಾಗಿ ಮಾಡಲು ‘ಕೈ’ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು. ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಉದ್ದೇಶದಿಂದ ಈ ನಾಟಕ ನಡೆಯುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  ಅಂಕಣ ಬರಹ: ಗ್ರಾಮ ಸ್ವರಾಜ್ – ಪಂಚಾಯತರಾಜ್ ಕತ್ತಿಗೆ ಕೈ

ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಆರೋಪಿಸಿದ ಅವರು, ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ನಡೆಸಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.

ವಿಧಾನಸಭೆಯಲ್ಲಿ ನಡೆದ ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಸಂಘರ್ಷ ಮತ್ತು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

Previous articleರಾಜ್ಯಪಾಲರಿಂದ ಸಂವಿಧಾನಾತ್ಮಕ ವಿಧಿಗಳ ಸ್ಪಷ್ಟ ಉಲ್ಲಂಘನೆ