ಅಂಕಣ ಬರಹ: ಗ್ರಾಮ ಸ್ವರಾಜ್ – ಪಂಚಾಯತರಾಜ್ ಕತ್ತಿಗೆ ಕೈ

0
1

ಹಳ್ಳಿಗಳಲ್ಲೀಗ ತಲ್ಲಣ, ತಳಮಳ ಉಂಟಾಗಿದೆ. ಈ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿಗಳ ಚುನಾಯಿತ ಸದಸ್ಯರು ಮಾಜಿಗಳಾಗಲಿದ್ದಾರೆ. ಹಾಗೇ ಆ ಪಂಚಾಯ್ತಿಗಳಿಗೆಲ್ಲ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.

ಅಂದರೆ, ಜನ ಇನ್ನು ತಮ್ಮ ಭಾಗದ ರಸ್ತೆ, ನೀರು, ಸೌಲಭ್ಯ, ಹಕ್ಕು – ಬಾಧ್ಯತೆಗಳ ಬಗ್ಗೆ ಮತ್ತೆ ಅಧಿಕಾರಿಗಳನ್ನು ಬೆನ್ನು ಹತ್ತಬೇಕು! ಅಧಿಕಾರಿಗಳು, ಮೇಲಧಿಕಾರಿಗಳು, ತಮ್ಮ ಮೇಲಧಿಕಾರಿಗಳು, ರಾಜಧಾನಿಯ ಇಲಾಖಾ ಕಾರ್ಯದರ್ಶಿಗಳು, ಆಯುಕ್ತರುಗಳು, ಅಂದರೆ ಬೆಂಗಳೂರಿನ ಮೂರನೇ ಮಹಡಿಯ ಅಣತಿಯಂತೆ ಕಾರ್ಯನಿರ್ವಹಿಸಬೇಕು!!

1983ರಲ್ಲಿ ಅಂದಿನ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ಗ್ರಾಮ ಸ್ವರಾಜ್- ಪಂಚಾಯತ್ ರಾಜ್ ಪರಿಕಲ್ಪನೆಯನ್ನು ಬಿತ್ತಿ ಇದಕ್ಕೊಂದು ತಾತ್ವಿಕ ಸಂವಿಧಾನಾತ್ಮಕ ರೂಪ ನೀಡಿ ಹಳ್ಳಿಯಿಂದ ದಿಲ್ಲಿಯವರೆಗೆ ಜನಾಡಳಿತ ಎಂದು ಘೋಷಿಸಿತ್ತು. ಅದೇ ರೀತಿ ಮಂಡಲ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪರಿಷತ್ತು ಹೀಗೆ ಜನರ ಕೈಗೆ ಆಡಳಿತ ನೀಡಿದ ಸಾಧನೆ ಇಡೀ ದೇಶಕ್ಕೆ ಮಾದರಿಯಾಗಿತ್ತು. ಇದನ್ನು ಕಂಡೇ 1992ರಲ್ಲಿ 73ನೇ ತಿದ್ದುಪಡಿ ತರುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಮತ್ತು ವಿಕೇಂದ್ರೀಕರಣಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ಕೇಂದ್ರ ಕಲ್ಪಿಸಿತು. ಅಂದು ಕೇಂದ್ರದಲ್ಲಿದ್ದುದು ರಾಜೀವ್ ಗಾಂಧಿ ಸರ್ಕಾರ.

ಅಂದಿನ ಜೋಶ್ ವರ್ಷಗಳು ಕಳೆದಂತೆ, ಸರ್ಕಾರಗಳು ಬದಲಾದಂತೆ ಸಡಿಲಗೊಳ್ಳುತ್ತ ಹೋಯಿತು. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳಿಗೆ ಅವಧಿ ಮುಗಿದ ತಕ್ಷಣ ಚುನಾವಣೆ ನಡೆಸಬೇಕು. ಈ ಅವಧಿಯಲ್ಲಿ, ಅಂದರೆ ಚುನಾವಣಗೆ ಕಾಲಾವಕಾಶ ಇರುವ ಆರು ತಿಂಗಳಲ್ಲಿ, ಆಯಾ ಸಂಸ್ಥೆಗಳ ಸದಸ್ಯರ ಅಧಿಕಾರವನ್ನೇ ಮುಂದುವರಿಸಿ, ಚುನಾವಣೆ ನಂತರ ಜನರಿಗೇ ಅಧಿಕಾರ ವಹಿಸಿಕೊಡಬೇಕು ಎನ್ನುವ ಷರತ್ತು ಈ ಕಾಯ್ದೆಯಲ್ಲಿದೆ.

ಈಗ ನೋಡಿ. 2021 ಮೇ ಯಿಂದ ಜಿಲ್ಲಾ ಪಂಚಾಯ್ತಿ – ತಾಲ್ಲೂಕು ಪಂಚಾಯ್ತಿಗಳಿಗೆ ಚುನಾವಣೆಯನ್ನೇ ನಡೆಸಿಲ್ಲ! ಇವುಗಳ ಆಡಳಿತ ಅಧಿಕಾರಿಗಳಿಂದ ಮತ್ತು ವಿಧಾನಸೌಧದಿಂದ ನಡೆಯುತ್ತಿದೆ.

ಈ ಸಾಲಿಗೆ 5,948 ಗ್ರಾಮ ಪಂಚಾಯ್ತಿಗಳು ಸೇರಿಕೊಂಡು, ಅಧಿಕಾರಿಗಳ ಕಪಿಮುಷ್ಟಿಯಲ್ಲಿ, ಸರ್ಕಾರದ ಅಣತಿಯಲ್ಲಿ ಇರುವಂತೆ ಆಗಿದೆ. 95 ಸಾವಿರ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು ಈ ತಿಂಗಳಿನಲ್ಲಿ ಅವಧಿ ಮುಗಿದು ಅಧಿಕಾರ ಕಳೆದುಕೊಳ್ಳಲಿದ್ದಾರೆ. ರಾಜ್ಯದ 31 ಜಿಲ್ಲಾ ಪಂಚಾಯ್ತಿಗಳು, 241 ತಾಲ್ಲೂಕು ಪಂಚಾಯ್ತಿಗಳು ಐದು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೇ ಬಸವಳಿದಿವೆ. ಅಂದರೆ ಹೆಚ್ಚೂ ಕಡಿಮೆ ಒಂದು ಅವಧಿಯ ಜನರ ಹಕ್ಕನ್ನೇ ಕಿತ್ತುಕೊಂಡಂತೆ ಆಗಿದೆ.

ಗ್ರಾಮ ಪಂಚಾಯತ್‌ಗಳ ಅವಧಿ ಮುಗಿದದ್ದು 2019ರಲ್ಲಿ. ಆಗ ಕೋವಿಡ್ ಬಂತು ಎಂದು ಚುನಾವಣೆಗಳನ್ನು ಮುಂದೂಡಲಾಯಿತು. ಅಂತೂ ಇಂತು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇಲೆ, ಪಂಚಾಯ್ತಿಗಳ ಚುನಾವಣೆ ನಡೆಯಿತು. ರಾಜಕೀಯ ಚಿಹ್ನೆಗಳು ಅಧಿಕೃತವಾಗಿ ಇರದಿದ್ದರೂ ಒಂದು ಸ್ಥಳೀಯ ಆಡಳಿತ ಅಸ್ತಿತ್ವಕ್ಕೆ ಬಂದಂತಾಗಿತ್ತು. ಆದರೆ 2021ರ ಅಂತ್ಯಕ್ಕೆ ರಾಜ್ಯದ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿಗಳ ಅವಧಿ ಮುಕ್ತಾಯವಾದಾಗ ಹೊಸ ಹೊಸ ಡ್ರಾಮಾಗಳು ಶುರುವಾದವು. .ಜಿಪಂ ಮತ್ತು ತಾ.ಪಂ ಚುನಾವಣೆಗಳನ್ನು 2021ರ ಜೂನ್‌ನಲ್ಲಿಯೇ ನಡೆಸಲು ಚುನಾವಣಾ ಆಯೋಗ ಸಿದ್ಧತೆಗಳನ್ನು ಆರಂಭಿಸಿ, ಕ್ಷೇತ್ರ ಪುನರ್ವಿಂಗಡನೆ ಮಾಡಿ, ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ಮೀಸಲಾತಿ ಕರಡು ಪ್ರತಿಯನ್ನೂ ಪ್ರಕಟಿಸಿತ್ತು. ಆದರೆ ಅಂದಿನ ಸರ್ಕಾರಕ್ಕೆ ಇದು ಬೇಕಿರಲಿಲ್ಲ.

ಕ್ಷೇತ್ರ ಪುನರ್ವಿಂಗಡನೆ ಮತ್ತು ಮೀಸಲಾತಿ ಅಧಿಕಾರವನ್ನು ಸರ್ಕಾರ ಆಯೋಗದಿಂದ ಹಿಂದೆ ಪಡೆಯಿತು. ಬಿಜೆಪಿ ಜೊತೆ ಕೈಜೋಡಿಸಿದ್ದು ಕೂಡ ಅಂದಿನ ಪ್ರತಿ ಪಕ್ಷ ಕಾಂಗ್ರೆಸ್ಸೇ! ಕ್ಷೇತ್ರ ಸೀಮಾ ನಿರ್ಣಯಕ್ಕೆ ಆಯೋಗವನ್ನು ರಚಿಸಿ ಚುನಾವಣೆಗಳನ್ನು ಮುಂದಕ್ಕೆ ಹಾಕುವ ತಂತ್ರ ಯಶಸ್ವಿಯಾಯಿತು.

ಸರಿ. ಈ ಆಯೋಗ ಎಂದಿನಂತೆ ನಿಧಾನಗತಿಯಲ್ಲೇ ಕಾರ್ಯಾರಂಭಿಸಿತು. ಆಗ ಮತ್ತೆ ಚುನಾವಣಾ ಆಯೋಗ ಹೈಕೋರ್ಟ್ ಮೊರೆಹೋಯಿತು. ಕ್ಷೇತ್ರ ಪುನರ್ವಿಂಗಡನೆ ಮತ್ತು ಸದಸ್ಯರ ಸಂಖ್ಯೆಗಳನ್ನು ನಿಗದಿಪಡಿಸಿದ್ದ ಆಯೋಗದ ಶಿಫಾರಸುಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಸೂಚನೆಯನ್ನೇನೋ ಹೊರಡಿಸಿತು. ಆದರೆ ಮೀಸಲಾತಿಯನ್ನು ನಿಗದಿಪಡಿಸಲೇ ಇಲ್ಲ!.

ಸರ್ವೋಚ್ಚ ನ್ಯಾಯಾಲಯದ ಚಾಟಿಯ ನಂತರ ಈಗ ಮೀಸಲಾತಿ ಪಟ್ಟಿಯನ್ನು ಕಾಲಮಿತಿಯಲ್ಲಿ ಅಂತಿಮಗೊಳಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಈಗ 5,948 ಗ್ರಾಮ ಪಂಚಾಯ್ತಿಗಳು ಅವಧಿ ಮುಗಿದಿವೆ.. ಅಂದರೆ ಸರಿಸುಮಾರು 95 ಸಾವಿರ ಚುನಾಯಿತ ಪ್ರತಿನಿಧಿಗಳು ಕೂಡ ಸೇರಿಕೊಂಡಿದ್ದಾರೆ. ಹೊಸ ಯೋಚನೆಯನ್ನೂ ಕೂಡ ಹರಿಬಿಡಲಾಗಿದೆ. ಜಿಪಂ, ತಾಪಂ, ಗ್ರಾಪಂಗಳಿಗೆ ಒಂದೇ ಸಾರೆ ಚುನಾವಣೆ ನಡೆಸಬೇಕು. `ಒಂದು ಗ್ರಾಮ ಒಂದೇ ಚುನಾವಣೆ’ ಮತದಾರರಿಗೂ ಅನುಕೂಲ. ಖರ್ಚು ವೆಚ್ಚ ಕಡಿಮೆ ಎನ್ನುವುದು.

ಆದಾಗ್ಯೂ ಕೂಡ ಇದಕ್ಕೆ ಸಾಕಷ್ಟು ತೊಡಕುಗಳು ಎದುರಾಗಿವೆ. ಪಂಚಾಯ್ತಿ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಮುಗಿದರೂ ಇವೇ ಸಮಿತಿಗಳನ್ನು ಆರು ತಿಂಗಳ ಕಾಲ ವಿಸ್ತರಿಸಿ ಎನ್ನುವುದು ಎಲ್ಲರ ಆಗ್ರಹ. ಏಕೆಂದರೆ ಪಂಚಾಯ್ತಿಗಳ ಬಜೆಟ್, ಯೋಜನೆ, ಸ್ಥಳೀಯ ಸಮಸ್ಯೆಗಳು, ಸಂಪನ್ಮೂಲ ಹಂಚಿಕೆ ಎಲ್ಲವೂ ಕೂಡ ಸ್ಥಳೀಯರಿಂದಲೇ ಆಗಬೇಕಾಗುತ್ತದೆ. ಇನ್ನಾರು ತಿಂಗಳು ವಿಸ್ತರಿಸಿದರೆ ಇವಕ್ಕೆ ಪರಿಹಾರ ದೊರೆಯುತ್ತದೆ. ಹಾಗೆಯೇ ಸ್ಥಳೀಯ ಆಯವ್ಯಯಗಳಿಗೆ ಕೇಂದ್ರದ ಅನುದಾನಕ್ಕೆ ಪೂರಕವಾಗುತ್ತದೆ ಎನ್ನುವುದು ಕೋರಿಕೆ. ಸಂವಿಧಾನದಲ್ಲಿ, ಹಾಗೂ ಗ್ರಾಮ ಪಂಚಾಯ್ತಿ ಕಾಯ್ದೆಯಲ್ಲೂ ಕೂಡ ಅವಕಾಶ ಇದೆ. ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಅಧಿನಿಯಮ 1993ರ ಅನ್ವಯ, 1990ರಲ್ಲಿ ಅವಧಿ ಮುಗಿದ ಪಂಚಾಯತ್ ಸದಸ್ಯರನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿತ್ತು. ಅದೇ ಪ್ರಬುದ್ಧತೆಯನ್ನು ಪ್ರಸ್ತುತ ಸರ್ಕಾರವೂ ತೋರಬೇಕಿತ್ತು.

ತಮಾಷೆ ಎಂದರೆ 2020ರಲ್ಲಿ ಕೋವಿಡ್ ಕಾರಣದಿಂದ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ ಮತ್ತು ಅಂದಿನ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಜಂಟಿ ಸುದ್ಧಿಗೋಷ್ಠಿ ನಡೆಸಿ ಸದ್ಯದ ಆಡಳಿತ ಮಂಡಳಿ ಅವಧಿಯನ್ನೇ ಆರು ತಿಂಗಳು ವಿಸ್ತರಿಸುವಂತೆ ಅಂದಿನ ಸಿಎಂ ಯಡಿಯೂರಪ್ಪನವರನ್ನು ಒತ್ತಾಯಿಸಿದ್ದರು. ಈಗ ಅವರೇ ಅಧಿಕಾರದಲ್ಲಿದ್ದಾರೆ. ಅವಧಿ ಮುಗಿದಿರುವ ಪಂಚಾಯ್ತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶಿಸಿದ್ದಾರೆ !

ಇತ್ತೀಚೆಗಷ್ಟೇ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಹೈಕೋರ್ಟಿಗೆ ಜಿಲ್ಲಾ ಪಂಚಾಯ್ತಿ- ತಾಲ್ಲೂಕು ಪಂಚಾಯ್ತಿ ಚುನಾವಣೆಗಳನ್ನು ಶೀಘ್ರ ನಡೆಸುವ, ಮೀಸಲಾತಿಯನ್ನು ಪ್ರಕಟಿಸುವ ಲಿಖಿತ ಅಫಿಡೆವಿಟ್‌ಅನ್ನು ಸರ್ಕಾರ ನೀಡಿದೆ. ಪಂಚಾಯ್ತಿಗಳ ಚುನಾವಣೆ ತಕ್ಷಣ ನಡೆಸಿ ಎನ್ನುವುದು ಈ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾಗುವ ವಿಧಾನ ಪರಿಷತ್ತಿನ ಸದಸ್ಯರ ಆಗ್ರಹ ಕೂಡ. ಏಕೆಂದರೆ ಇವು ನಡೆಯದಿದ್ದರೆ ಎಂಎಲ್‌ಸಿ ಸ್ಥಾನಕ್ಕೆ ಕತ್ತರಿ ಬೀಳುತ್ತದಲ್ಲ!

ಪಂಚಾಯ್ತಿ ವ್ಯವಸ್ಥೆ ದುರ್ಬಲಗೊಳಿಸಿದರೆ ಏನಾದೀತು ಎನ್ನುವುದಕ್ಕೆ ಕರ್ನಾಟಕವೇ ಉದಾಹರಣೆ. ಜಿಪಂ- ತಾಪಂ ಇಲ್ಲದ ಕರ್ನಾಟಕಕ್ಕೆ ಸುಮಾರು 2500 ಸಾವಿರ ಕೋಟಿಯಷ್ಟು ಅನುದಾನವನ್ನೇ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಕಾರಣ, ಅಲ್ಲಿನ ಜನರಿಂದ ಒಪ್ಪಿಗೆ ಪಡೆದು ಯೋಜನೆಯ ವಿವರಗಳನ್ನು ಕೇಂದ್ರಕ್ಕೆ ಸಲ್ಲಿಸಲಾಗಲಿಲ್ಲ! ಆದರೆ ವಾಸ್ತವ ಇರುವುದು, ಪಂಚಾಯತ್ ಚುನಾವಣೆ ನಡೆಸುವ ಮನಸ್ಸು ಸರ್ಕಾರಕ್ಕೂ ಇಲ್ಲ, ಶಾಸಕರಿಗೂ ಇಲ್ಲ, ಮಂತ್ರಿಗಳಿಗೂ ಇಲ್ಲ. ಏಕೆಂದರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಇಡೀ ಜಿಲ್ಲೆಯ ದರ್ಬಾರು ನಡೆಸಬಹುದು! ಈ ನಡುವೆ ಚುನಾವಣಾ ಆಯೋಗ ಮತಪತ್ರದ ಮೂಲಕವೇ ಚುನಾವಣೆ ನಡೆಸುವುದಾಗಿ ಘೋಷಿಸಿದೆ. ಗ್ರಾಮಗಳ ಬಯಕೆ ಕೂಡ ಹಾಗೇ ಇದೆ. ಏಕೆಂದರೆ ಹಳ್ಳಿಗಳಲ್ಲಿ ಇಂದಿಗೂ ಕೂಡ ಪಂಚಾಯ್ತಿ ಚುನಾವಣೆಯನ್ನು ಹಬ್ಬದಂತೇ ಕಾಣುತ್ತಾರೆ.

ಕಳೆದ ಎರಡು ದಶಕದಿಂದ ಪಂಚಾಯತ್ ಸ್ಥಾನಕ್ಕೆ ಪಕ್ಷಗಳ ಚಿಹ್ನೆ ಇರಲಿಲ್ಲ. ಈಗ ಪಕ್ಷಗಳ ಚಿಹ್ನೆಯಡಿಯಲ್ಲೇ ಏಕೆ ಚುನಾವಣೆ ನಡೆಸಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಕೇಳುತ್ತಿದ್ದಾರೆ.

ಗ್ರಾಮ ಸ್ವರಾಜ್-ವಿಕೇಂದ್ರೀಕರಣ ಎಂದರೆ ಕರ್ನಾಟಕ. ರಾಜೀವ ಗಾಂಧಿಗೆ ಸ್ಫೂರ್ತಿ ನೀಡಿದ ರಾಜ್ಯವಿದು. ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷರಾಗಿದ್ದಾಗ ಧಾರವಾಡ ಬೇಲೂರಿನಲ್ಲಿ ನಡೆಸಿದ ರಾಷ್ಟ್ರೀಯ ಗ್ರಾಮ ಪಂಚಾಯ್ತಿ ಸಮಾವೇಶ… ಆಗ ಪಂಚಾಯ್ತಿ ವ್ಯವಸ್ಥೆಗೆ ಬಲ ತುಂಬಲು ಮೊಳಗಿದ `ಬೇಲೂರು ಘೋಷಣೆ’ ಮತ್ತು ಈ ಘೋಷಣೆಯನ್ವಯ ಜನನಿತವಾಗಿದ್ದ ಕಾರ್ಯಕ್ರಮಗಳೆಲ್ಲವುಗಳನ್ನೂ ಈಗ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ, ಖರ್ಗೆ ನೆನಪು ಮಾಡಿಕೊಂಡರೆ ಎಷ್ಟು ಚೆನ್ನ? ಆ ಸಮಾವೇಶ ಮತ್ತು ಘೋಷಣೆಗಳು ಬೂಟಾಟಿಕೆ ಅಲ್ಲ ಎನ್ನುವುದನ್ನು ಸಾಬೀತುಪಡಿಸಲು ಇದೊಂದು ಅವಕಾಶವಲ್ಲವೇ!?

Previous articleಅಭಿಷೇಕ್‌, ರಿಂಕು ಅಬ್ಬರದ ಬ್ಯಾಟಿಂಗ್‌: ಭಾರತಕ್ಕೆ ಭರ್ಜರಿ ಜಯ