ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಮಾಡಲು ನಿರ್ಧರಿಸಿರುವ ಕಾಂಗ್ರೆಸ್‌ನ ನಾಯಕರುಗಳು ಇವಿಎಂನಿಂದ ಆಯ್ಕೆಯಾಗಿ ಅದರ ಮೇಲೆ ನಂಬಿಕೆ ಇಲ್ಲ ಅನ್ನುವುದು ರಾಜಕೀಯ ಭಂಡತನ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಏನು ಬೇಕಾದರೂ ಮಾಡುತ್ತದೆ. ಇದು ವ್ಯವಸ್ಥೆಯನ್ನೇ ಬುಡಮೇಲು ಮಾಡುವುದನ್ನು ತೊರಿಸುತ್ತದೆ. 1980ರ ದಶಕದವರೆಗೂ ಬ್ಯಾಲೆಟ್ ಪೇಪರ್ ವ್ಯವಸ್ಥೆ ಇತ್ತು. ಈಗ ಮತ್ತೆ ಬ್ಯಾಲೆಟ್ ಪೇಪರ್ ವ್ಯವಸ್ಥೆ ತಂದು ಕಾಂಗ್ರೆಸ್‌ನವರು 40 ವರ್ಷ ಹಿಂದೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸ್ಪಷ್ಟ ಭೂತಕಾಲದಲ್ಲಿರುವ ಪಕ್ಷ. ಇವರಿಗೆ ಪ್ರಸ್ತುತತೆ ಬೇಕಿಲ್ಲ. ಇವರನ್ನು ಜನರು ಭೂತಕಾಲದ ಇತಿಹಾಸಕ್ಕೆ ಕಳುಹಿಸುತ್ತಾರೆ. ಕಾಂಗ್ರೆಸ್ ರಾಜ್ಯದ ಪ್ರಗತಿಪರ ಚಿಂತನೆಗೆ ವೈಜ್ಞಾನಿಕತೆಗೆ ದೊಡ್ಡ ಮೊಸ ಮಾಡುತ್ತಿದೆ ಎಂದು ಹೇಳಿದ್ದಾರೆ.






















