ಚಿತ್ರದುರ್ಗ: ಕ್ಷೇತ್ರದ ಅಭಿವೃದ್ಧಿ ಮತ್ತು ಶಾಸಕರ ಜನಪ್ರಿಯತೆಯನ್ನು ಸಹಿಸಲಾಗದ ಬಿಜೆಪಿ ಮುಖಂಡರು, ಹತಾಶರಾಗಿ ಜಮೀನು ನೋಂದಣಿ ವಿಚಾರ ಮುಂದಿಟ್ಟುಕೊಂಡು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಶಾಸಕ ಟಿ. ರಘುಮೂರ್ತಿ ಅವರು ಜಾತ್ಯಾತೀತವಾಗಿ ಮತ್ತು ಪಕ್ಷಾತೀತವಾಗಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರು ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎನ್‌ಓಸಿ ವಿಚಾರದಲ್ಲಿ ಸತ್ಯಾಸತ್ಯತೆ: ಪರಶುರಾಂಪುರ ಹೋಬಳಿಯ ಪಗಡಲಬಂಡೆ ಗ್ರಾಮದ ಸರ್ವೆ ನಂ. 49/2ರ ದರಕಾಸ್ತು ಜಮೀನು ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ, ದಿನಾಂಕ ಜನವರಿ 16ರಂದು ಗ್ರಾಮಸ್ಥರೇ ಖುದ್ದು ಶಾಸಕರಿಗೆ ಕರೆ ಮಾಡಿ, ಸದರಿ ಜಮೀನಿನ ಎನ್.ಓ.ಸಿ ಬಗ್ಗೆ ಅನುಮಾನಗಳಿದ್ದು, ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದರು. ಅಲ್ಲದೆ ಇದೇ ಜಮೀನು ಪಿ.ಟಿ.ಸಿ.ಎಲ್ ಕಾಯ್ದೆಗೆ ಒಳಪಡುತ್ತದೆಯೇ ಎಂಬುದನ್ನು ಪರಿಶೀಲಿಸುವಂತೆ ಜ. 12ರಂದು ವೃಂದಾವನಹಳ್ಳಿ ಗ್ರಾಮಸ್ಥರು ತಹಶೀಲ್ದಾರ್‌ಗೆ ದೂರು ನೀಡಿದ್ದರು.
ಇದನ್ನೂ ಓದಿ: ಸಂಸದ ಬಿವೈ ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಸಾರ್ವಜನಿಕರ ಹಿತದೃಷ್ಟಿಯಿಂದ ಶಾಸಕರು ದಾಖಲೆ ಪರಿಶೀಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸುವುದು ಅವರ ಕರ್ತವ್ಯ. ಆದರೆ, ಇದನ್ನೇ ದೊಡ್ಡ ಪ್ರಮಾದವೆಂಬಂತೆ ಬಿಂಬಿಸಿ, ಕೆಆರ್‌ಎಸ್ ಪಕ್ಷದ ಮಹೇಶ್ ಎಂಬುವವರೊಂದಿಗೆ ಸೇರಿ ನೋಂದಣಿ ಕಚೇರಿ ಬಳಿ ಗಲಾಟೆ ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಿಬಿಟ್ಟಿರುವುದು ಖಂಡನೀಯ ಎಂದು ಮುಖಂಡರು ಸ್ಪಷ್ಟಪಡಿಸಿದರು.
ಸೂರನಹಳ್ಳಿ ಶ್ರೀನಿವಾಸ್ ವಿರುದ್ಧ ವಾಗ್ದಾಳಿ: ಬಿಜೆಪಿ ಮುಖಂಡ ಸೂರನಹಳ್ಳಿ ಶ್ರೀನಿವಾಸ್ ಅವರ ವರ್ತನೆ ಕ್ಷೇತ್ರದ ಜನರಿಗೆ ತಿಳಿಯದ ಸಂಗತಿಯೇನಲ್ಲ. ಹಿಂದೆ ಬಿಜೆಪಿ ಆಡಳಿತವಿದ್ದಾಗ ತಾಲೂಕು ಕಚೇರಿಗೆ ನುಗ್ಗಿ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗಿ ಜೈಲು ಪಾಲಾಗಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾನಕ್ಕೆ ಎರಡು ದಿನ ಇರುವಾಗ, ತಾವೇ ತಮ್ಮ ವಾಹನ ಜಖಂಗೊಳಿಸಿಕೊಂಡು, ಹಣೆಗೆ ಗಾಯ ಮಾಡಿಕೊಂಡು ಶಾಸಕರ ಮೇಲೆ ಸುಳ್ಳು ದೂರು ದಾಖಲಿಸಿದ್ದರು. ಇಂತಹ ಪ್ರವೃತ್ತಿಯವರು ಈಗ ಶಾಸಕರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಗೂಂಡಾ ಸಂಸ್ಕೃತಿ ಕಾಂಗ್ರೆಸ್‌ಗಿಲ್ಲ: ಶಾಸಕ ರಘುಮೂರ್ತಿ ಅವರು ಶಾಂತಿಪ್ರಿಯರು. ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲೂ ತಮಗಿಂತ ಹಿರಿಯರಾದ ತಿಪ್ಪೇಸ್ವಾಮಿಯವರಿಗೆ ಪ್ರಶಸ್ತಿ ಸಿಗಲಿ ಎಂದು ಶಿಫಾರಸು ಮಾಡಿದ ಹೃದಯವಂತಿಕೆ ಅವರದ್ದು. ಕಾಂಗ್ರೆಸ್ ಎಂದಿಗೂ ಗೂಂಡಾ ಸಂಸ್ಕೃತಿಯನ್ನು ಪೋಷಿಸುವುದಿಲ್ಲ. ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಬಿಜೆಪಿಯವರೇ ಗೂಂಡಾ ಪ್ರವೃತ್ತಿಯವರು ಎಂದು ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದರು.
ಬಿಜೆಪಿ ಮುಖಂಡರು ನಿರಾಧಾರ ಆರೋಪಗಳನ್ನು ನಿಲ್ಲಿಸಿ, ಕ್ಷೇತ್ರದ ಅಭಿವೃದ್ಧಿಗೆ ಪೂರಕ ಸಲಹೆಗಳನ್ನು ನೀಡಲಿ. ಅದನ್ನು ಬಿಟ್ಟು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.























