ಗೋ ಕಟ್ಟೆಯಲ್ಲಿ ಈಜಲು ಹೋಗಿ 10 ವರ್ಷದ ಬಾಲಕ ಸಾವು

0
5

ರಾಗಿಮಸಲವಾಡದಲ್ಲಿ ದಾರುಣ ಘಟನೆ: ಬೆಳಗಿನ ಜಾವ ಶೋಧ ಕಾರ್ಯದ ವೇಳೆ ಬಾಲಕ ಮೃತದೇಹ ಪತ್ತೆ

ಹರಪ್ಪನಹಳ್ಳಿ (ವಿಜಯನಗರ ಜಿಲ್ಲೆ): ಕೆರೆಯಲ್ಲಿ ಈಜಲು ಹೋಗಿದ್ದ 10 ವರ್ಷದ ಬಾಲಕನೊಬ್ಬ ಗುಂಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಸಿದ್ಧಾರ್ಥ (10) ಎಂದು ಗುರುತಿಸಲಾಗಿದ್ದು, ಇವರು ಭಾಗಮ್ಯ ಹಾಗೂ ಹನುಮಂತಪ್ಪ ದಂಪತಿಯ ಸುಪುತ್ರರಾಗಿದ್ದಾರೆ.

ನಿನ್ನೆ ಸಾಯಂಕಾಲದ ವೇಳೆಯಲ್ಲಿ ಸಿದ್ಧಾರ್ಥ ಸೇರಿದಂತೆ ಮೂವರು ಬಾಲಕರು ಗ್ರಾಮದ ಗೋ ಕಟ್ಟೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಕೆರೆಯೊಳಗಿನ ಆಳವಾದ ಗುಂಡಿಯಲ್ಲಿ ಸಿಲುಕಿದ ಸಿದ್ಧಾರ್ಥ ನೀರಿನಲ್ಲಿ ಮುಳುಗಿದ್ದಾನೆ. ಉಳಿದ ಇಬ್ಬರು ಬಾಲಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಿ

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ನುರಿತ ಈಜುಪಟುಗಳ ಸಹಾಯದಿಂದ ಬಾಲಕನಿಗಾಗಿ ಶೋಧ ನಡೆಸಲಾಯಿತು. ಕೆರೆಯ ಆಳ ಹೆಚ್ಚಿದ್ದರಿಂದ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗಿತ್ತು. ಇದರಿಂದ ಗ್ರಾಮಸ್ಥರು ಜೆಸಿಬಿ ಮೂಲಕ ಗೋ ಕಟ್ಟೆಯ ನೀರನ್ನು ಹೊರಹಾಕುವ ಪ್ರಯತ್ನ ನಡೆಸಿದರು.

ಬೆಳಗಿನ ಜಾವ ಶೋಧ ಕಾರ್ಯದ ವೇಳೆ ಬಾಲಕ ಸಿದ್ಧಾರ್ಥನ ಮೃತದೇಹ ಪತ್ತೆಯಾಯಿತು. ಏಕೈಕ ಗಂಡು ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.

ಇದನ್ನೂ ಓದಿ: ನಾನು ಮುಂದಿನ ಚುನಾವಣೆಯ ಸಿಎಂ ಆಕಾಂಕ್ಷಿ

ಸ್ಥಳಕ್ಕೆ ಹಲವಾಗಿಲು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ತೆಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಹಲವಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Previous articleಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಿ