ಜನವರಿ 23ಕ್ಕೆ ರಾಜ್ಯಾದ್ಯಂತ ‘ಕಲ್ಟ್’ ಅಬ್ಬರ
ಈವರೆಗೂ ಹಾಡುಗಳ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದ ‘ಕಲ್ಟ್’ ಸಿನಿಮಾ ಇದೀಗ ಟ್ರೇಲರ್ ಬಿಡುಗಡೆ ಮೂಲಕ ಮತ್ತಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಜನವರಿ 23ರಂದು ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದ್ದು, ಮಾಸ್ ಹಾಗೂ ಕ್ಲಾಸ್ ಅಂಶಗಳ ಮಿಶ್ರಣದೊಂದಿಗೆ ‘ಕಲ್ಟ್’ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಟ್ರೇಲರ್‌ನಲ್ಲಿ ನಾಯಕ ಝೈದ್ ಖಾನ್ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ವೈವಿಧ್ಯತೆ ಸಿನಿರಸಿಕರನ್ನು ಸೆಳೆಯುತ್ತಿದೆ. ಹಳ್ಳಿ ಹುಡುಗನ ಸರಳ ಲುಕ್‌ನಿಂದ ಹಿಡಿದು, ಸಿಟಿ ಹುಡುಗನ ಸ್ಟೈಲಿಷ್ ಅವತಾರವರೆಗೂ ಝೈದ್ ವಿಭಿನ್ನ ರೋಲ್‌ಗಳಲ್ಲಿ ಮಿಂಚು ಹರಿಸಿದ್ದಾರೆ. ಖಡಕ್ ಡೈಲಾಗ್‌ಗಳು, ರಗಡ್ ಕ್ಯಾರೆಕ್ಟರ್‌ಗಳು ಹಾಗೂ ವೇಗದ ಕಟ್‌ಗಳ ಮೂಲಕ ಟ್ರೇಲರ್ ಅನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ನಿರ್ದೇಶಕ ಅನಿಲ್ ಕುಮಾರ್ ಕಟ್ಟಿಕೊಟ್ಟಿದ್ದಾರೆ.
ನಾಯಕಿಯರಾಗಿ ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಬೋಲ್ಡ್ ಮತ್ತು ಪವರ್‌ಫುಲ್ ಲುಕ್‌ನಲ್ಲಿ ಮಿಂಚಿದ್ದು, ‘ಏಕ್ ಲವ್ ಯಾ’ ನಂತರ ಮತ್ತೊಮ್ಮೆ ಸಖತ್ ಇಂಪ್ಯಾಕ್ಟ್ ಕೊಟ್ಟಿದ್ದಾರೆ. ಮಲೈಕಾ ವಸುಪಾಲ್ ದೇಸಿ ಹುಡುಗಿಯ ಪಾತ್ರದಲ್ಲಿ ಕಂಗೊಳಿಸಿದ್ದು, ಅವರ ಪಾತ್ರಕ್ಕೂ ಕಥೆಯಲ್ಲಿ ಪ್ರಮುಖ ಸ್ಥಾನವಿದೆ ಎಂಬ ಸುಳಿವು ಟ್ರೇಲರ್ ನೀಡುತ್ತದೆ.
ಟ್ರೇಲರ್ ಕುರಿತು ಮಾತನಾಡಿದ ನಿರ್ದೇಶಕ ಅನಿಲ್ ಕುಮಾರ್, “ಈ ಸಿನಿಮಾದಲ್ಲಿ ಸಾಕಷ್ಟು ವಿಷಯಗಳಿವೆ. ಆದರೆ ಟ್ರೇಲರ್‌ನಲ್ಲಿ ಎಲ್ಲವನ್ನೂ ತೋರಿಸಲು ಸಾಧ್ಯವಿಲ್ಲ. ಎಷ್ಟು ಬೇಕೋ ಅಷ್ಟನ್ನು ಮಾತ್ರ ತೋರಿಸಿದ್ದೇವೆ. ಇನ್ನೂ ಕೆಲವು ಅಚ್ಚರಿಗಳು ಸಿನಿಮಾದಲ್ಲಿವೆ. ಥಿಯೇಟರ್‌ನಲ್ಲಿ ನೋಡಿದಾಗ ಪ್ರೇಕ್ಷಕರಿಗೆ ಇನ್ನಷ್ಟು ಎಂಜಾಯ್ ಆಗುತ್ತದೆ” ಎಂದು ಹೇಳಿದ್ದಾರೆ.
ಚಿತ್ರದ ಪ್ರಚಾರದ ಬಗ್ಗೆ ಮಾತನಾಡಿದ ನಾಯಕ ಝೈದ್ ಖಾನ್, “ಈ ಸಿನಿಮಾಕ್ಕಾಗಿ ನಾನು ಎಲೆಕ್ಷನ್ ಕ್ಯಾಂಪೇನ್ ರೀತಿಯಲ್ಲಿ ಪ್ರಚಾರ ಮಾಡಿದ್ದೇನೆ. ಹಳ್ಳಿ ಹಳ್ಳಿಗಳಿಗೆ ಹೋಗಿ ಜನರನ್ನು ನೇರವಾಗಿ ಭೇಟಿಯಾಗಿ ‘ಕಲ್ಟ್’ ಬಗ್ಗೆ ಮಾತನಾಡಿದ್ದೇವೆ. ಜನರು ಸಿನಿಮಾ ಮೇಲೆ ವಿಶ್ವಾಸ ಇಟ್ಟು ಬೆಂಬಲ ಕೊಡುತ್ತಾರೆ ಎಂಬ ನಂಬಿಕೆ ಇದೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ನಾಯಕಿಯರಲ್ಲಿ ಒಬ್ಬರಾದ ರಚಿತಾ ರಾಮ್, “ಈ ಸಿನಿಮಾದಲ್ಲಿ ನನ್ನ ತಂದೆಯ ಪಾತ್ರವನ್ನು ರಂಗಾಯಣ ರಘು ನಿರ್ವಹಿಸಿದ್ದಾರೆ. ಅವರ ಜೊತೆ ನಟಿಸುವ ಅನುಭವ ಬಹಳ ವಿಶೇಷವಾಗಿತ್ತು. ನಮ್ಮಿಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದ್ದ ಕಾರಣ ದೃಶ್ಯಗಳೆಲ್ಲ ನೈಜವಾಗಿ ಮೂಡಿಬಂದಿವೆ” ಎಂದು ಹೇಳಿದರು.
ಇನ್ನು ಮಲೈಕಾ ವಸುಪಾಲ್, “ಈ ಚಿತ್ರ ನನ್ನ ಕರಿಯರ್‌ಗೆ ಹೊಸ ಮೆಟ್ಟಿಲಾಗಲಿದೆ ಎಂಬ ಭರವಸೆಯಿದೆ. ಟ್ರೇಲರ್‌ನಲ್ಲಿ ಕಾಣಿಸದ ನನ್ನ ಇನ್ನೊಂದು ಶೇಡ್ ಸಿನಿಮಾದಲ್ಲಿ ಇದೆ. ಅದು ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತದೆ” ಎಂದು ಕುತೂಹಲ ಹೆಚ್ಚಿಸಿದರು.
ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುವ ‘ಕಲ್ಟ್’ ಚಿತ್ರವನ್ನು ‘ಲೋಕಿ ಸಿನಿಮಾಸ್’ ಬ್ಯಾನರ್‌ನಲ್ಲಿ ನಿರ್ಮಿಸಲಾಗಿದ್ದು, ಸಂಗೀತಕ್ಕೆ ಅರ್ಜುನ್ ಜನ್ಯ ಸ್ಪಂದನೆ ನೀಡಿದ್ದಾರೆ. ಮಾಸ್ ಎಂಟರ್ಟೈನ್ಮೆಂಟ್ ಜೊತೆಗೆ ಕ್ಲಾಸ್ ಟಚ್ ನೀಡುವ ‘ಕಲ್ಟ್’ ಜನವರಿ 23ರಂದು ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ.























