ಶಿವಮೊಗ್ಗ: ನೂತನ ಡಿಸಿ ಹೆಸರಿನಲ್ಲಿ ವಾಟ್ಸಪ್ ಸಂದೇಶದ ಮೂಲಕ ಸೈಬರ್ ವಂಚಕರು ಹಣ ವಸೂಲಿಗೆ ಇಳಿದಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಪ್ರಭುಲಿಂಗ ಕವಳಿಕಟ್ಟಿ ಅವರ ಹೆಸರಿನಲ್ಲಿ ಸೈಬರ್ ಖದೀಮರು ಸಂದೇಶ ಕಳುಹಿಸುತ್ತಿದ್ದಾರೆ. ಸ್ವತಃ ಡಿಸಿ ಅವರೇ ಇದೀಗ ಸ್ಪಷ್ಟನೆ ನೀಡಿದ್ದು, ಯಾರಿಗಾದರೂ ಪ್ರಭುಲಿಂಗ ಕವಳಿಕಟ್ಟಿ ಹೆಸರಿನಲ್ಲಿ ವಾಟ್ಸಪ್ ಸಂದೇಶ ಬಂದಿದ್ದರೆ ನಿರ್ಲಕ್ಷಿಸುವಂತೆ ಕೇಳಿಕೊಂಡಿದ್ದಾರೆ.
ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲೆ ಆದ ನನ್ನ ಹೆಸರು ಮತ್ತು ಭಾವಚಿತ್ರವನ್ನು ಸೈಬರ್ ವಂಚಕರು ಬಳಸಿಕೊಂಡು, ವಿದೇಶಿ ಸಂಖ್ಯೆ +84 56 455 2858 ಹೊಂದಿರುವ ವಾಟ್ಸಾಪ್ ನಂಬರ್ ಮೂಲಕ ಇತ್ತೀಚೆಗೆ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ನಕಲಿ ಸಂದೇಶ ಕಳುಹಿಸಿದ್ದಾರೆ. ಈ ರೀತಿ ಬರುತ್ತಿರುವ ಸಂದೇಶಗಳು ಸೈಬರ್ ವಂಚಕರ ಕೃತ್ಯವಾಗಿರುತ್ತದೆ.
ಆದ್ದರಿಂದ, ಸಾರ್ವಜನಿಕರು, ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ನಕಲಿ ವಾಟ್ಸಪ್ ಸಂದೇಶಕ್ಕೆ ದಯವಿಟ್ಟು ಪ್ರತಿಕ್ರಿಯೆ ನೀಡಬಾರದೆಂದು ವಿನಂತಿಸಿದ್ದಾರೆ. ಇಂತಹ ಸಂಖ್ಯೆಯಿಂದ ಯಾವುದೇ ರೀತಿಯಲ್ಲಿ ಹಣದ ಬೇಡಿಕೆ, ತಪ್ಪು ಸಂದೇಶ ಹಾಗೂ ಸಹಾಯ ಕೋರಿ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ, ಮೊಬೈಲ್ ವಾಟ್ಸಪ್ ಮುಖಾಂತರ ಸಂದೇಶ ಸ್ವೀಕರಿಸಿದಲ್ಲಿ, ಅವುಗಳನ್ನು ನಿರ್ಲಕ್ಷಿಸಲು ತಿಳಿಸುತ್ತಾ, ಇಂತಹ ಸಂಖ್ಯೆಗಳನ್ನು ಬ್ಲಾಕ್ ಮಾಡಲು ಕೋರಿದ್ದಾರೆ.






















