Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿ ಹಿರಿಯ ವಕೀಲ ಅಜಿತ್ ನಾಯ್ಕ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ದಾಂಡೇಲಿ ಹಿರಿಯ ವಕೀಲ ಅಜಿತ್ ನಾಯ್ಕ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

0
5

ದಾಂಡೇಲಿ (ಉತ್ತರ ಕನ್ನಡ): ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ದಾಂಡೇಲಿ ನಗರದ ಹಿರಿಯ ವಕೀಲ ಅಜಿತ್ ನಾಯ್ಕ ಅವರ ಬರ್ಬರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆ ಅಲಿಯಾಸ್ ದೀಪ್ಯಾ ಅಪರಾಧಿ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ, ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಿರಣ ಕಿಣಿ ಅವರು, ಆರೋಪಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ₹25,000 ದಂಡ, ₹50,000 ಪರಿಹಾರವನ್ನು ಮೃತ ವಕೀಲರ ಕುಟುಂಬಕ್ಕೆ ನೀಡಬೇಕು ಎಂದು ಆದೇಶಿಸಿದ್ದಾರೆ. ಜೊತೆಗೆ, ಹೆಚ್ಚುವರಿ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಸಮಿತಿಯಿಂದ ಪಡೆಯುವಂತೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:  🎋 ಅನ್ನದಾತೆಯ ಸಂಕ್ರಾಂತಿ: ರೈತ ಮಹಿಳೆಯರಿಗೆ ಸಮರ್ಪಿತ ಸಂಭ್ರಮ

2018ರಲ್ಲಿ ನಡೆದ ಭೀಕರ ಹತ್ಯೆ: ಈ ಭೀಕರ ಘಟನೆ 2018ರ ಜುಲೈ 27ರಂದು ರಾತ್ರಿ ದಾಂಡೇಲಿಯ ಜೆ.ಎನ್. ರಸ್ತೆಯಲ್ಲಿರುವ ವಕೀಲ ಅಜಿತ್ ನಾಯ್ಕ ಅವರ ಕಚೇರಿ ಎದುರು ನಡೆದಿದೆ. ಅಜಿತ್ ನಾಯ್ಕ ಅವರು ಕಚೇರಿ ಮುಚ್ಚಿ ಹೊರಬರುವ ಸಮಯದಲ್ಲಿ, ಅವರನ್ನು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಪೂರ್ವನಿಯೋಜಿತ ಸಂಚು, ಯೋಜಿತ ದಾಳಿ: ಆರೋಪಿ ಪಾಂಡುರಂಗ ಕಾಂಬಳೆ ಹತ್ಯೆಯ ದಿನ ನೀಲಿ ಬಣ್ಣದ ಜರ್ಕಿನ್ ಧರಿಸಿ, ಅದರೊಳಗೆ ಕತ್ತಿಯನ್ನು ಅಡಗಿಸಿಕೊಂಡು ಅಜಿತ್ ನಾಯ್ಕ ಅವರ ಕಚೇರಿ ಎದುರು ಕಾಯುತ್ತಿದ್ದನು. ಅಜಿತ್ ನಾಯ್ಕ ಅವರು ರಮೇಶ ನಾಯ್ಕ ಮತ್ತು ಹನುಮಂತ ಕುಂಬಾರ ಅವರೊಂದಿಗೆ ಕಚೇರಿಯಿಂದ ಹೊರಬಂದು ಕಾರಿನ ಬಳಿ ಬಂದಾಗ, ಏಕಾಏಕಿ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ.

ಹತ್ಯೆಯ ನಂತರ ಆರೋಪಿ ಸಂಡೇ ಮಾರುಕಟ್ಟೆಯ ಮೂಲಕ ಓಡಿ ಹೋಗಿ, ಕತ್ತಿಯನ್ನು ಜರ್ಕಿನ್‌ನಲ್ಲೇ ಸುತ್ತಿ ಹಾಳಾದ ಕಾರಿನ ಅಡಿಯಲ್ಲಿ ಅಡಗಿಸಿದ್ದಾನೆ. ಬಳಿಕ ಮೀನು ಮಾರುಕಟ್ಟೆ ಬಳಿ ಇಟ್ಟಿದ್ದ ಬೈಕ್‌ನಲ್ಲಿ ಎರಡನೇ ಆರೋಪಿಯ ಮನೆಗೆ ತೆರಳಿ, ಹತ್ಯೆಯ ಸಮಯದಲ್ಲಿ ಧರಿಸಿದ್ದ ಬಟ್ಟೆಗಳನ್ನು ಬಿಟ್ಟು, ಬೇರೆ ಬಟ್ಟೆ ಧರಿಸಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ:  ಒಕ್ಕಲುತನದ ಹೆಸರೇ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ

ಕೊಲೆಗೆ ಕಾರಣ: ಜಮೀನು ವಿವಾದ ಈ ಕೊಲೆಗೆ ಪ್ರಮುಖ ಕಾರಣ ಮಾವಳಗಿಯಲ್ಲಿರುವ ಜಮೀನೊಂದರ ವಿವಾದ. ಆ ಜಮೀನಿನ ವಿಚಾರದಲ್ಲಿ ರಾಮಕುಮಾರ ಮಾಳಗೆ ಪರವಾಗಿ ವಕೀಲ ಅಜಿತ್ ನಾಯ್ಕ ವಕಾಲತ್ತು ವಹಿಸಿದ್ದರು. ಇದನ್ನು ಪಾಂಡುರಂಗ ಕಾಂಬಳೆ ಹಾಗೂ ಅವನ ಭೂಮಾಫಿಯಾ ಸಂಗಡಿಗರು ಸಹಿಸಿರಲಿಲ್ಲ.

ಅಕ್ರಮವಾಗಿ ಜಮೀನನ್ನು ವಶಪಡಿಸಿಕೊಳ್ಳಲು ಯತ್ನಿಸಿದ ಕಾರಣದಿಂದ ಪಾಂಡುರಂಗ ಕಾಂಬಳೆ ಈಗಾಗಲೇ ಎರಡು ಬಾರಿ ಧಾರವಾಡ ಜೈಲಿಗೆ ಹೋಗಿದ್ದ. ಜೈಲಿನಲ್ಲಿದ್ದಾಗಲೇ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಇದನ್ನೂ ಓದಿ:  ಬಡವರ ಸೇಬು ಖ್ಯಾತಿಯ ಬಾರೆ ಹಣ್ಣು: ರೈತರ ಬದುಕಿಗೆ ಹೊಸ ದಿಕ್ಕು

ಧ್ವನಿ ದಾಖಲೆ – ಮಹತ್ವದ ಸಾಕ್ಷ್ಯ: ಜೈಲಿನಲ್ಲಿದ್ದ ಕೊಲೆ ಅಪರಾಧಿಯೊಂದಿಗೆ ಪಾಂಡುರಂಗ ಕಾಂಬಳೆ ನಡೆಸಿದ ಸಂಭಾಷಣೆಯ ಮೊಬೈಲ್ ಕರೆಗಳ ಧ್ವನಿ ದಾಖಲೆಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ದರು. ಆತನನ್ನು ಧಾರವಾಡ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿದ ಬಳಿಕ, ನ್ಯಾಯಾಲಯದ ಅನುಮತಿಯೊಂದಿಗೆ ಸಿಪಿಐ ಅನಿಸ್ ಮುಜಾವರ ಹಾಗೂ ಪಿ.ಸಿ. ಮಂಜುನಾಥ ಶೆಟ್ಟಿ ಅವರು ಬಳ್ಳಾರಿ ಜೈಲಿಗೆ ತೆರಳಿ ಆರೋಪಿಯ ಧ್ವನಿ ಸ್ಯಾಂಪಲ್ ಪಡೆದು, ಅಜಿತ್ ನಾಯ್ಕ ಅವರ ಧ್ವನಿಯೊಂದಿಗೆ ಎಫ್.ಎಸ್.ಎಲ್‌ಗೆ ಹೊಂದಾಣಿಕೆಗಾಗಿ ಕಳುಹಿಸಿದ್ದರು.

ಎಫ್.ಎಸ್.ಎಲ್ ವರದಿಯಲ್ಲಿ ಧ್ವನಿ ಹೊಂದಾಣಿಕೆಯಾಗಿದೆ ಎಂದು ದೃಢಪಟ್ಟಿದ್ದು, ಇದು ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷ್ಯವಾಯಿತು.

ಇದನ್ನೂ ಓದಿ:  ಭಾರತೀಯ ಅಂತರಿಕ್ಷ ನಿಲ್ದಾಣಕ್ಕೆ ಶತಪ್ರಯತ್ನ

ಪಬ್ಲಿಕ್ ಪ್ರಾಸಿಕ್ಯೂಟರ್‌ರ ಬಲಿಷ್ಠ ವಾದ: ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಪಾಂಡುರಂಗ ಕಾಂಬಳೆಗೆ ಶಿಕ್ಷೆ ವಿಧಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಳಗೀಕರ ಅವರು ಸಾಕ್ಷ್ಯಾಧಾರಗಳ ಸಮೇತ ಸಮರ್ಥವಾಗಿ ವಾದ ಮಂಡಿಸಿದರು. ಇನ್ನುಳಿದ ಆರೋಪಿಗಳ ಕುರಿತಂತೆ ತೀರ್ಪಿನ ಪ್ರತಿಯನ್ನು ಪರಿಶೀಲಿಸಿದ ನಂತರ, ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಲಾಗಿದೆ.