ಕೇರಳ–ಗೋವಾ ಮಾದರಿಯಲ್ಲಿ ಅಭಿವೃದ್ಧಿ – ಡಿ.ಕೆ.ಶಿವಕುಮಾರ್
ಮಂಗಳೂರು: ಕರಾವಳಿ ಕರ್ನಾಟಕದ ಅಪಾರ ನೈಸರ್ಗಿಕ ಸೌಂದರ್ಯ ಮತ್ತು ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೇರಳ ಹಾಗೂ ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಶನಿವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ಅವರು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದನ್ನೂ ಓದಿ: ಕನ್ನಡಿಗರ ಅಸ್ಮಿತೆಗೆ ಕೇರಳದ ಕುತ್ತು: ಪಿಣರಾಯಿ ವಿಜಯನ್‌ಗೆ ಸಿದ್ದರಾಮಯ್ಯ ‘ಖಡಕ್’ ಎಚ್ಚರಿಕೆ!
ಹಿಂದಿನ ಸರ್ಕಾರಗಳು ಸಂಪೂರ್ಣ ವಿಫಲ: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯ ವಿಚಾರದಲ್ಲಿ ಹಿಂದಿನ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರೋಪಿಸಿದ ಡಿ.ಕೆ.ಶಿವಕುಮಾರ್, “ಮಂಗಳೂರಿನ ಹಾಗೂ ಕರಾವಳಿ ಭಾಗದ ಅನೇಕ ಯುವಕರು ಉದ್ಯೋಗಕ್ಕಾಗಿ ಮುಂಬೈ, ದುಬೈ ಮತ್ತು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಲಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಕರಾವಳಿ ಭಾಗದ ಎಲ್ಲಾ ಶಾಸಕರೊಂದಿಗೆ ಚರ್ಚೆ ನಡೆಸಿದ್ದೇನೆ. ಪ್ರವಾಸೋದ್ಯಮ ಉತ್ತೇಜನಕ್ಕೆ ಅವರು ಉತ್ತಮ ಸ್ಪಂದನೆ ನೀಡಿದ್ದಾರೆ. ಪ್ರತ್ಯೇಕ ಪ್ರವಾಸೋದ್ಯಮ ನೀತಿಯ ಕುರಿತು ವಿಸ್ತೃತವಾಗಿ ಚರ್ಚೆ ಮಾಡಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Ayodhya 15 ಕಿಮೀ ವ್ಯಾಪ್ತಿ: ಮಾಂಸಾಹಾರ ಆಹಾರ ವಿತರಣೆ ನಿಷೇಧ
ಕರಾವಳಿ ಪ್ರದೇಶದಲ್ಲಿ ವಿಶೇಷ ಯೋಜನೆ: “ವಿದೇಶ, ಮುಂಬೈ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಅನೇಕರು ತಮ್ಮ ಊರಿಗೆ ಮರಳಿ ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈ ಹೂಡಿಕೆಗಳು ಸ್ಥಳೀಯ ಕೌಶಲ್ಯ ಮತ್ತು ಪ್ರತಿಭಾನ್ವಿತ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ” ಎಂದರು.
ಉದ್ಯಮಿಗಳಿಗೆ ಸರ್ಕಾರದ ಬೆಂಬಲ: ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸಿ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದ ಉಪಮುಖ್ಯಮಂತ್ರಿ, “ಈ ನಿಟ್ಟಿನಲ್ಲಿ ಉದ್ಯಮಿಗಳು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಹೂಡಿಕೆ ಮಾಡಲು ಸಿದ್ಧರಿರುವ ಉದ್ಯಮಿಗಳಿಗೆ ಸರ್ಕಾರ ಹೇಗೆ ಬೆಂಬಲ ನೀಡಬಹುದು ಎಂಬುದನ್ನು ಪರಿಶೀಲಿಸಲಾಗುತ್ತದೆ. ಖಾಸಗಿ ಸಹಭಾಗಿತ್ವವೂ ಅತ್ಯಗತ್ಯ” ಎಂದು ಹೇಳಿದರು.
ಇದನ್ನೂ ಓದಿ: WPL 2026: ಆರ್‌ಸಿಬಿಗೆ ಶುಭಾರಂಭದ ಬೆನ್ನಲ್ಲೇ ಬಿಗ್ ಶಾಕ್; ಸ್ಟಾರ್ ವೇಗಿ ಹೊರಕ್ಕೆ!
ಪ್ರವಾಸೋದ್ಯಮ ಅಭಿವೃದ್ಧಿಗೆ ಉದ್ಯಮಿಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರ ಅಗತ್ಯ ಎಂದು ತಿಳಿಸಿದ ಡಿ.ಕೆ.ಶಿವಕುಮಾರ್, “ಪ್ರವಾಸೋದ್ಯಮ ಸಮಾವೇಶದಲ್ಲಿ ಸಿಆರ್‌ಝಡ್ ಅಧಿಕಾರಿಗಳು, ರಕ್ಷಣಾ ಇಲಾಖೆ ಹಾಗೂ ಕರಾವಳಿ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕರಾವಳಿ ಪ್ರದೇಶದಲ್ಲಿ ಈಗಾಗಲೇ ಒಂದೂ ಪಂಚತಾರಾ ಹೋಟೆಲ್ ಇಲ್ಲ. ಮೂಲಸೌಕರ್ಯದಿಂದ ಹಿಡಿದು ಆತಿಥ್ಯ ವಲಯದವರೆಗೂ ಎಲ್ಲವನ್ನೂ ಅಭಿವೃದ್ಧಿಪಡಿಸಬೇಕಾಗಿದೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜಕೀಯ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ಮನರೇಗಾ ಹೆಸರಿನ ಬದಲಾವಣೆ ಹಾಗೂ ಕಾನೂನು ತಿದ್ದುಪಡಿ ವಿರುದ್ಧ ಕಾಂಗ್ರೆಸ್ ಪಕ್ಷವು ಜನವರಿ 26ರಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 5ರಿಂದ 10 ಕಿಲೋಮೀಟರ್ ಪಾದಯಾತ್ರೆ ನಡೆಸಲಿದೆ ಎಂದು ಘೋಷಿಸಿದರು.























