ಮೈಸೂರು ಪೂರ್ಣ ನಾಯಕ, ಅದಿತಿ ಸಾಗರ್ ನಾಯಕಿ
ಬೆಂಗಳೂರು: ನಟ ಧನಂಜಯ್ ಅವರು ತಮ್ಮದೇ ನಿರ್ಮಾಣ ಸಂಸ್ಥೆಯಾದ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಅಡಿ ವಿಭಿನ್ನ ಕಥಾವಸ್ತು ಹೊಂದಿರುವ ಸಿನಿಮಾಗಳನ್ನು ನಿರ್ಮಿಸುತ್ತಾ ಬಂದಿದ್ದು, ಇದೀಗ ಆರನೇ ಸಿನಿಮಾವಾಗಿ ‘ಹೆಗ್ಗಣ ಮುದ್ದು’ ಎಂಬ ಹೊಸ ಚಿತ್ರವನ್ನು ಘೋಷಿಸಿದ್ದಾರೆ.
ಡಾಲಿ ಪಿಕ್ಚರ್ಸ್ ಸಂಸ್ಥೆಯ ವಿಶೇಷತೆಯೇ ಮಾಸ್, ಮಸಾಲೆ ಹಾಗೂ ಸಾಂಪ್ರದಾಯಿಕ ಕಮರ್ಶಿಯಲ್ ಫಾರ್ಮುಲಾದಿಂದ ದೂರ ಉಳಿದು, ಕತೆ ಪ್ರಧಾನ ಹಾಗೂ ಸಾಮಾನ್ಯ ಪ್ರೇಕ್ಷಕರಿಗೆ ನೇರವಾಗಿ ಕನೆಕ್ಟ್ ಆಗುವ ಸಿನಿಮಾಗಳನ್ನು ನಿರ್ಮಿಸುವುದು. ಜೊತೆಗೆ ಪ್ರತಿಭಾವಂತ ಹೊಸ ನಿರ್ದೇಶಕರು, ನಟ-ನಟಿಯರಿಗೆ ಅವಕಾಶ ನೀಡುವುದು ಈ ಬ್ಯಾನರ್‌ನ ಪ್ರಮುಖ ಧ್ಯೇಯವಾಗಿದೆ. ‘ಬಡವ ರಾಸ್ಕಲ್’, ‘ಹೆಡ್ ಬುಷ್’, ‘ಟಗರು ಪಲ್ಯ’ ಸೇರಿದಂತೆ ಈಗಾಗಲೇ ಗಮನ ಸೆಳೆದ ಸಿನಿಮಾಗಳನ್ನು ಡಾಲಿ ಪಿಕ್ಚರ್ಸ್ ನೀಡಿದೆ.
ಇದನ್ನೂ ಓದಿ: ರಸ್ತೆ ಅಪಘಾತ ಸುದ್ದಿ ಬಗ್ಗೆ ನಟ ಆಶಿಷ್ ವಿದ್ಯಾರ್ಥಿ ಸ್ಪಷ್ಟನೆ
ಈಗ ಡಾಲಿ ಪಿಕ್ಚರ್ಸ್‌ನ ಆರನೇ ಸಿನಿಮಾವಾಗಿ ‘ಹೆಗ್ಗಣ ಮುದ್ದು’ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಮೈಸೂರು ಪೂರ್ಣ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸುತ್ತಿದ್ದು, ನಾಯಕಿಯಾಗಿ ಖ್ಯಾತ ಕಲಾ ನಿರ್ದೇಶಕ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ನಟಿಸುತ್ತಿದ್ದಾರೆ. ಅದಿತಿ ಸಾಗರ್ ಈಗಾಗಲೇ ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿರುವುದು ಈ ಚಿತ್ರದ ವಿಶೇಷ.
‘ಹೆಗ್ಗಣ ಮುದ್ದು’ ಎಂಬ ಶೀರ್ಷಿಕೆ ಜನಪದ ಗಾದೆಯಾದ “ಹೆತ್ತವರಿಗೆ ಹೆಗ್ಗಣ ಮುದ್ದು” ಎಂಬ ಮಾತಿನಿಂದ ಪ್ರೇರಿತವಾಗಿದ್ದು, ವ್ಯಕ್ತಿ ಕುದುರೆಯೋ ಅಥವಾ ಹೆಗ್ಗಣವೋ ಎಂಬ ಜಿಜ್ಞಾಸೆಯ ಸುತ್ತ ಸಿನಿಮಾ ಕಥೆ ಸಾಗುತ್ತದೆ ಎನ್ನಲಾಗಿದೆ. ಸಾಮಾಜಿಕ ಅರ್ಥವಂತಿಕೆಯೊಂದಿಗೆ ಕಥಾನಕ ರೂಪುಗೊಂಡಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಇದನ್ನೂ ಓದಿ: ‘ಆಕಾಶ’ದಲ್ಲಿ ಅಪ್ಪು ಮತ್ತೆ ಮಿನುಗು’ತಾರೆ’
ಈ ಸಿನಿಮಾವನ್ನು ಅವಿನಾಶ್ ಬಳೆಕ್ಕಳ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರವನ್ನು ಅತೀ ಶೀಘ್ರದಲ್ಲೇ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡ ಹೊಂದಿದೆ.
ತಮ್ಮ ನಿರ್ಮಾಣದ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುತ್ತಾ ಬಂದಿರುವ ಡಾಲಿ ಧನಂಜಯ್, ‘ಹೆಗ್ಗಣ ಮುದ್ದು’ ಸಿನಿಮಾನಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ನಿರ್ಮಾಪಕರಾಗಿ ಮಾತ್ರವಲ್ಲದೆ ನಟನಾಗಿ ಕೂಡ ಡಾಲಿ ತಮ್ಮ ಬ್ಯಾನರ್‌ಗೆ ಬೆಂಬಲ ನೀಡುತ್ತಿರುವುದು ವಿಶೇಷ.
ಇನ್ನೊಂದೆಡೆ ನಟ ಧನಂಜಯ್ ಅವರು ಪ್ರಸ್ತುತ ‘ಜಿಂಗೊ’, ‘ಹಲಗಲಿ’, ‘ಅಣ್ಣ ಫ್ರಂ ಮೆಕ್ಸಿಕೊ’, ‘666 ಆಪರೇಷನ್ ಡ್ರೀಮ್ ಥಿಯೇಟರ್’ ಮತ್ತು ‘ಉತ್ತರಕಾಂಡ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನಾಗಿ ಹಾಗೂ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಹಾದಿ ರೂಪಿಸುತ್ತಿರುವ ಡಾಲಿ ಧನಂಜಯ್ ಅವರ ‘ಹೆಗ್ಗಣ ಮುದ್ದು’ ಸಿನಿಮಾದ ಮೇಲೆ ಸಿನಿಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.









