“ಯುದ್ಧಕ್ಕೆ ನಾವು ಸಿದ್ಧ” – ಹುಬ್ಬಳ್ಳಿ ವೇದಿಕೆಯಿಂದ ವಿರೋಧಿಗಳಿಗೆ ಕಿಚ್ಚ ಸುದೀಪ್ ಎಚ್ಚರಿಕೆ

0
6

ಡಿಸೆಂಬರ್ 25ಕ್ಕೆ “ಮಾರ್ಕ್” ತೆರೆ: ಅಭಿಮಾನಿಗಳಿಗೆ ಶಕ್ತಿ ತುಂಬಿದ ಕಿಚ್ಚನ ಮಾತು

ಹುಬ್ಬಳ್ಳಿ: ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ “ಮಾರ್ಕ್” ಇದೇ ಡಿಸೆಂಬರ್ 25ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದ್ದು, ಚಿತ್ರದ ಪ್ರಚಾರ ಭಾಗವಾಗಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವೇದಿಕೆಯಲ್ಲಿ ಮಾತನಾಡಿದ ಸುದೀಪ್, ತಮ್ಮ ವಿರೋಧಿಗಳಿಗೆ ನೇರ ಎಚ್ಚರಿಕೆ ನೀಡುವ ಮೂಲಕ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ.

“ನಾನು ಇಲ್ಲಿಯವರೆಗೆ ಸುಮ್ಮನಿದ್ದೆ. ಆದರೆ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ” ಎಂದು ಹೇಳುವ ಮೂಲಕ ಸುದೀಪ್ ತಮ್ಮ ಸಹನೆಯ ಹಿಂದಿರುವ ಗಂಭೀರತೆಯನ್ನು ಸ್ಪಷ್ಟಪಡಿಸಿದರು. ಹುಬ್ಬಳ್ಳಿ ವೇದಿಕೆಯಿಂದ ಹೊರಬಂದ ಈ ಮಾತುಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿಯ ಆರಂಭ: ನಿಮ್ಮೂರಲ್ಲೇ ಕನಸು ನನಸಾಗಿಸಿಕೊಳ್ಳಿ

“ಹುಬ್ಬಳ್ಳಿ ವೇದಿಕೆಯಿಂದ ಮಾತನಾಡಿದ್ರೆ ಕರ್ನಾಟಕಕ್ಕೆ ತಟ್ಟುತ್ತೆ”: ಸುದೀಪ್ ತಮ್ಮ ಭಾಷಣದಲ್ಲಿ, “ನನಗೆ ಮಾತನಾಡುವ ಆಸೆ ಬಹಳ ಇದೆ. ಆದರೆ ನಾನು ಕಂಟ್ರೋಲ್ ಮಾಡಿಕೊಂಡು ಮಾತನಾಡುತ್ತೇನೆ. ಕೆಲವು ಮಾತುಗಳನ್ನು ಇಲ್ಲಿ ಹುಬ್ಬಳ್ಳಿಯಲ್ಲಿ ಹೇಳಿದರೆ, ಅದು ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ಅಲ್ಲಿಗೆ ತಟ್ಟುತ್ತದೆ. ಅದಕ್ಕೇ ಈ ಕಾರ್ಯಕ್ರಮವನ್ನು ಇಲ್ಲಿಯೇ ಮಾಡಿದ್ದೇವೆ” ಎಂದು ಹೇಳಿದರು. (ಸುದೀಪ್ ಭಾಷಣದ ವಿಡಿಯೋ ನೋಡಿ)

“ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ”: ಡಿಸೆಂಬರ್ 25ಕ್ಕೆ ಸಿನಿಮಾ ಬಿಡುಗಡೆಯ ಭರವಸೆ ನೀಡಿದ್ದನ್ನು ನೆನಪಿಸಿಕೊಂಡ ಸುದೀಪ್, “ಡಿಸೆಂಬರ್ 25ಕ್ಕೆ ಬಾಗಿಲು ತಟ್ಟುತ್ತೀನಿ ಎಂದು ಹೇಳಿದ್ದೆ. ಅದರಂತೆ ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗ್ತಿದೆ. ಈ ವೇದಿಕೆಯಿಂದಲೇ ಹೇಳ್ತೀನಿ – ಯುದ್ಧಕ್ಕೆ ನಾವು ಸಿದ್ಧ. ಯಾಕಂದ್ರೆ ನಾವು ನಮ್ಮ ಮಾತಿಗೆ ಬದ್ಧ” ಎಂದು ಸವಾಲ್ ಹಾಕಿದರು.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

ಅಭಿಮಾನಿಗಳಿಗೆ ಮನದಾಳದ ಕರೆ: ತಮ್ಮ ಸಹನೆಯ ಬಗ್ಗೆ ಮಾತನಾಡಿದ ಸುದೀಪ್, “ಕೆಲವೊಮ್ಮೆ ನನಗೆ ಅನಿಸುತ್ತೆ, ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಅಂತ. ಆದರೆ ನಿಮ್ಮಿಗಾಗಿ, ನೀವು ಚೆನ್ನಾಗಿ ಇರಬೇಕು ಅನ್ನೋ ಕಾರಣಕ್ಕೆ ನಾನು ಬಾಯಿ ಮುಚ್ಚಿಕೊಂಡು ಇದ್ದೆ. ನನಗೆ ಬಾಯಿಲ್ಲ ಅನ್ನೋ ಅರ್ಥ ಅಲ್ಲ. ನನ್ನ ಸಹನೆಯಿಂದ ಬಹಳಷ್ಟು ಕಲ್ಲಿನ ತೂರಾಟ ನಿಮ್ಮ ಮೇಲೆ ಬಿದ್ದಿದೆ. ಅದನ್ನು ನೀವೇ ತಡೆಯುತ್ತಾ ಬಂದಿದ್ದೀರಿ. ಆದರೆ ಈಗ ಹೇಳ್ತೀನಿ – ನೀವು ತಡೆಯುವವರೆಗೆ ತಡೀರಿ, ಮಾತನಾಡುವ ಸಮಯದಲ್ಲಿ ಮಾತಾಡಿ” ಎಂದು ಅಭಿಮಾನಿಗಳಿಗೆ ಶಕ್ತಿಯ ಸಂದೇಶ ನೀಡಿದರು.

“ಹುಬ್ಬಳ್ಳಿ ಕೂಗು ಬೆಂಗಳೂರಿಗೆ ಕೇಳಿಸಬೇಕು”: “ಮಾರ್ಕ್ ಒಂದು ಅದ್ಭುತ ಸಿನಿಮಾ. ಅದರಲ್ಲಿ ತುಂಬಾ ಜನರ ಕನಸುಗಳಿವೆ. ಡಿಸೆಂಬರ್ 25ರಂದು ಮಾರ್ಕ್ ಸಿನಿಮಾ ನೋಡಿ, ಹುಬ್ಬಳ್ಳಿ ಮಂದಿಯ ಕೂಗಾಟ ನನಗೆ ಬೆಂಗಳೂರಿನಲ್ಲಿ ಕೇಳಿಸಬೇಕು” ಎಂದು ಹೇಳುವ ಮೂಲಕ ಕಿಚ್ಚ ಅಭಿಮಾನಿಗಳಲ್ಲಿ ಭರ್ಜರಿ ಉತ್ಸಾಹ ಮೂಡಿಸಿದರು.

ಇದನ್ನೂ ಓದಿ: ಗಂಡು ಮೆಟ್ಟಿದ ನಾಡಿನಲ್ಲಿ ‘ಮಾರ್ಕಂಡೇಯ’ ಅಬ್ಬರ

ಆಕ್ಷನ್ ಥ್ರಿಲ್ಲರ್ “ಮಾರ್ಕ್” ಮೇಲೆ ಭಾರೀ ನಿರೀಕ್ಷೆ: ವಿಜಯ್ ಕಾರ್ತಿಕೇಯ ನಿರ್ದೇಶನದ “ಮಾರ್ಕ್” ಒಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ‘ಮಸ್ತ್ ಮಲೈಕಾ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಇದೇ ಚಿತ್ರಕ್ಕಾಗಿ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಹಾಡಿರುವ ಹಾಡು ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದೆ. ಸುದೀಪ್ ಪಕ್ಕಾ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಭರ್ಜರಿ ಆಕ್ಷನ್, ತೀಕ್ಷ್ಣ ಡೈಲಾಗ್‌ಗಳು ಸಿನಿಮಾದ ಹೈಲೈಟ್ ಆಗಿವೆ.

ಈ ಕ್ರಿಸ್‌ಮಸ್‌ ದಿನವೇ “ಮಾರ್ಕ್” ತೆರೆಕಾಣುತ್ತಿದ್ದು, ಸುದೀಪ್ ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರಿದೆ.

Previous articleಶಾಸಕ ಮಹೇಶ ಟೆಂಗಿನಕಾಯಿ ಕಾರು ಚಾಲಕ ರಸ್ತೆ ಅಪಘಾತದಲ್ಲಿ ಸಾವು