AI ದುರುಪಯೋಗಕ್ಕೆ ಇತಿ ‘ಶ್ರೀ’ ಹಾಡಲು ನಟಿ ಲೀಲಾ ಕರೆ

0
4

ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ನಡುವೆಯೇ, ಅದರ ದುರುಪಯೋಗದಿಂದಾಗಿ ಸೆಲೆಬ್ರಿಟಿಗಳು, ವಿಶೇಷವಾಗಿ ನಟಿಯರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಟಿಯರ ಹೆಸರಿನಲ್ಲಿ ಅಶ್ಲೀಲ ಫೋಟೋಗಳು, ಮಾದಕ ವೀಡಿಯೊಗಳು ಮತ್ತು ಹಾಸ್ಯಾಸ್ಪದ ದೃಶ್ಯಗಳನ್ನು AI ಮೂಲಕ ಸೃಷ್ಟಿಸಿ ಅಂತರ್ಜಾಲದಲ್ಲಿ ಹರಡುವ ಘಟನೆಗಳು ಹೆಚ್ಚುತ್ತಿವೆ.

ಇತ್ತೀಚೆಗೆ ನಟಿ ಕೀರ್ತಿ ಸುರೇಶ್ ಈ ವಿಚಾರವಾಗಿ ವಿಷಾದ ವ್ಯಕ್ತಪಡಿಸಿದ್ದರೆ, ಇದೀಗ ನಟಿ ಶ್ರೀಲೀಲಾ ಅವರ ಹೆಸರಿನಲ್ಲಿ AI ಮೂಲಕ ಸೃಷ್ಟಿಸಲಾದ ಮಾದಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ನಟಿ ಶ್ರೀಲೀಲಾ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟ ಹೇಳಿಕೆ ನೀಡಿ, ಅಭಿಮಾನಿಗಳು ಇಂತಹ ಫೋಟೋಗಳನ್ನು ಬೆಂಬಲಿಸಬಾರದು ಅಥವಾ ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಿಡುಗಡೆಯ ಮುನ್ನವೇ ಭರ್ಜರಿ ಬಿಸಿನೆಸ್: Zee ತೆಕ್ಕೆಗೆ ’45’ರ ಹಕ್ಕು

“ತಂತ್ರಜ್ಞಾನ ಉಪಯೋಗ ಮತ್ತು ದುರುಪಯೋಗದ ನಡುವೆ ವ್ಯತ್ಯಾಸವಿದೆ”: AI ಮೂಲಕ ಸೃಷ್ಟಿಸಲಾಗುತ್ತಿರುವ ಅಸಂಬದ್ಧ ಮತ್ತು ಅವಮಾನಕಾರಿ ವಿಷಯಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್‌ ಮಾಡಿ AI ನಿಂದ ಸೃಷ್ಟಿಸಲ್ಪಡುತ್ತಿರುವ ಅಸಂಬದ್ಧತೆಯನ್ನು ಬೆಂಬಲಿಸದಂತೆ ನಾನು ಪ್ರತಿಯೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರಿಗೂ ಮನವಿ ಮಾಡುತ್ತೇನೆ. ತಂತ್ರಜ್ಞಾನವನ್ನು ಬಳಸುವುದು ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳುವುದರ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ. ತಂತ್ರಜ್ಞಾನದಲ್ಲಿನ ಪ್ರಗತಿಗಳು ಜೀವನವನ್ನು ಸರಳಗೊಳಿಸಬೇಕು, ಸಂಕೀರ್ಣಗೊಳಿಸಬಾರದು ಎಂದು ಹೇಳಿದ್ದಾರೆ.

ಮಹಿಳೆಯ ಗೌರವ ಕಾಪಾಡುವ ಹೊಣೆ ಸಮಾಜದ ಮೇಲಿದೆ: ಪ್ರತಿಯೊಬ್ಬ ಮಹಿಳೆಯೂ ಮಗಳು, ಮೊಮ್ಮಗಳು, ಸಹೋದರಿ, ಸ್ನೇಹಿತೆ ಅಥವಾ ಸಹೋದ್ಯೋಗಿ ಎಂಬುದನ್ನು ನೆನಪಿಸಿದ ನಟಿ, ಕಲೆ ಅಥವಾ ಸಿನಿಮಾ ಕ್ಷೇತ್ರವನ್ನು ವೃತ್ತಿಯಾಗಿ ಆರಿಸಿಕೊಂಡಿದ್ದರೂ ಮಹಿಳೆಯ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗಬಾರದು ಎಂದು ಹೇಳಿದ್ದಾರೆ. ನಾವು ಸಂತೋಷವನ್ನು ಹಂಚುವ ಕ್ಷೇತ್ರದ ಭಾಗವಾಗಲು ಬಯಸುತ್ತೇವೆ. ಆದರೆ ಇಂತಹ ಘಟನೆಗಳು ತುಂಬಾ ತೊಂದರೆ ಉಂಟುಮಾಡುವ ಮತ್ತು ಮನಸ್ಸಿಗೆ ನೋವು ನೀಡುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅದ್ದೂರಿಯಾಗಿ ಅನಾವರಣಗೊಂಡ ‘45’ ಟ್ರೇಲರ್ ಟ್ರೆಂಡಿಂಗ್‌ನಲ್ಲಿ

ಹಿತೈಷಿಗಳಿಗೆ ಧನ್ಯವಾದ, ಅಧಿಕಾರಿಗಳಿಂದ ಮುಂದಿನ ಕ್ರಮ: ತಮ್ಮ ಕಾರ್ಯನಿರತ ವೇಳಾಪಟ್ಟಿಯಿಂದಾಗಿ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಅನೇಕ ಸಂಗತಿಗಳು ತಮ್ಮ ಗಮನಕ್ಕೆ ಬಾರದಿದ್ದರೂ, ಈ ವಿಷಯವನ್ನು ತಮ್ಮ ಗಮನಕ್ಕೆ ತಂದ ಹಿತೈಷಿಗಳಿಗೆ ಶ್ರೀಲೀಲಾ ಧನ್ಯವಾದ ತಿಳಿಸಿದ್ದಾರೆ. ಇಂತಹ ಸಮಸ್ಯೆಗಳು ತಮಗಷ್ಟೇ ಅಲ್ಲ, ಸಹ ನಟಿಯರಿಗೂ ಎದುರಾಗುತ್ತಿರುವುದನ್ನು ಕಂಡು ಎಲ್ಲರ ಪರವಾಗಿ ಮಾತನಾಡುತ್ತಿರುವುದಾಗಿ ಹೇಳಿದ್ದಾರೆ.

“ದಯೆ, ಘನತೆ ಮತ್ತು ನನ್ನ ಪ್ರೇಕ್ಷಕರ ಮೇಲಿನ ನಂಬಿಕೆಯಿಂದ, ದಯವಿಟ್ಟು ನಮ್ಮೊಂದಿಗೆ ನಿಲ್ಲಿ. ಮುಂದಿನ ಹೆಜ್ಜೆಯನ್ನು ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳುತ್ತಾರೆ” ಎಂದು ಅವರು ಮನವಿ ಮಾಡಿದ್ದಾರೆ.

AI ತಂತ್ರಜ್ಞಾನ ದುರುಪಯೋಗದ ವಿರುದ್ಧ ಸೆಲೆಬ್ರಿಟಿಗಳ ಧ್ವನಿ ದಿನೇ ದಿನೇ ಜೋರಾಗುತ್ತಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಜವಾಬ್ದಾರಿಯುತವಾಗಿ ವರ್ತಿಸಬೇಕಾದ ಅಗತ್ಯ ಮತ್ತಷ್ಟು ಸ್ಪಷ್ಟವಾಗಿದೆ.

Previous articleವಿಧಾನಸಭೆಯಲ್ಲಿ ಎರಡು ಸ್ಥಾನ ತೆರವು: ಮಾರ್ಚ್‌ – ಏಪ್ರಿಲ್‌ನಲ್ಲಿ ಉಪಚುನಾವಣೆ ಬಹುತೇಕ ಫಿಕ್ಸ್