ಹೊಸಪೇಟೆ: ನಗರದಲ್ಲಿ ಮಂಗಳವಾರ ಬೆಳಗ್ಗಿನ ಜಾವ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ವಿಜಯನಗರ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಂಕರ್ ನಾಯ್ಕ್ ಅವರಿಗೆ ಸಂಬಂಧಿಸಿದ ಕಚೇರಿ ಹಾಗೂ ನಿವಾಸದ ಮೇಲೆ ಪರಿಶೀಲನೆ ನಡೆಸಲಾಗಿದೆ.
ಹೊಸಪೇಟೆ ನಗರದಲ್ಲಿರುವ ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿಗಳ (DHO) ಕಚೇರಿ, ಡಾ. ಶಂಕರ್ ನಾಯ್ಕ್ ಅವರ ನಿವಾಸ ಹಾಗೂ ಅವರು ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಬೆಳಗ್ಗೆಯೇ ದಾಳಿ ಆರಂಭಿಸಿದ ಅಧಿಕಾರಿಗಳು ಬ್ಯಾಂಕ್ ದಾಖಲೆಗಳು, ಆಸ್ತಿ ವಿವರಗಳು ಹಾಗೂ ಇತರೆ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಶಿವಮೊಗ್ಗ : ಬೆಳಂ ಬೆಳ್ಳಗ್ಗೆ ಲೋಕಾಯುಕ್ತ ದಾಳಿ
ಈ ದಾಳಿಯನ್ನು ವಿಜಯನಗರ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಅವರ ನೇತೃತ್ವದಲ್ಲಿ ಪಿಐ ಅಮರೇಶ್, ರಾಜೇಶ್ ಲಮಾಣಿ ಸೇರಿದಂತೆ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಸಂಯುಕ್ತವಾಗಿ ನಡೆಸುತ್ತಿವೆ. ವಿವಿಧ ತಂಡಗಳಾಗಿ ಅಧಿಕಾರಿಗಳು ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ದಾಳಿಯ ಹಿನ್ನೆಲೆ ಅಕ್ರಮ ಆಸ್ತಿ ಸಂಗ್ರಹಣೆ ಸಂಬಂಧಿತವಾಗಿರಬಹುದೆಂದು ಶಂಕಿಸಲಾಗಿದೆ.
ದಾಳಿ ಸಂಬಂಧಿಸಿದಂತೆ ಇನ್ನೂ ತನಿಖೆ ಪ್ರಾರಂಭಿಕ ಹಂತದಲ್ಲಿದ್ದು, ಪರಿಶೀಲನೆ ಪೂರ್ಣಗೊಂಡ ನಂತರವೇ ಹೆಚ್ಚಿನ ವಿವರಗಳು ಬಹಿರಂಗವಾಗುವ ಸಾಧ್ಯತೆ ಇದೆ. ಲೋಕಾಯುಕ್ತ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಇದನ್ನೂ ಓದಿ: ಗಾಯಕ ಮ್ಯೂಸಿಕ್ ಮೈಲಾರಿ ಸೇರಿ ನಾಲ್ವರ ವಿರುದ್ಧ ಪೋಕ್ಸೋ ಕೇಸ್..!






















