Home ಸಿನಿ ಮಿಲ್ಸ್ `ಸೆಲೆಬ್ರಿಟಿ’ಗಳಿಗೆ ಡೆವಿಲ್ ಡಬಲ್ ಮನರಂಜನೆ‌

`ಸೆಲೆಬ್ರಿಟಿ’ಗಳಿಗೆ ಡೆವಿಲ್ ಡಬಲ್ ಮನರಂಜನೆ‌

0
3

ಒಬ್ಬರಿಗೆ ಅವಕಾಶ… ಮತ್ತೊಬ್ಬರಿಗೆ ಅವಶ್ಯಕತೆ..! ರೋಗಿಯ ಬಯಕೆಗೆ ವೈದ್ಯರ ಸಲಹೆ ಹೊಂದಿಕೊಂಡಂತೆ… ಇಲ್ಲಿ ನಾಯಕನ ಆಸೆಗೆ ಖಳನಾಯಕ ಕೆಂಪು ಹಾಸಿನ ಸ್ವಾಗತದ ಮೂಲಕ ಕಣ್ಮುಂದೆ ಸ್ವರ್ಗವನ್ನೇ ತೋರಿಸುತ್ತಾನೆ. ಆದರೆ ಅದೊಂದು ದೊಡ್ಡ ಖೆಡ್ಡಾ ಎಂಬುದು ಆನಂತರ ತಿಳಿಯುತ್ತದೆ. ಅಷ್ಟಕ್ಕೂ ಆ ಖೆಡ್ಡಾದೊಳಗೆ ಬೀಳೋದು ಯಾರು ಎಂಬುದಷ್ಟೇ `ಡೆವಿಲ್’ ಕೌತುಕ ಪ್ರಪಂಚದ ಝಲಕ್.

ಇಲ್ಲಿ ಕೃಷ್ಣನ ಅವತಾರವಿದೆ. ದುಶ್ಯಾಸನನ ರೌದ್ರಾವತಾರವೂ ಇದೆ. ಗೆಲ್ಲೋದು ಯಾರು ಎಂಬುದು ಮತ್ತೊಂದು ಕೌತುಕ. ರಾಜಕೀಯ ಚದುರಂಗದಾಟ ಎಂದರೆ ಒಬ್ಬರು ಸೋಲಬೇಕು, ಇನ್ನೊಬ್ಬರು ಗೆಲ್ಲಬೇಕು. ಇಲ್ಲಿ ಸೋಲು ಯಾರಿಗೆ… ಗೆಲುವಿನ ಹೂಮಾಲೆ ಯಾರಿಗೆ ಎಂಬುದು ಮಹಾಕೌತುಕ…

ಹೀಗೆ ಒಂದರ ಮೇಲೊಂದು ಟ್ವಿಸ್ಟ್‌ಗಳ ಮೂಲಕ ಕುತೂಹಲವನ್ನು ಹೆಚ್ಚಿಸುವಲ್ಲಿ ನಿರ್ದೇಶಕ ಪ್ರಕಾಶ್ ವೀರ್ ಗೆದ್ದಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಯಾವ ಬಗೆಯ ಭೋಜನ ಬಡಿಸಿದರೆ ಸಂತೃಪ್ತರಾಗುತ್ತಾರೆ ಎಂಬುದನ್ನು ಎರಡನೇ ಪ್ರಯತ್ನದಲ್ಲಿ ಅರಿತಂತಿರುವ ಪ್ರಕಾಶ್, ಈ ಬಾರಿ `ಮಾಸ್ ಮಸಾಲಾ’ ರೆಡಿ ಮಾಡಿಕೊಂಡು ಭೂರಿ ಭೋಜನವನ್ನೇ ಉಣಬಡಿಸಿದ್ದಾರೆ. ಹೀಗಾಗಿ ಸಿನಿಮಾ ಆ್ಯಕ್ಷನ್, ಕಾಮಿಡಿ, ಜಬರ್‌ದಸ್ತ್ ಡೈಲಾಗ್, ಅದ್ಧೂರಿ ಮೇಕಿಂಗ್ ಎಲ್ಲವೂ ಇದೆ.

ಮಾಸ್ ಹಾಗೂ ಕ್ಲಾಸ್ ಅವತಾರಗಳಲ್ಲಿ ದರ್ಶನ್ ಮಿಂಚು ಹರಿಸಿದ್ದಾರೆ. ಒಬ್ಬರೇ ದರ್ಶನ್ ಇದ್ದರೆ ಸಾಕೇ… ಎಂದುಕೊಂಡು, ಇಬ್ಬಿಬ್ಬರ ದರ್ಶನ' ಮಾಡಿಸಿದ್ದಾರೆ. ವಿಭಿನ್ನ ಮ್ಯಾನರಿಸಂ ಮೂಲಕಡೆವಿಲ್’ ರೂಪದಲ್ಲಿ ಕಾಡುವ ದರ್ಶನ್ ಒಂದೆಡೆಯಾದರೆ, ರುಕ್ಮಿಣಿಯೊಂದಿಗೆ ಸದಾ ಸುತ್ತುವ ಕೃಷ್ಣನ ಮತ್ತೊಂದು ದರ್ಶನ'ವೂ ಆಗುತ್ತದೆ. ಹೀಗಾಗಿಸೆಲೆಬ್ರಿಟಿ’ಗಳಿಗೆ ಡಬಲ್ ಮನರಂಜನೆ..! ಎರಡೂ ಅವತಾರಗಳಲ್ಲಿ ದರ್ಶನ್ ಲೀಲಾಜಾಲವಾಗಿ ನಟಿಸಿದ್ದಾರೆ.

ದ್ವಿಪಾತ್ರಕ್ಕೆ ಅಗತ್ಯ ತಯಾರಿ, ಡೈಲಾಗ್ ಡೆಲಿವರಿ, ಕಲರ್‌ಫುಲ್ ಕಾಸ್ಟೂಮ್… ಹೀಗೇ ಥರೇವಾರಿ ರೂಪು-ರಂಗುಗಳಲ್ಲಿ ದರ್ಶನ್ ಮತ್ತಷ್ಟು ಕಂಗೊಳಿಸುವಂತೆ ಮಾಡುವಲ್ಲಿ ಪ್ರಕಾಶ್ ಮತ್ತವರ ಬಳಗ ಸಾಕಷ್ಟು ಶ್ರಮ ವಹಿಸಿರುವುದು ಎದ್ದು ಕಾಣುತ್ತದೆ. ಪ್ರಸಕ್ತ ಬೆಳವಣಿಗೆಗೂ `ಡೆವಿಲ್’ ಅವತಾರಕ್ಕೂ ಯಾವುದೇ ಸಾಮ್ಯತೆ ಬಾರದಂತೆ ಎಚ್ಚರಗೊಂಡಿರುವುದೂ ನಿರ್ದೇಶಕರ ಜಾಣ್ಮೆಗೆ ಹಿಡಿದ ಕನ್ನಡಿ.

ಚುರುಕು ಸಂಭಾಷಣೆ ಮೂಲಕ ಕಾಂತರಾಜ್ ಚಪ್ಪಾಳೆ ಗಿಟ್ಟಿಸಿದರೆ, ನೆರಳು-ಬೆಳಕಿನ ಸಮಚಿತ್ತ ಆಟ-ನೋಟದ ಮೂಲಕ ಕ್ಯಾಮೆರಾಮನ್ ಸುಧಾಕರ್ ಗಮನ ಸೆಳೆಯುತ್ತಾರೆ. ಹಾಡುಗಳಿಗಿಂತ ಹಿನ್ನೆಲೆ ಸಂಗೀತದಲ್ಲಿ ಅಜನೀಶ್ ಲೋಕನಾಥ್ ಬ್ಯಾಂಡು ಜೋರಾಗಿ ಸದ್ದು ಮಾಡುತ್ತದೆ.

ರಚನಾ ರೈ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶೋಭರಾಜ್, ಚಂದು ಗೌಡ ಹಾಗೂ ಗಿಲ್ಲಿ ನಟ, ಹುಲಿ ಕಾರ್ತಿಕ್ ಸೇರಿದಂತೆ ಕಲಾವಿದರ ದಂಡೇ ಚಿತ್ರದಲ್ಲಿದೆ. ಗಿಲ್ಲಿ ನಟ, ಹುಲಿ ಕಾರ್ತಿಕ್ ಕಾಮಿಡಿ ಮೂಲಕ ಕಚಗುಳಿಯಿಟ್ಟರೆ, ಅಚ್ಯುತ್ ನಟನೆಯ ಮೂಲಕ ಹತ್ತಿರವಾಗುತ್ತಾರೆ. ಶರ್ಮಿಳಾ ಮಾಂಡ್ರೆ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ, ಇದ್ದಷ್ಟು ಹೊತ್ತು ಇಷ್ಟವಾಗುತ್ತಾರೆ.