ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾ ಗುರುವಾರ, ಡಿಸೆಂಬರ್ 11ರಂದು ತೆರೆ ಕಾಣಲಿದ್ದು, ಅದರ ಬಿಡುಗಡೆ ಮುನ್ನವೇ ಅಭಿಮಾನಿಗಳಲ್ಲಿ ಸಂಭ್ರಮದ ಲಹರಿ ಉಕ್ಕುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದ ಪೋಸ್ಟ್‌ಗಳು, ಫ್ಯಾನ್ ಶೋಗಳ ತಯಾರಿ, ಬ್ಯಾನರ್-ಪೋಸ್ಟರ್‌ಗಳ ಅಲಂಕಾರ ಎಲ್ಲವೂ ಅದನ್ನು ಹಬ್ಬದ ಮಟ್ಟಿಗೆ ತಳ್ಳಿವೆ.
ಸಿನಿಮಾ ರಿಲೀಸ್‌ಗೆ ಕೆಲವೇ ಗಂಟೆಗಳು ಬಾಕಿ ಇರುವ ಸಂದರ್ಭದಲ್ಲಿ ದರ್ಶನ್ ಅವರು ಅಭಿಮಾನಿಗಳಿಗೆ ಭಾವುಕ ಪತ್ರ ಬರೆದಿದ್ದು, ಅದನ್ನು ಅವರ ಪತ್ನಿ ವಿಜಯಲಕ್ಷ್ಮೀ ಸೋಷಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ.
“ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ”: ದರ್ಶನ್ ಬರೆದಿರುವ ಪತ್ರದಲ್ಲಿ “ನನ್ನ ಹೃದಯದಿಂದ ಈ ಸಂದೇಶ ನಿಮಗೆ ಕಳುಹಿಸುತ್ತಿದ್ದೇನೆ. ವಿಜಿ ಅದನ್ನು ನಿಮ್ಮೆಲ್ಲರಿಗೂ ತಲುಪಿಸುತ್ತಾಳೆ. ನಿಮ್ಮ ಪ್ರೀತಿ, ಕಾಳಜಿ, ಬೆಂಬಲ, ನನ್ನ ಸಿನಿಮಾ ಪ್ರಚಾರ… ನಿಮಗೆಲ್ಲರ ಉತ್ಸಾಹವನ್ನು ನೀಡಿದೆ ನಾನು ದೂರದಲ್ಲಿದ್ದರೂ ಪ್ರತಿಕ್ಷಣ ಅನುಭವಿಸುತ್ತಿದ್ದೇನೆ ಎಂದಿದ್ದಾರೆ
ಅಭಿಮಾನಿಗಳ ಒಗ್ಗಟ್ಟಿನ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದರೆ, ಇದೇ ಸಂದರ್ಭದಲ್ಲಿ ವದಂತಿ ಮತ್ತು ನೆಗೆಟಿವಿಟಿಗೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ. “ಯಾರು ಏನೇ ಹೇಳಿದರೂ, ಯಾವುದೇ ವದಂತಿ, ಯಾವುದೇ ನೆಗೆಟಿವಿಟಿ ನಿಮ್ಮ ಮನಸ್ಸನ್ನು ಅಲುಗಾಡಿಸಲು ಬಿಡಬೇಡಿ. ಈ ಕಾಲದಲ್ಲಿ ನನ್ನ ದೊಡ್ಡ ಬಲ ನೀವು. ‘ಡೆವಿಲ್’ ಕಡೆಗೆ ಗಮನ ಹರಿಸಿ. ನನ್ನ ಅನುಪಸ್ಥಿತಿಯಲ್ಲಿಯೂ ನೀವು ಪ್ರತಿಯೊಂದು ಪ್ರಶ್ನೆಗೆ, ಅನುಮಾನಕ್ಕೆ ಚಿತ್ರ ಯಶಸ್ಸಿನ ಮೂಲಕ ಉತ್ತರಿಸಬೇಕು.” ಎಂದಿದ್ದಾರೆ
“ನನ್ನ ಮೇಲೆ ನೀವು ತೋರಿದ ಪ್ರೀತಿಯನ್ನು ‘ಡೆವಿಲ್’ಗೂ ತೋರಿಸಿ. ಪದಗಳಿಂದಲ್ಲ, ಚಿತ್ರದ ಅದ್ಭುತ ಯಶಸ್ಸಿನ ಮೂಲಕ ಉತ್ತರಿಸಬೇಕು. ನಿಮ್ಮ ಒಗ್ಗಟ್ಟೆ ನನಗೆ ಹೆಮ್ಮೆ. ನಿಮ್ಮನ್ನೆಲ್ಲ ಮತ್ತೆ ಭೇಟಿಯಾಗುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ.” ಎಂದಿದ್ದಾರೆ.
ಇದಲ್ಲದೆ, ಅವರು ಅಭಿಮಾನಿಗಳ ನಿಷ್ಠೆ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿ “ನನ್ನ ಸುತ್ತಲೂ ಗೋಡೆಯಂತೆ ನಿಂತಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನನ್ನು ಎಷ್ಟು ನಂಬುತ್ತೀರೋ, ನಾನು ನನ್ನ ಜನರನ್ನು ಅಷ್ಟೇ ನಂಬುತ್ತಿದ್ದೇನೆ. ಕಾಲವೇ ಸತ್ಯ ಹೇಳುತ್ತದೆ.”
ಅಭಿಮಾನಿಗಳಲ್ಲೂ ಸಂಭ್ರಮ: ಈ ಪತ್ರ ಪ್ರಕಟವಾದ ಬಳಿಕ ದರ್ಶನ್ ಫ್ಯಾನ್ ಪೇಜ್‌ಗಳಲ್ಲಿ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಫರ್ಸ್ಟ್ ಡೇ ಫರ್ಸ್ಟ್ ಶೋ ಪೋಸ್ಟರ್‌ಗಳು, ಪಟಾಕಿ ಶೋ, ವಿಶೇಷ ಪೂಜೆ, ಸಿನಿಮಾ ಹಾಲ್ ಅಲಂಕಾರ ಎಲ್ಲವೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಗುರುವಾರ ಬಿಡುಗಡೆಯಾಗುತ್ತಿರುವ ಡೆವಿಲ್ ಚಿತ್ರಕ್ಕೆ ಈಗಲೇ ಬಂಪರ್ ಓಪನಿಂಗ್ ಗ್ಯಾರೆಂಟಿ ಎನ್ನುವ ಅಭಿಪ್ರಾಯ ಸಿನಿಮಾರಂಗದಲ್ಲಿ ತೇಲುತ್ತಿದೆ.









