ಕೊಪ್ಪಳ: ನೂರಾರು ಕನಸುಗಳನ್ನು ಹೊತ್ತು, ಜೀವನದ ಮಹತ್ವದ ಹೆಜ್ಜೆಯನ್ನು ಇಡುವ ಮುನ್ನವೇ ಕೂಡಿ ಬಾಳಬೇಕಾದ ಜೋಡಿಯೊಂದು ದುರಂತ ಅಂತ್ಯ ಕಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಸಮೀಪದಲ್ಲಿ ಭಾನುವಾರ ನಡೆದಿದೆ.
ಆಕೆ ಈಗ ತಾನೆ ಹದಿವಯಸ್ಸು ದಾಟಿದ ಯುವತಿ, ಆತನಿಗೂ ಕೂಡ 26ರ ಹರಯ. ಇಬ್ಬರನ್ನೂ ಒಂದು ಮಾಡಿ ಇದೇ 21ನೇ ತಾರೀಖಿನಂದು ಅಕ್ಷತೆ ಹಾಕಲು ಎರಡೂ ಕುಟುಂಬಸ್ಥರು ವಿವಾಹವನ್ನು ನಿಶ್ಚಯಿಸಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.
ನಡೆದಿದ್ದೇನು?: ಕೊಪ್ಪಳ ತಾಲೂಕಿನ ಇರಕಲ್ಲಗಡಾ ಗ್ರಾಮದ ಕರಿಯಪ್ಪ ಮಡಿವಾಳ (26) ಮತ್ತು ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಕವಿತಾ (19) ಎನ್ನುವವರ ವಿವಾಹ ಡಿ. 21ರಂದು ನಿಶ್ಚಯವಾಗಿತ್ತು. ಇದಕ್ಕಾಗಿ ಇಬ್ಬರು ಜತೆಗೂಡಿ ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗಾಗಿ ಮುನಿರಾಬಾದ್‌ಗೆ ತೆರಳಿದ್ದರು. ಎಲ್ಲವನ್ನೂ ಮುಗಿಸಿಕೊಂಡು ಗಂಗಾವತಿ ಮಾರ್ಗವಾಗಿ ಮುಸ್ಟೂರು ಗ್ರಾಮಕ್ಕೆ ವಾಪಸ್ ಆಗುತ್ತಿರುವ ವೇಳೆ ಇವರು ಹೋಗುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದ್ದು ಇಬ್ಬರೂ ಸಾವಿಗೀಡಾಗಿದ್ದಾರೆ.
ಐದು ತಿಂಗಳ ಹಿಂದಷ್ಟೇ ಇವರ ನಿಶ್ಚಿತಾರ್ಥ ನಡೆದಿತ್ತು. ಈಗಾಗಲೇ ನೆಂಟರಿಷ್ಟರಿಗೆ, ಸ್ನೇಹಿತರಿಗೆ ಮದುವೆ ಆಮಂತ್ರಣವನ್ನು ನೀಡಿದ್ದರು. ವಿವಾಹದ ಸಕಲ ಸಿದ್ಧತೆಗಳು ಮನೆಯಲ್ಲಿ ನಡೆದಿದ್ದವು. ಅಲ್ಲದೇ ಮುನಿರಾಬಾದ್ ಸುತ್ತಲಿನ ಜಾಗದಲ್ಲಿ ಫೋಟೋ ಹಾಗೂ ವಿಡಿಯೋ ತೆಗೆಯಿಸಿಕೊಂಡು ಖುಷಿಪಟ್ಟಿದ್ದರು. ಆದರೆ, ಸಂಭ್ರಮ ತುಂಬಿರಬೇಕಾದ ಇಬ್ಬರ ಮನೆಗಳಲ್ಲೂ ಸೂತಕದ ಛಾಯೆ ಆವರಿಸಿದ್ದು, ಕುಟುಂಬಸ್ಥರು ಕಣ್ಣೀರಾಗಿದ್ದಾರೆ.






















