ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ಆಚರಿಸಲು ಮುಂದಾದ ಎಂಇಎಸ್ ನಾಡದ್ರೋಹಿಗಳಿಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ನಾಟಕೀಯವಾಗಿ ಪ್ರತಿಭಟಿಸಲು ಬಂದಿದ್ದ ಒಬ್ಬೊಬ್ಬರನ್ನೇ ಬಂಧಿಸಿ ಪೊಲೀಸರು ವಾಹನದಲ್ಲಿ ಕರೆದೊಯ್ದು ಹಡೆಮುರಿ ಕಟ್ಟುವ ಕೆಲಸ ಮಾಡಿದ್ದಾರೆ. ಮತ್ತೊಂದು ಕಡೆಗೆ ಕೊಲ್ಲಾಪುರದಲ್ಲಿ ಶಿವಸೇನೆಯವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮೇಲೆ ಜೈ ಮಹಾರಾಷ್ಟ್ರ ಎನ್ನುವ ಸ್ಟಿಕರ್ ಅಂಟಿಸಿ ಅಟ್ಟಹಾಸ ಮೆರೆದರು. ಇತ್ತ ಅಥಣಿಯಲ್ಲಿ ಕರವೇ ಕಾರ್ಯಕರ್ತರು ಕೊಲ್ಲಾಪುರದಲ್ಲಿ ಶಿವಸೇನೆಯವರ ಪುಂಡಾಟಿಕೆಯನ್ನು ವಿರೋಧಿಸಿ ರಸ್ತೆ ತಡೆ ನಡೆಸಿದರು.
ಪ್ರತಿ ವರ್ಷವೂ ಕರ್ನಾಟಕ ಸರ್ಕಾರಕ್ಕೆ ಮುಜುಗುರ ತರುವ ನಿಟ್ಟಿನಲ್ಲಿ ಅಧಿವೇಶನ ನಡೆಯುವ ಮೊದಲ ದಿನವೇ ಬೆಳಗಾವಿಯಲ್ಲಿ ಮಹಾಮೇಳಾವ್ ಹೆಸರಿನಲ್ಲಿ ಎಂಇಎಸ್ ಮುಖಂಡರು ನಾಡದ್ರೋಹಿ ಚಟುವಟಿಕೆಗಳನ್ನು ಮಾಡುತ್ತಿದ್ದರು, ಎಂಇಎಸ್ ಪುಂಡರಿಗೆ ಕಳೆದ ವರ್ಷದಿಂದ ವರ್ಷದಿಂದ ಯಾವುದಕ್ಕೂ ಅನುಮತಿ ಕೊಟ್ಟಿರಲಿಲ್ಲ. ಈ ಬಾರಿ ಕೂಡ ಮಹಾಮೇಳಾವ್‌ಗೆ ಅನುಮತಿ ಕೊಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಸ್ಪಷ್ಟವಾಗಿ ಹೇಳಿದ್ದರು. ಆದರೆ ಅದನ್ನು ಕೇಳದೇ ಮಹಾಮೇಳಾವ್ ಮಾಡಿಯೇ ತೀರುತ್ತೇವೆ ಎನ್ನುವ ಭಂಡತನದ ಮಾತುಗಳನ್ನು ಕೆಲವರು ಆಡಿದ್ದರು. ಆದರೆ ಪೊಲೀಸರು ನಾಡದ್ರೋಹಿಗಳನ್ನು ವ್ಯವಸ್ಥಿತವಾಗಿ ವಶಕ್ಕೆ ಪಡೆದು ಅವರ ಹೋರಾಟವನ್ನು ವಿಫಲಗೊಳಿಸಿದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗೆ ‘ಜೈ ಮಹಾರಾಷ್ಟ್ರ’ ಸ್ಟಿಕ್ಕರ್: ಮಹಾಮೇಳಾವ್‌ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕೊಲ್ಹಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ಕರ್ನಾಟಕದ ಸಾರಿಗೆ ಬಸ್ ತಡೆದು ‘ಜೈ ಮಹಾರಾಷ್ಟ್ರ’ ಎಂದು ಸ್ಟೀಕರ್ ಅಂಟಿಸಿ ಉದ್ಧಟತನ ಪ್ರದರ್ಶಿಸಿದ್ದಾರೆ.






















