Movie Review: ಹೆಣ್ಮಕ್ಕಳ ರಕ್ಷಣೆಗೆ ನಿಂತ ಮಾರುತ

0
35

ಚಿತ್ರ: ಮಾರುತ
ನಿರ್ದೇಶನ: ಎಸ್.ನಾರಾಯಣ್
ನಿರ್ಮಾಣ: ಕೆ.ಮಂಜು ಹಾಗೂ ರಮೇಶ್ ಯಾದವ್
ತಾರಾಗಣ: ಶ್ರೇಯಸ್, ಬೃಂದಾ ಆಚಾರ್ಯ, ವಿಜಯ್ ಕುಮಾರ್, ತಾರಾ, ಸಾಧುಕೋಕಿಲ, ಶರತ್ ಲೋಹಿತಾಶ್ವ ಇತರರು.
ರೇಟಿಂಗ್ಸ್: 3

ಗಣೇಶ್ ರಾಣೆಬೆನ್ನೂರು

ಸಾಮಾಜಿಕ ಜಾಲತಾಣ ಬಹುತೇಕರ ಜೀವನದ ಒಂದು ಭಾಗವಾಗಿದೆ. ಹಲವರಿಗೆ ಅದು ವರವಾದರೆ, ಕೆಲವರಿಗೆ ಜೀವಕ್ಕೆ ಎರವಾಗಿದೆ. ಸೋಶಿಯಲ್ ಮೀಡಿಯಾ ಎಷ್ಟು ಉಪಯೋಗವೋ ಅದನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಜೀವಕ್ಕೆ ಕುತ್ತು ತರಬಹುದು ಎಂಬ ಸಂದೇಶ ಹೊತ್ತು ಬಂದಿದೆ ‘ಮಾರುತ’.

ಹೆಣ್ಣು ಮಕ್ಕಳಿರುವ ಮನೆಯವರಿಗೆ ಇದು ಎಚ್ಚರಿಕೆಯ ಗಂಟೆಯಂತೆ ಗೋಚರಿಸುತ್ತದೆ. ಅವರು ಮನೆಯಲ್ಲೇ ಇರಲಿ, ಹೊರಗೇ ಇರಲಿ… ಅವರು ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂಬುದರ ನಿಗಾ ವಹಿಸಬೇಕಾಗಿರುವುದು ಪೋಷಕರು. ಹೀಗಾಗಿ ಆಗಾಗ ಅವರ ಮೇಲೆ ಹಾಗೂ ಅವರು ಬಳಸುವ ಮೊಬೈಲ್ ಮೇಲೆ ಗಮನ ಹರಿಸಿ ಎಂಬ ಸಂದೇಶವೂ ರವಾನೆಯಾಗಿದೆ.

ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವುದು ಹೇಗೆ..? ಅದನ್ನು ನಿಯಂತ್ರಣದಲ್ಲಿಡಲು ಸಾಧ್ಯವೇ… ಎಂಬುದರ ಕುರಿತು ಬೋಧನೆ ಮಾಡದೇ ಅದೇ ವಿಷಯವನ್ನು ಮನರಂಜನೆಯ ಇತಿಮಿತಿ ಬಳಸಿಕೊಂಡು ವಿಷಯ ದಾಟಿಸಿದ್ದಾರೆ ನಿರ್ದೇಶಕ ಎಸ್.ನಾರಾಯಣ್. ಬೆಂಗಳೂರು, ಮಲೆನಾಡಿನ ಸುತ್ತಮುತ್ತ ತಿರುಗಾಡುತ್ತಾ ಉತ್ತರ ಕರ್ನಾಟಕದ ಅಂಚಿನಿಂದ ಗೋವಾವರೆಗೂ ಕಥೆಯ ವಿಸ್ತಾರವಿದೆ. ವಿಷಯ ದೊಡ್ಡದಾಗಿರುವುದರಿಂದ ಸಿನಿಮಾದ ಕಥನವನ್ನು ಹಿರಿದಾಗಿಯೇ ತೆರೆದಿಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ.

ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಶ್ರೇಯಸ್ ಹಾಗೂ ಬೃಂದಾ ಆಚಾರ್ಯ ಪಾತ್ರಕ್ಕೆ ಅನುಗುಣವಾಗಿ ಅಭಿನಯಿಸಿದ್ದಾರೆ. ಶ್ರೇಯಸ್ ಆಕ್ಷನ್‌ನಲ್ಲಿ ಮಿಂಚು ಹರಿಸಿದ್ದಾರೆ. ವಿಜಯ್ ಕುಮಾರ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ ಹಾಗೂ ರಂಗಾಯಣ ರಘು ಸಿನಿಮಾದುದ್ದಕ್ಕೂ ನಗಿಸಲು ಪ್ರಯತ್ನಿಸಿದರೆ, ಶರತ್ ಲೋಹಿತಾಶ್ವ, ತಾರಾ ಮೊದಲಾದವರು ಭಾವುಕರನ್ನಾಗಿಸುತ್ತಾರೆ.

Previous articleಬೆಂಗಳೂರಿನಲ್ಲಿ ಭಾನುವಾರ ಕರೆಂಟ್ ಇರಲ್ಲ: 80 ಏರಿಯಾಗಳಲ್ಲಿ ‘ಪವರ್ ಕಟ್’!
Next articleಒಂದು ದಿನ ಮೊದಲೇ ಡೆವಿಲ್ ದರ್ಶನ

LEAVE A REPLY

Please enter your comment!
Please enter your name here