ರೈತರ ಅಭಿವೃದ್ಧಿಯ ಹೊಸ ಅಧ್ಯಾಯ: ನಿರ್ಮಲಾ ಸೀತಾರಾಮನ್

0
119

ವಿಜಯನಗರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಸಾಪುರ ಗ್ರಾಮವು ಇಂದು ರೈತರ ಅಭಿವೃದ್ಧಿಯ ನೂತನ ಅಧ್ಯಾಯವನ್ನು ಪ್ರಾರಂಭಿಸಿದೆ. ದೇಶದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿ “ರೈತರ ತರಬೇತಿ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ” (Common Facility Centre)ವನ್ನು ಭವ್ಯವಾಗಿ ಉದ್ಘಾಟಿಸಿದರು.

ಈ ಕೇಂದ್ರವನ್ನು ಕೃಷಿ ಸಂಸ್ಕರಣಾ ಮತ್ತು ಮೌಲ್ಯವರ್ಧನೆ ತರಬೇತಿಗಾಗಿ ವಿಶೇಷವಾಗಿ ಸ್ಥಾಪಿಸಲಾಗಿದ್ದು, ಗ್ರಾಮೀಣ ರೈತರ ಜೀವನಮಟ್ಟ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಯೋಜನೆಯ ಉದ್ದೇಶ ಮತ್ತು ಪ್ರಯೋಜನ: ರೈತರಿಗೆ ಆಧುನಿಕ ಆಹಾರ ಸಂಸ್ಕರಣಾ ತಂತ್ರಜ್ಞಾನಗಳ ಕುರಿತು ತರಬೇತಿ ನೀಡುವುದು, ಸ್ಥಳೀಯ ಉತ್ಪನ್ನಗಳಾದ ಕಡಲೆಬೀಜ ಮತ್ತು ಹುಣಸೆ ಹಣ್ಣುಗಳ ಮೌಲ್ಯವರ್ಧನೆ. ರೈತ ಉತ್ಪಾದಕರ ಸಂಘಗಳಿಗೆ ಮಾರುಕಟ್ಟೆ ಬೆಂಬಲ ಒದಗಿಸುವುದಾಗಿದೆ. ಪ್ರಸ್ತುತ ಈ ಘಟಕವು ವರ್ಷಕ್ಕೆ 200 ಮೆಟ್ರಿಕ್ ಟನ್ ಹುಣಸೆ ಹಣ್ಣು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಸ್ಥಳೀಯ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚು ಬೆಲೆ ಪಡೆಯುವ ಸಾಧ್ಯತೆ ಹೆಚ್ಚುತ್ತದೆ.

ಈ ಕೇಂದ್ರದ ಮೂಲಕ ರೈತ ಉತ್ಪಾದಕರ ಸಂಘಗಳು ಮತ್ತು ಸ್ವಸಹಾಯ ಗುಂಪುಗಳು ತಮ್ಮ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆಗೊಳಿಸಿ ವ್ಯಾಪಾರಿಕವಾಗಿ ಸಬಲರಾಗಬಹುದು. ತರಬೇತಿ ಪಡೆದ ರೈತರು ತಮ್ಮ ಗ್ರಾಮದಲ್ಲಿಯೇ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂಬುದು ಈ ಯೋಜನೆಯ ಪ್ರಮುಖ ಅಂಶ.

“ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ರೈತರೇ ಆಧಾರ. ಅವರ ಉತ್ಪಾದನೆಗೆ ಮೌಲ್ಯವರ್ಧನೆ ನೀಡುವುದರಿಂದ ಗ್ರಾಮೀಣ ಭಾರತದ ಬದುಕು ಬದಲಾಯಿಸಬಹುದು. ಈ ಯೋಜನೆಯಿಂದ ಕಸಾಪುರ ಸೇರಿದಂತೆ ವಿಜಯನಗರ ಜಿಲ್ಲೆಯ ಹಲವು ಗ್ರಾಮಗಳಿಗೆ ಹೊಸ ಬೆಳಕು ಬೀಳಲಿದೆ ಎಂದು ವಿತ್ತ ಸಚಿವೆ ಸೀತಾರಾಮನ್ ಹೇಳಿದರು.

ಬರಪೀಡಿತ ಪ್ರದೇಶಕ್ಕೆ ಹೊಸ ನಂಬಿಕೆ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ದಕ್ಷಿಣ ಭಾರತದ ಅತ್ಯಂತ ಬರಪೀಡಿತ ಪ್ರದೇಶಗಳಲ್ಲಿ ಒಂದಾಗಿದೆ. ಮಳೆಯ ಅಭಾವದಿಂದ ಇಲ್ಲಿ ಕೃಷಿ ಚಟುವಟಿಕೆಗಳು ನಿರಂತರ ಸವಾಲು ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಈ ಯೋಜನೆಯು ಸ್ಥಳೀಯ ರೈತರಿಗೆ ನೂತನ ಆರ್ಥಿಕ ಮಾರ್ಗಗಳನ್ನು ತೆರೆಯುವ ನಿರೀಕ್ಷೆ ಹುಟ್ಟಿಸಿದೆ.

ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತ ನಾಯಕರು, ಹಾಗೂ ಸ್ಥಳೀಯ ಜನತೆ ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೇಂದ್ರದ ಉದ್ಘಾಟನೆಯು ಕಸಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಹೊಸ ಆಶಾಕಿರಣದಂತಾಗಿದೆ — “ಕೃಷಿಯಿಂದ ಉದ್ಯಮದತ್ತ” ಎಂಬ ದೃಷ್ಟಿಯನ್ನು ಹೂಂದಿದೆ.

Previous articleದೀಪಾವಳಿಗೆ ಚಿನ್ನದ ಬೆಲೆ ಗಗನಕ್ಕೆ: ಖರೀದಿಗೆ ಇದು ಸರಿಯಾದ ಸಮಯವೇ?
Next articleಪ್ರೀತಿಗೆ ನಿರಾಕರಿಸಿದ ಯುವತಿ ಕತ್ತು ಸೀಳಿ ಕೊಲೆ: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸಿದ ಘಟನೆ!

LEAVE A REPLY

Please enter your comment!
Please enter your name here