ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಬಾರಿಗೆ ಜೈಲು ಸೇರಿರುವ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿದ್ದು, ಪತಿಯ ಸ್ಥಿತಿ ಕಂಡು ವಿಜಯಲಕ್ಷ್ಮೀ ಕಣ್ಣೀರು ಹಾಕಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಸೇರಿದಾಗಿನಿಂದಲೂ ನಟ ದರ್ಶನ್‌ಗೆ ಒಂದಿಲ್ಲೊಂದು ಸಮಸ್ಯೆ ಕಾಡುತ್ತಲೇ ಇದೆ. ಹಾಸಿಗೆ, ದಿಂಬು ಇಲ್ಲದೇ ಪರದಾಡುವಂತಾಗಿದ್ದು, ಜೈಲಾಧಿಕಾರಿಗಳ ಮುಂದೆ ಅಂಗಲಾಚಿದರೂ ಕೂಡ ಏನೂ ಲಾಭವಿಲ್ಲ. ಇನ್ನೂ ಕೂರಲು ಕುರ್ಚಿಯೂ ಇಲ್ಲದೇ ಒದ್ದಾಡುವಂತಾಗಿದೆ. ಜೊತೆಗೆ ದೇಹಕ್ಕೆ ಆಕ್ಟಿವಿಟಿಯಿಲ್ಲದೆ ಕಷ್ಟವಾಗುತ್ತಿದೆ ಎಂದು ವಿಜಯಲಕ್ಷ್ಮೀ ಮುಂದೆ ಸಂಕಷ್ಟ ತೋಡಿಕೊಂಡಿದ್ದಾರೆ.
ಇತ್ತ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಬರಲು ಕಷ್ಟ ಎದುರಿಸುವಂತಾಗಿದೆ. ಜೈಲಿಗೆ ಬಂದು ಗಂಟೆಗಟ್ಟಲೇ ಕಾದು ಬಳಿಕ ದರ್ಶನ್ ಭೇಟಿಯಾಗಬೇಕು. ಹೀಗಾಗಿ ನಟ ದರ್ಶನ್ ನಮ್ಮ ಹಣೆಬರಹ ಇರೋಹಂಗೆ ಆಗುತ್ತೆ. ನೀನು ಇನ್ಮುಂದೆ ಜೈಲಿಗೆ ಬರಬೇಡ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಜೊತೆಗೆ ಜೈಲಲ್ಲಿ ದರ್ಶನ್ ಕೂಡ ಕಷ್ಟ ಅನುಭವಿಸುತ್ತಿದ್ದು, ಇದನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಇನ್ನೂ ಪ್ರಕರಣದ ಸಹ ಆರೋಪಿಗಳು ಕೂಡ ದರ್ಶನ್ ವಿರುದ್ಧ ಮುನಿಸಿಕೊಂಡಿದ್ದಾರೆ. ದರ್ಶನ್ ಮಾತು, ಸ್ನೇಹ ಅಷ್ಟಕಷ್ಟೇ ಎನ್ನಲಾಗುತ್ತಿದೆ.