ಬೆಂಗಳೂರು: ರಾಜ್ಯ ಸರ್ಕಾರವು ದುಬಾರಿ ಸಿನಿಮಾ ಟಿಕೆಟ್ ದರಕ್ಕೆ ಕಡಿವಾಣ ಹಾಕಲು ಮಹತ್ವದ ನಿರ್ಧಾರ ಕೈಗೊಂಡಿದೆ. ಏಕರೂಪ ಸಿನಿಮಾ ಟಿಕೆಟ್ ದರ ಜಾರಿಯ ಕುರಿತು ಆದೇಶ ಹೊರಡಿಸಲಾಗಿದ್ದು, ಅದು ಇಂದೇ (ಸೆಪ್ಟೆಂಬರ್ 12)ರಿಂದಲೇ ಜಾರಿಗೆ ಬರುತ್ತದೆ ಎಂದು ತಿಳಿಸಲಾಗಿದೆ. ಹೊಸ ಆದೇಶದ ಪ್ರಕಾರ, ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾದ ಮೂಲ ಟಿಕೆಟ್ ದರ 200 ರೂಪಾಯಿ ಮೀರಬಾರದು ಎಂದು ನಿಗದಿಪಡಿಸಲಾಗಿದೆ.
ಹೊಸ ನಿಯಮದ ಪ್ರಮುಖ ಅಂಶಗಳು: ಏಕಪರದೆ (Single Screen) ಹಾಗೂ ಮಲ್ಟಿಪ್ಲೆಕ್ಸ್ (Multiplex) ಎರಡಕ್ಕೂ ಒಂದೇ ರೀತಿಯ ಗರಿಷ್ಠ ದರ. ಮೂಲ ದರ ₹200, ತೆರಿಗೆ ಸೇರಿ ₹236 ಮೀರಬಾರದು. ಈ ಆದೇಶವು ಎಲ್ಲಾ ಚಿತ್ರಮಂದಿರಗಳಿಗೆ ಅನ್ವಯವಾಗಲಿದ್ದು, ಯಾವುದೇ ಕಾರಣಕ್ಕೂ ನಿಯಮವನ್ನು ಉಲ್ಲಂಘಿಸಲು ಅವಕಾಶವಿರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅಭಿಮಾನಿಗಳಿಗೆ ನೆಮ್ಮದಿ: ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಸಮಯದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರವು ₹300-₹500 ವರೆಗೂ ಏರಿಕೆಯಾಗುತ್ತಿತ್ತು. ಸಾಮಾನ್ಯ ಜನರಿಗೆ ಸಿನಿಮಾ ನೋಡುವುದು ಭಾರವಾಗುತ್ತಿತ್ತು. ಸರ್ಕಾರದ ಈ ಕ್ರಮದಿಂದ ಸಿನೆಮಾ ಪ್ರಿಯರಲ್ಲಿ ನೆಮ್ಮದಿ ಮೂಡಿದೆ.
ಸಿನಿ ಕ್ಷೇತ್ರದ ಪ್ರತಿಕ್ರಿಯೆ: ಕೆಲವು ನಿರ್ಮಾಪಕರು ಮತ್ತು ಹಾಲ್ ಮಾಲೀಕರು ಟಿಕೆಟ್ ದರ ಏರಿಕೆ ಆರ್ಥಿಕ ಪರಿಸ್ಥಿತಿ ಹಾಗೂ ನಿರ್ವಹಣಾ ವೆಚ್ಚಕ್ಕೆ ಅಗತ್ಯವೆಂದು ವಾದಿಸುತ್ತಿದ್ದರು. ಆದರೆ ಪ್ರೇಕ್ಷಕರ ಒತ್ತಡ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಉಂಟಾದ ತೀವ್ರ ವಿರೋಧದ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪ್ರಸ್ತುತ ಸಿನಿಮಾ ಅಭಿಮಾನಿಗಳಿಗೆ ಇದು ಒಂದು ದೊಡ್ಡ ಉಡುಗೊರಿಯಂತಾಗಿದೆ.