ಯುಎಇ: ನಿರೀಕ್ಷೆಯಂತೆಯೇ ಪ್ರಸಕ್ತ ಏಷ್ಯಾಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಮುಂದಾಳತ್ವದ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಅತಿಥೇಯ ತಂಡ ಯುಎಇ ವಿರುದ್ಧದ ಪಂದ್ಯದಲ್ಲಿ ಸುಲಭ ಜಯ ಗಳಿಸುವ ಮೂಲಕ ಸದ್ಯ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ. ಸ್ಪಿನ್ನರ್‌ಗಳ ಕೈ ಚಳಕ ಹಾಗೂ ಯುಎಇ ಬ್ಯಾಟರ್‌ಗಳ ನೀರಸ ಪ್ರದರ್ಶನದ ಫಲವಾಗಿ ಭಾರತಕ್ಕೆ ಸುಲಭ 58 ರನ್‌ಗಳ ಗೆಲುವಿನ ಗುರಿಯಷ್ಟೇ ಲಭಿಸಿತು. ಹೀಗಾಗಿ, ಬಲಿಷ್ಠ ಬ್ಯಾಟಿಂಗ್ ಪಡೆಯ ಎದುರು ಯುಎಇ ಬೌಲರ್‌ಗಳು ತನ್ನ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.
ಮೊದಲು ಟಾಸ್ ಗೆದ್ದ ಭಾರತ ತಂಡ, ನೇರವಾಗಿ ಎದುರಾಳಿಗಳನ್ನೇ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಯುನೈಟೆಡ್ ಅರಬ್ ಎಮಿರೈಟ್ಸ್ ತಂಡದ ಆರಂಭಿಕ ಆಟಗಾರರಾದ ಆಲಿಶನ್ ಶರಾಫ್ ಹಾಗೂ ನಾಯಕ ಮೊಹಮ್ಮದ್ ವಾಸೀಂ ಮಾತ್ರ ತಂಡಕ್ಕೆ ಎರಡಂಕಿ ರನ್ ಗಳಿಸಲು ಸಾಧ್ಯವಾದರು. ಆರಂಭದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನ ಓವರ್‌ನಲ್ಲೇ 10 ರನ್ ಗಳಿಸಿದ ಈ ಜೋಡಿ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಯತ್ನ ಮಾಡಿದರು. ಆದರೆ, ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ಈ ಜೋಡಿ ಬೇರ್ಪಟ್ಟಿತು. ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಆಲಿಶನ್ ಶರಾಫ್ ಕೇವಲ 16 ಎಸೆತಗಳಲ್ಲೇ 22 ರನ್ ಗಳಿಸಿದ್ದಾಗ, ಬುಮ್ರಾ ಕ್ಲೀನ್ ಬೌಲ್ಡ್ ಮಾಡಿ ಭಾರತಕ್ಕೆ ಮೊದಲ ವಿಕೆಟ್ ತಂದಿಟ್ಟರು.
ಇಲ್ಲಿಂದ ಯುಎಇ ಪಡೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾಯಕ ಮೊಹಮ್ಮದ್ ವಾಸೀಂ 19 ರನ್ ಗಳಿಸಿ ಕುಲ್‌ದೀಪ್ ಯಾದವ್‌ಗೆ ವಿಕೆಟ್ ನೀಡಿದರು. ಇದಕ್ಕೂ ಮುನ್ನ 3ನೇ ಕ್ರಮಾಂಕದ ಬ್ಯಾಟರ್ ಮೊಹಮ್ಮದ್ ಜೊಹೆಬ್ ಅವರನ್ನು ವರುಣ್ ಚಕ್ರವರ್ತಿ ಔಟ್ ಮಾಡಿದ್ದರು. ಅಲ್ಲದೇ 4ನೇ ಕ್ರಮಾಂಕದ ಬ್ಯಾಟರ್ ರಾಹುಲ್ ಚೋಪ್ರಾ ಕುಲ್‌ದೀಪ್ ಯಾದವ್ ಸ್ಪಿನ್‌ಗೆ ವಿಕೆಟ್ ನೀಡಿದ್ದರು. ಆರಂಭಿಕರಿಂದ ಎರಡಂಕಿ ರನ್‌ಗಳನ್ನು ಪಡೆದ ಯುಎಇ ಪಡೆಯಲ್ಲಿ ಮತ್ಯಾರೂ ಕೂಡ ಒಂದಂಕಿ ರನ್ ದಾಟಿ ಮುಂದೆ ಸಾಗಲಿಲ್ಲ.
ಆಸೀಫ್ ಖಾನ್ 2, ಹರ್ಷಿತ್ ಕೌಶಿಕ್ 2, ಧ್ರುವ ಪರಶಾರ್, ಹೈದರ್ ಅಲಿ ಹಾಗೂ ಸಿಮಾರ್ಜಿತ್ ಸಿಂಗ್ ತಲಾ ಒಂದು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಜುನೈದ್ ಸಿದ್ದಿಕಿ ಕೂಡ ಶೂನ್ಯ ಸುತ್ತಿ ಹೊರ ನಡೆದರು. ಇದರಿಂದ, ಯುಎಇ ಪಡೆ ಕೇವಲ 13.1 ಓವರ್‌ಗಳಲ್ಲೇ ಸರ್ವಪತನ ಕಂಡಿತು.
ಭಾರತ ಸ್ಫೋಟಕ ಆರಂಭ: ಗೆಲುವಿನ ಗುರಿ ಕಡಿಮೆಯಾಗಿದ್ದರಿಂದ ಭಾರತದ ಆರಂಭಿಕರಿಂದ ಸ್ಫೋಟಕ ಆರಂಭ ಮೂಡಿ ಬಂದಿತು. ಅಭಿಷೇಕ್ ಶರ್ಮಾ ಹಾಗೂ ಉಪನಾಯಕ ಶುಭಮನ್ ಗಿಲ್ ಮೊದಲ ಓವರ್‌ನಿಂದಲೇ ಬೌಂಡರಿ-ಸಿಕ್ಸರ್‌ಗಳನ್ನು ಬಾರಿಸಿದ ಈ ಜೋಡಿ 48 ರನ್ ಜೊತೆಯಾಟ ಕಟ್ಟಿದರು. ಸೂರ್ಯ 7 ರನ್‌ಗಳಿಸಿ ಗೆಲುವು ಸಾಧಿಸಿದರು. ಕೇವಲ 4.3 ಓವರ್‌ಗಳಲ್ಲೇ ಗೆಲುವನ್ನು ಸಾಧಿಸಿದ ಟೀಮ್ ಇಂಡಿಯಾ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಆದರೆ, ಈಗ ಸೆಪ್ಟೆಂಬರ್ 14ರಂದು ಪಾಕಿಸ್ತಾನವನ್ನು ಎದುರಿಸಲಿದ್ದು, ಆ ಪಂದ್ಯ ಗೆದ್ದರೆ, ಭಾರತ ಸೆಮಿಸ್‌ಗೆ ತಲುಪುವುದು ಖಚಿತವಾಗಲಿದೆ.