ಕೆ ಲಕ್ಷ್ಮಣ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ಜರುಗಿದ 5ನೇ ದಿನದ ಸಾರ್ವಜನಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ವಿಜೃಂಭಣೆಯಿಂದ ಶಾಂತಿಯುತವಾಗಿ ಜರುಗಿತು. ಹೊಸಪೇಟೆ ಉಪವಿಭಾಗದ ವ್ಯಾಪ್ತಿಯಲ್ಲಿ 161 ಮೂರ್ತಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 666 ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು.
ನಗರ ವ್ಯಾಪ್ತಿ: ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ 47, ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 34, ಚಿತ್ತವಾಡ್ಗಿ ಠಾಣೆ ವ್ಯಾಪ್ತಿಯಲ್ಲಿ 20, ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ 15, ಟಿ.ಬಿ. ಡ್ಯಾಂ ಠಾಣೆ ವ್ಯಾಪ್ತಿಯಲ್ಲಿ 5 ಗಣೇಶ ಮೂರ್ತಿಗಳು ಹಾಗೂ ಹಂಪಿ ವೃತ್ತದ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 28, ಹಂಪಿ ಪ್ರವಾಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ಗಣೇಶ ಮೂರ್ತಿಗಳು ಸೇರಿದಂತೆ 161 ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು.
ಹೊಸಪೇಟೆ ನಗರದ ಗಣಪತಿಗಳು ಸಾಗುವ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ಮುಖ್ಯ ಮಸೀದಿ, ಮೂರಂಗಡಿ ವೃತ್ತ, ಪುಣ್ಯಮೂರ್ತಿ ವೃತ್ತ, ಗಾಂಧಿಚೌಕ್, ಮಾರ್ಡನ್ ವೃತ್ತ, ಕನಕದಾಸ ವೃತ್ತ, ಡಾ.ಪುನೀತ್ ರಾಜ್‌ಕುಮಾರ್ ವೃತ್ತ, ಬಳ್ಳಾರಿ ರಸ್ತೆ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಚಿತ್ತವಾಡ್ಗಿ, ಟಿ.ಬಿ. ಡ್ಯಾಂ ಸೇರಿದಂತೆ ತಾಲೂಕಿನ ಹಂಪಿ, ಕಮಲಾಪುರ, ಗಾದಿಗನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗೂ ಕೂಡ್ಲಿಗಿ ಮತ್ತು ಹರಪನಹಳ್ಳಿ ಉಪವಿಭಾಗದ ವ್ಯಾಪ್ತಿಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಲಾಖೆ ಅಗತ್ಯ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಿತ್ತು.
ವಿಸರ್ಜನೆ ಸ್ಥಳದಲ್ಲಿ ಭದ್ರತೆ: ವಿಸರ್ಜನೆಗೊಳ್ಳುವ ನಗರದ ಹೆಚ್.ಎಲ್.ಸಿ ಕಾಲುವೆ ಹಾಯ್ದು ಹೋಗುವ ಹರಿಹರ ರಸ್ತೆ, ಸಂಡೂರು ರಸ್ತೆ, ಜಂಬುನಾಥ ರಸ್ತೆ, ಬಳ್ಳಾರಿ ರಸ್ತೆ, ಎಲ್.ಎಲ್.ಸಿ ಕಾಲುವೆ ಹಾದು ಹೋಗುವ ಟಿ.ಬಿ. ಡ್ಯಾಂ, ಚಿತ್ತವಾಡ್ಗಿ, ಸ್ಟೇಷನ್‌ರಸ್ತೆ ಸೇರಿದಂತೆ ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳುವ ಇತರೆ ಸ್ಥಳಗಳಲ್ಲಿ ಬ್ಯಾರಿಕೇಡ್ ಗಳು, ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಭದ್ರತೆಗಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಭದ್ರತೆ: ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರುಣಾಂಗ್ಷುಗಿರಿ, ಅಡಿಷನಲ್ ಎಸ್ಪಿ ಜಿ.ಮಂಜುನಾಥ ಮಾರ್ಗದರ್ಶನದಲ್ಲಿ ಹೊಸಪೇಟೆ ಡಿವೈಎಸ್ಪಿ ಡಾ.ಟಿ. ಮಂಜುನಾಥ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್‌ಮನಿ, ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ 13 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 800ಕ್ಕೂ ಹೆಚ್ಚು ಪೊಲೀಸರು, ಅಧಿಕಾರಿಗಳು, ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿ ಸೇರಿ 3 ಕೆ.ಎಸ್.ಆರ್.ಪಿ, 4 ಡಿಆರ್ ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
ಮಳೆರಾಯನ ಕಾಟ: ಗಣೇಶ ಉತ್ಸವಕ್ಕೆ ಆರಂಭದಿಂದಲೂ ಬಿಟ್ಟು ಬಿಡದೆ ಕಾಡುತ್ತಿರುವ ಮಳೆರಾಯ ದಿನದ ಗಣೇಶ ವಿಸರ್ಜನೆ ಸಂದರ್ಭದಲ್ಲಿಯೂ ಕೆಲಕಾಲ ಸುರಿಯುವ ಮೂಲಕ ಗಣೇಶ ಮೆರವಣಿಗೆಗೆ ಅಡ್ಡಿಪಡಿಸಿದ ಘಟನೆ ಜರುಗಿತು.
ಕುಣಿತದ ಹುರುಪು: ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಯುವಕರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಪರಸ್ಪರ ಬಣ್ಣ ಎರಚಿ ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯುವತಿಯರು ಹಾಡಿಗೆ ಸ್ಟೆಪ್ ಹಾಕುತ್ತಿದ್ದರೆ, ಅವರ ತಾಯಂದಿರು ವಿಡಿಯೋ ಮಾಡಿ ಸಾಥ್ ನೀಡಿದರು.