ಬೆಂಗಳೂರು: ಈಗಾಗಲೇ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಬಳಿಕ ಜಾಮೀನು ಮೇಲೆ ಹೊರಬಂದಿರುವ ನಟ ದರ್ಶನ ತೂಗುದೀಪ ಹೆಸರು ಈಗ ಮತ್ತೆ ಚರ್ಚೆಗೆ ಬಂದಿದೆ. ಆದರೆ, ಈಗ ಹೆಸರು ಬಂದಿದ್ದು ದರ್ಶನ ಅವರದ್ದಲ್ಲಾ ಬದಲಾಗಿ ಅವರ ಅಭಿಮಾನಿಗಳದ್ದು, ದರ್ಶನ ಅಭಿಮಾನಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ನಮ್ಮ ಬಾಸ್ ದೇವರು, ಬಾಸ್ ಬಿಟ್ರೆ ಯಾರು ಇಲ್ಲ ಎಂದು ದರ್ಶನ ಅಭಿಮಾನಿಗಳು ನನ್ನ ಹೊಟ್ಟೆಗೆ ಚುಚ್ಚೋದಕ್ಕೆ ಬಂದರು ಎಂದು ನಟ ಪ್ರಥಮ್ ಗಂಭೀರ ಆರೋಪ ಮಾಡಿದ್ದಾರೆ.
“ದೊಡ್ಡಬಳ್ಳಾಪುರ ಬಳಿಯ ರಾಮಸ್ವಾಮಿಪಾಳ್ಯಕ್ಕೆ ಕಾರ್ಯಕ್ರಮಕ್ಕೆ ಹೋಗಿದ್ದ ನನ್ನನ್ನು ವ್ಯಕ್ತಿಯೋರ್ವ ಬಂದು ಬಾಸ್ ಕರೆಯುತ್ತಿದ್ದಾರೆ ಬಾ ಕರೆದಿದ್ದಾನೆ. ನಾನಲ್ಲಿ ಹೋಗುತ್ತಿದ್ದಂತೆ ನನ್ನನ್ನು ಕೆಲವರು ಸುತ್ತುವರಿದಿದ್ದಾರೆ. ಅಲ್ಲಿದ್ದ ಓರ್ವ ಉದ್ದನೆಯ ಡ್ರಾಗರ್ ಆಯುಧ ತೋರಿಸಿ ಹೊಟ್ಟೆಗೆ ಚುಚ್ಚುವಂತೆ ನಟಿಸುತ್ತಾ, ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದಾನೆ” ಎಂದು ಪ್ರಥಮ್ ಹೇಳಿದ್ದಾರೆ.
“ನಾನು ದರ್ಶನ ಅಭಿಮಾನಿಗಳ ಬಗ್ಗೆ ಆಡಿದ ಮಾತು ಇಟ್ಟುಕೊಂಡು ಅವರು ಕೊಲೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಅಲ್ಲಿ ರಕ್ಷಕ ಬುಲೆಟ್ ಕೂಡ ಇದ್ದ” ಎಂದು ಪ್ರಥಮ್ ಹೇಳಿದ್ದಾರೆ.
ಮೊದಲಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಥಮ್, ದರ್ಶನ ಅಭಿಮಾನಿಗಳ ದುರ್ವರ್ತನೆಯನ್ನು ಖಂಡಿಸುತ್ತಿದ್ದರು. ಅಲ್ಲದೇ ದರ್ಶನ ಅಭಿಮಾನಿಗಳು ಕೂಡ ಪ್ರಥಮ್ ಅವರನ್ನು ನಿಂದಿಸುತ್ತಲೇ ಇದ್ದರು. ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಿದ್ದ ಜಗಳ ಈಗ ಇದು ಆಯುಧಗಳನ್ನು ತೋರಿಸಿ ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದೆ.
ಈ ಕುರಿತಂತೆ ನಟ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಬಳಿ ಮೌಖಿಕ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ನಟಿ ರಮ್ಯಾ ಕಿಡಿ: ದರ್ಶನ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೂಡ ಕಿಡಿಕಾರಿದ್ದಾರೆ. ದರ್ಶನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಅಶ್ಲೀಲ ಸಂದೇಶಗಳನ್ನು ಉಲ್ಲೇಖಿಸಿ ನಟಿ ರಮ್ಯಾ ಕಿಡಿಕಾರಿದ್ದಾರೆ. ರೇಣುಕಾಸ್ವಾಮಿ ಮೇಸೆಜ್ ಗಳಿಗೂ ಡಿ ಬಾಸ್ ಕೆಲ ಅಭಿಮಾನಿಗಳಿಗೂ ವ್ಯತ್ಯಾಸವಿಲ್ಲ. ಸ್ತ್ರೀ ವಿರೋಧಿ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಎನ್ನುವುದಕ್ಕೆ ನಿಮ್ಮ ಕಮೆಂಟ್ಸಗಳೇ ಸಾಕ್ಷಿ ಎಂದು ಮತ್ತೊಂದು ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.