ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣಾಧಿಕಾರಿ ನೇಮಿಸಿದ ಆಯೋಗ

0
38

ನವದೆಹಲಿ: ಭಾರತೀಯ ಚುನಾವಣಾ ಆಯೋಗ (ಇಸಿಐ) ಉಪರಾಷ್ಟ್ರಪತಿ ಚುನಾವಣೆಗೆ ಚುನಾವಣಾ ಅಧಿಕಾರಿ ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಿದೆ.

ಜಗದೀಪ್‌ ಧನಕರ್ ಅವರ ರಾಜಿನಾಮೆಯಿಂದ ತೆರವಾದ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗವು ಓರ್ವ ಚುನಾವಣಾ ಅಧಿಕಾರಿ, ಇಬ್ಬರು ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಿಸಿದೆ.

ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಚುನಾವಣಾ ಅಧಿಕಾರಿಯಾಗಿ ನೇಮಿಸಿದೆ. ರಾಜ್ಯಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಗರಿಮಾ ಜೈನ್, ರಾಜ್ಯಸಭಾ ಸಚಿವಾಲಯದ ನಿರ್ದೇಶಕ ವಿಜಯ್ ಕುಮಾರ್ ಅವರನ್ನು ಸಹಾಯಕ ಚುನಾವಣಾ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಕಾನೂನು ಮತ್ತು ನ್ಯಾಯ ಸಚಿವಾಲಯದೊಂದಿಗೆ ಸಮಾಲೋಚಿಸಿ ಮತ್ತು ರಾಜ್ಯಸಭೆಯ ಉಪ ಸಭಾಪತಿಯವರ ಒಪ್ಪಿಗೆಯೊಂದಿಗೆ ಚುನಾವಣಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಚುನಾವಣಾ ಆಯೋಗವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಚುನಾವಣಾ ಆಯೋಗವು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ, 1952ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಅಧಿಕಾರಿಗಳ ನೇಮಕ ಮಾಡಲಾಗುತ್ತದೆ. ಇಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಸಹಾಯಕ ಚುನಾವಣಾ ಅಧಿಕಾರಿಗಳ ನೇಮಕಕ್ಕೆ ಅವಕಾಶವಿದೆ. ಇನ್ನು ಚುನಾವಣಾ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಆಯೋಗ ತಿಳಿಸಿದೆ.

“ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಇಲ್ಲವೇ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಯನ್ನು ಸರದಿ ಪ್ರಕಾರ ಚುನಾವಣಾ ಅಧಿಕಾರಿಯನ್ನಾಗಿ ನೇಮಕ ಮಾಡಲಾಗುತ್ತದೆ. ಕಳೆದ ಬಾರಿಯ ಉಪರಾಷ್ಟ್ರಪತಿ ಚುನಾವಣೆಯ ಸಮಯದಲ್ಲಿ, ಲೋಕಸಭೆಯ ಪ್ರಧಾನ ಕಾರ್ಯದರ್ಶಿಯವರನ್ನು ಚುನಾವಣಾ ಅಧಿಕಾರಿಯಾಗಿ ನೇಮಿಸಲಾಯಿತು” ಎಂದು ಆಯೋಗ ತಿಳಿಸಿದೆ.

ಚುನಾವಣೆ ವ್ಯವಸ್ಥೆ: ಈ ಚುನಾವಣೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭಾ ಸದಸ್ಯರು ಮಾತ್ರ ಮತ ಚಲಾಯಿಸುತ್ತಾರೆ. ಅದು ಕೂಡ ರಹಸ್ಯ ಮತದಾನ ಮತ್ತು ಅನುಪಾತದ ವ್ಯವಸ್ಥೆಯನ್ನು ಬಳಸಿ. ಉಪರಾಷ್ಟ್ರಪತಿ ಚುನಾವಣೆಯು ಅನುಪಾತದ ಪ್ರಾತಿನಿಧ್ಯವನ್ನು ಆಧರಿಸಿದ ಏಕ ವರ್ಗಾವಣೆ ಮತ ವ್ಯವಸ್ಥೆಯನ್ನು ಬಳಸುತ್ತದೆ. ಈ ವ್ಯವಸ್ಥೆಯಲ್ಲಿ, ಸಂಸದರು ಅಭ್ಯರ್ಥಿಗಳನ್ನು ಆದ್ಯತೆಯ ಕ್ರಮದಲ್ಲಿ ಶ್ರೇಣೀಕರಿಸುತ್ತಾರೆ. ಮೊದಲ ಸುತ್ತಿನಲ್ಲಿ ಯಾವುದೇ ಅಭ್ಯರ್ಥಿಯು ಸಂಪೂರ್ಣ ಬಹುಮತವನ್ನು (50% + 1 ಮಾನ್ಯ ಮತ) ಸಾಧಿಸದಿದ್ದರೆ, ಕಡಿಮೆ ಮತಗಳನ್ನು ಹೊಂದಿರುವ ಅಭ್ಯರ್ಥಿಯನ್ನು ತೆಗೆದುಹಾಕಲಾಗುತ್ತದೆ ಮತ್ತು ಅವರ ಮತಗಳನ್ನು ಎರಡನೇ ಆದ್ಯತೆಯ ಆಧಾರದ ಮೇಲೆ ಮರುಹಂಚಿಕೆ ಮಾಡಲಾಗುತ್ತದೆ. ಅಭ್ಯರ್ಥಿಯು ಅಗತ್ಯವಿರುವ ಬಹುಮತವನ್ನು ಸಾಧಿಸುವವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ. ಇದು ಚುನಾಯಿತ ಅಭ್ಯರ್ಥಿಯು ಸಂಸತ್ತಿನ ವಿಶಾಲ ಬೆಂಬಲವನ್ನು ಪ್ರತಿಬಿಂಬಿಸುತ್ತದೆ.

ಯಾರು ಮತ ಚಲಾಯಿಸುತ್ತಾರೆ?: ರಾಜ್ಯಸಭೆಯ 233 ಚುನಾಯಿತ ಸಂಸದರು, ರಾಜ್ಯಸಭೆಯ 12 ನಾಮನಿರ್ದೇಶಿತ ಸಂಸದರು ಮತ್ತು ಲೋಕಸಭೆಯ 543 ಸಂಸದರು ತಮ್ಮ ಮತಗಳನ್ನು ಚಲಾಯಿಸಬಹುದು. ಒಟ್ಟು 788 ಜನರು ಮತ ಚಲಾಯಿಸಬಹುದು. ಆದಾಗ್ಯೂ, ಚುನಾವಣಾ ಆಯೋಗವು ಉಪರಾಷ್ಟ್ರಪತಿ ಚುನಾವಣೆಯ ದಿನಾಂಕಗಳನ್ನು ಘೋಷಿಸಿದಾಗ, ಅದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿರುವ ಎಲ್ಲಾ ಸದಸ್ಯರನ್ನು ಎಣಿಕೆ ಮಾಡುತ್ತದೆ.

ಯಾರು ಈ ಹುದ್ದೆಗೆ ಅರ್ಹರು?: ಭಾರತದ ಪ್ರಜೆಯಾಗಿರಬೇಕು, ಕನಿಷ್ಠ 35 ವರ್ಷ ವಯಸ್ಸನ್ನು ಪೂರ್ಣಗೊಳಿಸಿರಬೇಕು. ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಯು 15 ಸಾವಿರ ರೂ. ಭದ್ರತಾ ಮೊತ್ತವನ್ನು ಠೇವಣಿ ಇಡಬೇಕು. ಚುನಾವಣೆಯ ಸಮಯದಲ್ಲಿ ಆರನೇ ಒಂದರಷ್ಟು ಮತಗಳನ್ನು ಪಡೆಯದಿದ್ದರೆ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

Previous articleಗೋವಾ ಸಿಎಂ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ
Next articleIndia-England 4th Test:‌ ರೂಟ್ ಐತಿಹಾಸಿಕ ದಾಖಲೆ, ಇಂಗ್ಲೆಂಡ್‌ ಮುನ್ನಡೆ

LEAVE A REPLY

Please enter your comment!
Please enter your name here