ಶಾಲೆಯಲ್ಲಿ ಅರ್ಧವೃತ್ತಾಕಾರ ತರಗತಿ, ಕರ್ನಾಟಕವೇ ಮಾದರಿ

0
270

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ “ಜಾಣರಗುರು” ವಿದ್ಯಾರ್ಥಿ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ದಾವಣಗೆರೆ/ಸುಳ್ಯ: ಶಾಲಾ ತರಗತಿಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ‘ಯು-ಆಕಾರ’ದ ಆಸನ ವ್ಯವಸ್ಥೆ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಲಾಸ್ಟ್ ಬೆಂಚ್ ಹಾಗೂ ಫಸ್ಟ್ ಬೆಂಚ್ ಎಂಬ ಆಸನದ ವ್ಯವಸ್ಥೆಯನ್ನು ಈ ಹಿಂದೆಯೇ ದಕ್ಷಿಣ ಕನ್ನಡದ ಸುಳ್ಯ ಹಾಗೂ ದಾವಣಗೆರೆಯ ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತರಲಾಗಿತ್ತು.

ಆದರೆ ರಾಷ್ಟ್ರಕ್ಕೆ ಮಾದರಿಯಾಗಬೇಕಿದ್ದ ಈ ಉಪಕ್ರಮದ ಬಗ್ಗೆ ಯಾರೂ ಗಮನ ನೀಡದ್ದರಿಂದ ಈ ವ್ಯವಸ್ಥೆ ಅಂದು ಫಲಪ್ರದವಾಗಿರಲಿಲ್ಲ. ಆದರೆ ಇದೀಗ ಸಿನಿಮಾ ಒಂದರ ಪ್ರೇರಣೆ ಪಡೆದು ಕೇರಳದಲ್ಲಿನ ಶಾಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು ಇದೇ ಈಗ ಎಲ್ಲೆಡೆ ಚರ್ಚೆಯಲ್ಲಿದೆ.

ಸುಳ್ಯದಲ್ಲಿ ಡಾ.ಚಂದ್ರಶೇಖರ ದಾಮ್ಲೆ ಎಂಬ ಶಿಕ್ಷಕರು 1996ರಲ್ಲಿ ಆಂಗ್ಲ ಮಾಧ್ಯಮದ ಪ್ರವಾಹದ ಎದುರು ಕನ್ನಡ ಮಾಧ್ಯಮದ ಖಾಸಗಿ ಶಾಲೆಯನ್ನು ಆರಂಭಿಸಿದರು. ಅದು ವಿಶಿಷ್ಟವಾಗಿ ಇರಬೇಕೆಂದು ವೃತ್ತಾಕಾರದ ಕಟ್ಟಡಗಳನ್ನು ಕಟ್ಟುವ ಮೂಲಕ, ಮಕ್ಕಳನ್ನು ವೃತ್ತಾಕಾರದಲ್ಲೇ ಕೂರಿಸಿ ತರಗತಿಗಳನ್ನು ನಡೆಸಲಾಗುತ್ತಿದೆ.

ಹಾಗೆಯೇ ದಾವಣಗೆರೆ ಜಿಲ್ಲೆಯ ಶ್ರೀರಾಮ ಬಡಾವಣೆಯ ಸರ್ಕಾರಿ ಶಾಲೆಯ ಶಿಕ್ಷಕಿ ನಾಗವೇಣಿ ಅವರು “ಯು-ಆಕಾರ”ದ ಆಸನ ವ್ಯವಸ್ಥೆಯನ್ನು (no more back benchers) 2024ನೇ ಸಾಲಿನಲ್ಲಿ ಸತತ ಎರಡು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ಪರಿಚಯಿಸಿದ್ದರು. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತನ್ನ ಅಧಿಕೃತ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಆದರೆ ರಾಷ್ಟ್ರಕ್ಕೆ ಮಾದರಿಯಾಗಬೇಕಿದ್ದ ಈ ಉಪಕ್ರಮದ ಬಗ್ಗೆ ಯಾರೂ ಗಮನ ನೀಡದ್ದರಿಂದ ಈ ವ್ಯವಸ್ಥೆ ಅಂದು ಫಲಪ್ರದವಾಗಿರಲಿಲ್ಲ.

ರಾಜ್ಯ ಶಿಕ್ಷಣ ಇಲಾಖೆಯು ಹಲವು ಪ್ರಾಯೋಗಿಕ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ಬೆಳವಣಿಗೆಗೆ ಸದಾ ಮುಂಚಣಿಯಲ್ಲಿದ್ದರೂ ಇಂತಹ ಪ್ರಾಯೋಗಿಕಗಳು ಮತ್ತು ಬೇರೆ ರಾಜ್ಯಗಳಲ್ಲಿ ನಡೆದಾಗ ಅವುಗಳನ್ನು ಮಾದರಿ ಎಂದೇ ಭಾವಿಸುತ್ತಾರೆ. ಆದರೆ ನಮ್ಮ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಹಲವು ಪರಿಶ್ರಮಗಳು ಗುರುತಿಸದೇ ಇರುವುದು ದುರಂತವೇ ಸರಿ. ಇಂತಹ ಇನ್ನೂ ಅನೇಕ ಉಪಕ್ರಮಗಳನ್ನು ನಮ್ಮ ರಾಜ್ಯದ ಶಿಕ್ಷಕರು ಜಾರಿಗೆ ತಂದಿರುತ್ತಾರೆ. ಅವುಗಳನ್ನು ಗುರುತಿಸುವ ಕೆಲಸ ಆದದ್ದೇ ಆದರೆ ರಾಜ್ಯದಲ್ಲಿನ ಪ್ರಾಯೋಗಿಕ ಶಿಕ್ಷಣ ರಾಷ್ಟ್ರಕ್ಕೆ ಮಾದರಿಯಾಗಲಿದೆ.

ಈ ಮಾದರಿ ಏಕೆ ಅನುಕೂಲ?: U ಮಾದರಿಯಯಲ್ಲಿ ವಿದ್ಯಾರ್ಥಿಗಳು ಕುಳಿತು ಕಲಿಯುವುದರಿಂದ ಏನೆಲ್ಲ ಪ್ರಯೋಜನ ಎಂಬ ಕುರಿತು ಶಿಕ್ಷಕಿ ನಾಗವೇಣಿ ಅವರು ವಿವರಣೆ ಕೊಟ್ಟಿದ್ದಾರೆ.
* ಕಡಿಮೆ ವಿದ್ಯಾರ್ಥಿಗಳು ಇರುವ ತರಗತಿಗಳಲ್ಲಿ ಈ ಪದ್ಧತಿ ಬಳಸಬಹುದು. (ಸಾಮಾನ್ಯವಾಗಿ 15 ರಿಂದ 20 ಮಕ್ಕಳಿರುವ ತರಗತಿ).
* ಪ್ರತಿ ವಿದ್ಯಾರ್ಥಿಗೂ ಸಮ ಪ್ರಮಾಣದ ಗಮನವನ್ನು ಹರಿಸಲು ಶಿಕ್ಷಕರಿಗೆ ಸಾಧ್ಯ.
* ಗುರು ಶಿಷ್ಯರ ಬಾಂಧವ್ಯ ವೃದ್ಧಿಸುತ್ತದೆ ಹಾಗೂ ಶಿಕ್ಷಕರು ಮಕ್ಕಳ ಬಳಿ ಹೋಗಿ ವಿದ್ಯಾರ್ಥಿಗಳ ಚಟುವಟಿಕೆ ಗಮನಿಸಬಹುದು.
* ಶಿಕ್ಷಕರು ತರಗತಿಯಲ್ಲಿ ಎಲ್ಲರ ಬಳಿ ಓಡಾಡಲು ಹಾಗೂ ಎಲ್ಲರನ್ನೂ ಗಮನಿಸುತ್ತಾ ಪಾಠ ಮಾಡಬಹುದು.
* ವಿದ್ಯಾರ್ಥಿಗಳಲ್ಲಿ ನಾನು ಮೊದಲ ಬೆಂಚು, ನಾನು ಕೊನೆ ಬೆಂಚು ಎಂಬ ತಾರತಮ್ಯ ಇರುವುದಿಲ್ಲ.
* ಕಪ್ಪು ಹಲಗೆ (ಬ್ಲಾಕ್ ಬೋರ್ಡ್) ಎಲ್ಲರಿಗೂ ಸುಲಭವಾಗಿ ಕಾಣಿಸುತ್ತದೆ.
* ವಿಜ್ಞಾನದ ಪ್ರಯೋಗ ಹಾಗೂ ಸಮಾಜ ವಿಜ್ಞಾನದಲ್ಲಿ ಭೂಪಟಗಳನ್ನು ತೋರಿಸಲು ಅನುಕೂಲ.

ಶಿಕ್ಷಣ ಸಚಿವರಿಗೆ ಪತ್ರ: ಇನ್ನು ಮುಂದೆ ಶಾಲೆಗಳಲ್ಲಿ ಲಾಸ್ಟ್ ಬೆಂಚ್, ಫಸ್ಟ್ ಬೆಂಚ್ ವಿದ್ಯಾರ್ಥಿಗಳು ಎಂಬ ವಿಧಾನಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ಮಾದರಿಯನ್ನು ರಾಜ್ಯದ ಶಾಲೆಗಳಲ್ಲಿಯೂ ಜಾರಿ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ಕುರಿತಾಗಿ ಮಕ್ಕಳ ಹಕ್ಕುಗಳ ಹೋರಾಟಗಾರರು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಕೇರಳದಲ್ಲಿನ ಶಾಲೆಗಳಲ್ಲಿ ಲಾಸ್ಟ್ ಬೆಂಚ್ ಹಾಗೂ ಫಸ್ಟ್ ಬೆಂಚ್ ಎಂಬ ಆಸನದ ವ್ಯವಸ್ಥೆಗೆ ಬದಲಾವಣೆ ತರಲಾಗಿದೆ. ಇದೇ ಮಾದರಿಯನ್ನು ನಮ್ಮ ಶಾಲೆಗಳಲ್ಲಿಯೂ ಜಾರಿ ಮಾಡುವಂತೆ ಮಕ್ಕಳ ಹಕ್ಕುಗಳ ಆಯೋಗ ಪತ್ರದಲ್ಲಿ ಮನವಿ ಮಾಡಿದೆ. ರಾಜ್ಯದ ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿಗಳು ಅರ್ಧ ವೃತ್ತಕಾರದಲ್ಲಿ ಕುಳಿತು ಶಿಕ್ಷಣ ಪಡೆಯುವುದನ್ನು ಜಾರಿ ಮಾಡಲು ಮನವಿ ಸಲ್ಲಿಸಲಾಗಿದೆ.

ಈ ಮಾದರಿ ಕಲಿಕೆಯ ಪರಿಣಾಮಕಾರಿತ್ವ ಹೆಚ್ಚಿಸಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂವಾದವನ್ನು ಸುಧಾರಿಸುವಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಅರ್ಧವೃತ್ತಾಕಾರದ ವಿಧಾನದಲ್ಲಿ ಎಲ್ಲ ವಿದ್ಯಾರ್ಥಿಗಳೂ ಶಿಕ್ಷಕರಿಗೆ ಒಂದೇ ದೃಷ್ಟಿಯಲ್ಲಿ ಕಾಣಿಸುತ್ತಾರೆ. ಇದು ಸಮಾನತೆಯ ಭಾವನೆಯನ್ನು ಮೂಡಿಸುತ್ತದೆ ಮತ್ತು ಎಲ್ಲರಿಗೂ ಸಮಾನವಾಗಿ ಭಾಗವಹಿಸುವ ಅವಕಾಶವನ್ನು ಒದಗಿಸುತ್ತದೆ. ಹೀಗಾಗಿ ರಾಜ್ಯದ ಶಾಲೆಗಳಲ್ಲಿ ಈ ನಿಯಮ ಜಾರಿಗೆ ಒತ್ತಾಯ ಕೇಳಿ ಬಂದಿದೆ.

ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಶಾಲೆಗಳಲ್ಲಿ ಕಲಿಕೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ತುಂಬಾ ಪರಿಣಾಮಕಾರಿಯಾಗಿದೆ. ಶಿಕ್ಷಣ ವಿಧಾನಗಳಷ್ಟೇ ಅಲ್ಲ, ತರಗತಿಯ ವಾತಾವರಣ ಮತ್ತು ಕುಳಿತುಕೊಳ್ಳುವ ವಿಧಾನವೂ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ, ಸಾಮಾಜಿಕ ಕೌಶಲ್ಯಗಳು ಮತ್ತು ಶಿಕ್ಷಕ-ವಿದ್ಯಾರ್ಥಿ ಸಂವಾದವನ್ನು ಸುಧಾರಿಸುವಲ್ಲಿ ಈ ವಿಧಾನ ಕ್ರಾಂತಿಕಾರಿ ಬದಲಾವಣೆ ತರುವ ಸಾಧ್ಯತೆ ಇದೆ.

ಈ ಕಲಿಕಾ ವಿಧಾನದ ಕುರಿತು ದಾವಣಗೆರೆ ಶ್ರೀರಾಮ ಬಡಾವಣೆ ಸರ್ಕಾರಿ ಶಾಲೆ ಶಿಕ್ಷಕಿ ನಾಗವೇಣಿ ಮಾತನಾಡಿ, “ಸಾಮಾನ್ಯವಾಗಿ ಒಂದು ತರಗತಿಯನ್ನು ಎ, ಬಿ, ಸಿ ಎಂದು ವರ್ಗ ಮಾಡಿದರೂ ಸಹ ಒಂದು ಕೊಠಡಿಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವುದೇ ಈ ವ್ಯವಸ್ಥೆ ಜಾರಿಗೆ ಬರಲು ಅಡಚಣೆಯಾಗಿರಬಹುದು. ತಜ್ಞರ ಪ್ರಕಾರ, ಯು-ಶೇಪ್ ಮಾದರಿಯಲ್ಲಿ ತರಗತಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳಿದ್ದರೆ, ಬ್ಲ್ಯಾಕ್‌ ಬೋರ್ಡ್ ನೋಡಲು ಅನುಕೂಲ” ಎಂದು ಹೇಳಿದ್ದಾರೆ.

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ (ರಿ) ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಮಾತನಾಡಿ, “ಆಂಗ್ಲ ಮಾಧ್ಯಮದ ಪ್ರವಾಹದ ಎದುರು ಕನ್ನಡ ಮಾಧ್ಯಮದ ಖಾಸಗಿ ಶಾಲೆಯನ್ನು 1996ರಲ್ಲಿ ತೆರೆದಾಗ ಅದು ವಿಶಿಷ್ಟವಾಗಿ ಇರಬೇಕೆಂದು ವೃತ್ತಾಕಾರದ ಕಟ್ಟಡಗಳನ್ನು ಕಟ್ಟಿದೆವು. ಅವುಗಳ ಒಳಗೆ ಮಕ್ಕಳನ್ನು ವೃತ್ತಾಕಾರದಲ್ಲೇ ಕೂರಿಸಿ ಕಳೆದ 29 ವರ್ಷಗಳಿಂದ ತರಗತಿಗಳನ್ನು ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

Previous articleಶಿಷ್ಟಾಚಾರ ನೆಪದಲ್ಲಿ ಶರಾವತಿ ಸಂತ್ರಸ್ತರ ಅಸಡ್ಡೆ ಏಕೆ..
Next articleLalbagh Flower Show: ಲಾಲ್ ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ, ದಿನಾಂಕ, ವಿಶೇಷತೆ, ಟಿಕೆಟ್ ದರ

LEAVE A REPLY

Please enter your comment!
Please enter your name here