ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿನ ಹಿಂದೂ ದೇವರ ವಿಗ್ರಹ ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸರ್ಕಾರವನ್ನು ಆಗ್ರಹಿಸಿದರು. ಭಾನುವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಶನಿವಾರ ಸಂಜೆಯೇ ಕೆಲವು ಮುಸಲ್ಮಾನ ಗೂಂಡಾಗಳು ಈ ದುಷ್ಕೃತ್ಯ ಎಸಗಿದರೂ ಪೋಲಿಸ ಇಲಾಖೆ ಇನ್ನೂ ಆರೋಪಿಗಳನ್ನು ಬಂಧಿಸದಿರುವುದು ಸರ್ಕಾರ ಎಲ್ಲೋ ಹಿಂದೂಗಳ ತಾಳ್ಮೆ ಪರೀಕ್ಷಿಸುವಂತೆ ಕಾಣುತ್ತಿದೆ. ನಾಲ್ಕು ತಿಂಗಳ ಹಿಂದೆ ಸ್ಥಳೀಯ ಪರಿಶಿಷ್ಟ ಜಾತಿಯವರೇ ಈ ದೇವರ ಕಟ್ಟೆ ನಿರ್ಮಿಸಿ ಶ್ರೀ ಗಣೇಶ ಮತ್ತು ಶ್ರೀ ನಾಗ ವಿಗ್ರಹದ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ.
ಈ ದುಷ್ಕೃತ್ಯ ನಡೆದರೂ ಆರೋಪಿಗಳನ್ನು ಬಂಧಿಸದೇ ಇರುವುದು ಸರ್ಕಾರ ಪರಿಶಿಷ್ಟ ಜಾತಿ ಹೆಸರು ಹೇಳಿಕೊಂಡು ನಾಟಕವಾಡುತ್ತಿದೆ ಎಂದು ಹರಿಹಾಯ್ದರು. ಈ ದುಷ್ಕೃತ್ಯ ಎಸಗಿದವನು ಮುಸ್ಲಿಂ. ತನಗೆ ಬೆಳಿಗ್ಗೆ ಎದ್ದ ತಕ್ಷಣ ಹಿಂದೂ ದೇವರ ವಿಗ್ರಹ ಕಾಣಬಾರದು ಎಂಬ ಕೆಟ್ಟ ಮನಸ್ಥಿತಿಯವನು. ಪ್ರತಿಷ್ಠಾಪಿತ ಶ್ರೀ ಗಣಪತಿ ವಿಗ್ರಹಕ್ಕೆ ಸ್ಥಳೀಯರ ಎದುರೇ ಬೂಟು ಕಾಲಿನಿಂದ ಒದ್ದು ಹಿಂದೂಗಳಿಗೆ ಅವಮಾನಿಸಿದ್ದಾನೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಗುಡುಗಿದರು.
ವಿಗ್ರಹ ಧ್ವಂಸ ಮಾಡಿದ ಗೂಂಡಾ ಪಾಲಿಕೆಯ ಜಾಗದಲ್ಲಿ ಅನಧಿಕೃತವಾಗಿ ಆರ್.ಸಿ.ಸಿ.ಮನೆ ನಿರ್ಮಾಣ ಮಾಡಿದ್ದು ಅದನ್ನೂ ತಕ್ಷಣ ನೆಲಸಮಗೊಳಿಸಬೇಕು ಎಂದು ಪಾಲಿಕೆ ಆಯುಕ್ತ ಮಾಯಣ್ಣಗೌಡರಿಗೆ ದೂರವಾಣಿಯಲ್ಲಿ ಆಗ್ರಹಿಸಿದರು.
ಇಂದು ಭಾನುವಾರ. ಯಾರೂ ಸಿಗಲ್ಲ. ಸೋಮವಾರ ಸದರಿ ಮನೆಯನ್ನು ತೆರವುಗೊಳಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾಗಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ ಘಟನಾ ಸ್ಥಳಕ್ಕೆ ಭೇಟಿ ನೀಡಬೇಕು. ನೊಂದ ಸ್ಥಳೀಯರಿಗೆ ಸಮಾಧಾನ ಹೇಳಬೇಕು ಎಂದು ಅವರು ಒತ್ತಾಯಿಸಿದರು.


























