ಜೀವನದ ಯಶಸ್ಸಿಗೆ ಸುಲಭ ಸೂತ್ರಗಳು

ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಲೇ ಇರುತ್ತಾರೆ ಹಾಗು ಎಲ್ಲರೂ ಪ್ರಯತ್ನ ಮಾಡಲೇಬೇಕು. ಹೀಗೆ ಪ್ರಯತ್ನ ಪಡುವಾಗ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸೂತ್ರಗಳನ್ನು ಅಳವಡಿಸಿಕೊಂಡರೆ ಅವು ಮಾನವನ, ಜೀವನದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತವೆ. ಆಧ್ಯಾತ್ಮಿಕ ಸೂತ್ರಗಳು ವ್ಯಕ್ತಿಯ ನೈತಿಕತೆ, ಶ್ರದ್ಧೆ, ಶ್ರಮ ಮತ್ತು ಆತ್ಮವಿಶ್ವಾಸವನ್ನು ಬಲಪಡಿಸುತ್ತವೆ.
ಜೀವನದಲ್ಲಿ ಯಶಸ್ಸು ಸಾಧಿಸಲು ಮೊದಲು ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು. ಇದು ಶಾಶ್ವತ ಯಶಸ್ಸಿನ ಹಾದಿಗೆ ಮೊದಲ ಮೆಟ್ಟಿಲು. ನಮ್ಮ ನಿಶ್ಚಿತ ಗುರಿ ತಲುಪಲು ನಿರಂತರ ಶ್ರಮಪಡಬೇಕು. ಸತತ ಪರಿಶ್ರಮವು ಯಶಸ್ಸಿನ ಕೀಲಿಕೈ. ಸೋಮಾರಿತನವು ವೈಫಲ್ಯಕ್ಕೆ ಕಾರಣವಾಗುತ್ತದೆ. ಸಮಯವನ್ನು ಸದುಪಯೋಗಪಡಿಸಿಕೊಳ್ಳಿ; ಸಮಯದ ನಿರ್ವಹಣೆ ಯಶಸ್ಸಿಗೆ ಅತೀ ಅವಶ್ಯಕ. ಸಮಯದ ಮೌಲ್ಯವನ್ನು ಅರಿತು ಕಲಿಕೆಯಲ್ಲಿ ಹೆಚ್ಚಿನ ಶ್ರಮ ಪಡಬೇಕು. ಬಾಳಿನಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ; ಅತಿಯಾದ ಆಸೆ ಅಥವಾ ನಿರಾಸೆ ಎರಡೂ ಹಾನಿಕರ. ಹೊಸ ಆಲೋಚನೆಗಳು ಮತ್ತು ದೃಷ್ಟಿಕೋನಗಳು ಯಶಸ್ಸಿಗೆ ದಾರಿ ಮಾಡುತ್ತವೆ.
ಧಾರ್ಮಿಕ ಶ್ರದ್ಧೆ, ಸಕಾಲಕ್ಕೆ ಏಳುವುದು, ಯೋಗ, ಧ್ಯಾನ, ಪೂಜೆ, ಜಪ ನಿಯಮಿತವಾಗಿ ಮಾಡಿದರೆ ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಜೊತೆಗೆ ಅವುಗಳು ನಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಮನಸು ಹೆಚ್ಚು ಕ್ರಿಯಾಶೀಲವಾಗಿದ್ದರೆ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಇಚ್ಛೆಗೆ ಪೂರಕವಾಗಿ ಇರುತ್ತವೆ. ಹಾಗು ನಮ್ಮ ಇಚ್ಛೆಯ ದಾರಿಯಲ್ಲಿ ನಮ್ಮ ಜೀವನ ಮುಂದುವರಿಸಲು ಇದರಿಂದ ಸಾಧ್ಯವಾಗುತ್ತದೆ.
ಧಾರ್ಮಿಕ ಸೂತ್ರಗಳು ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ನಾವು ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಾಧಿಸಲು ಸಹಾಯವಾಗುತ್ತದೆ. ನೀವು ಯಾವುದೇ ಧಾರ್ಮಿಕ ಪರಂಪರೆಯಲ್ಲಿದ್ದರೂ ಸಹ, ಶ್ರದ್ಧೆ, ಶ್ರಮ, ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸವು ಯಶಸ್ಸಿನ ಮೂಲಮಂತ್ರಗಳಾಗಿವೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಸಮತೋಲನದಿಂದ ಅನುಸರಿಸಿದರೆ, ಈ ಸೂತ್ರಗಳು ಮತ್ತು ಮಾರ್ಗದರ್ಶನಗಳು ನಿಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತವೆ.
ಇನ್ನು ಹೆಚ್ಚಿನವರು ವೈಫಲ್ಯ ನಿರ್ವಹಣೆ ಮಾಡುವುದರಲ್ಲಿ ಎಡುವುತ್ತಾರೆ. ವೈಫಲ್ಯಗಳನ್ನು ನಿರ್ಲಕ್ಷ್ಯ ಮಾಡಬಾರದು ಆದರೆ ವೈಫಲ್ಯದ ಮೂಲ ಕಾರಣಗಳನ್ನು ಕಂಡುಕೊಂಡು, ಪಾಠವಾಗಿ ಪರಿಗಣಿಸಿ, ಆ ವೈಫಲ್ಯಗಳನ್ನು ದಾಟಿ ಮುಂದೆ ಸಾಗಬೇಕು. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಕೇವಲ ಸಂಕಟಗಳು ಬಂದಾಗ ಮಾತ್ರ ದೇವರ ಮೊರೆಹೋಗುವುದು ಒಳಿತಲ್ಲ. ದೇವರಲ್ಲಿ ನಿರಂತರ ಭಕ್ತಿ ಮಾಡುತ್ತಾ, ಸಮರ್ಪಣಾ ಮನೋಭಾವದಿಂದ ನಿತ್ಯದಲ್ಲೂ ಆರಾಧಿಸಿದಾಗ ಆತ್ಮ ಶುದ್ಧಿಯಾಗುತ್ತದೆ. ಆತ್ಮಶುದ್ಧಿಯಿಂದ ಆತ್ಮ ಪರಿಶೀಲನೆಗೊಳಪಟ್ಟು ನಮ್ಮೊಳಗಿನ ಶಕ್ತಿಯನ್ನು ಅರಿತುಕೊಳ್ಳಲು ಸಹಾಯಮಾಡುತ್ತದೆ. ನಮ್ಮ ಶಕ್ತಿಯ ಅನುಭವ ಹಾಗು ಆ ಶಕ್ತಿಯನ್ನು ನಮ್ಮ ಗುರಿ ಸಾಧಿಸಲು ಸಾಧನವಾಗಿ ಪರಿವರ್ತಿಸಿದರೆ, ಯಶಸ್ಸಿನ ಹಾದಿ ಸುಗಮವಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕಾರ್ಯವು ದೇವರ ಅನುಗ್ರಹದಿಂದಲೇ ಆಗುತ್ತದೆ. ಆದುದರಿಂದ ಲೌಕಿಕ ವಿದ್ಯಯ ಜೊತೆ ಆಧ್ಯಾತ್ಮಿಕ ವಿದ್ಯೆಯೆನ್ನು ಕಲಿತು, ಜೀವನಕ್ಕೆ ಬೇಕಾದ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡರೆ ಯಶಸ್ಸು ಕಟ್ಟಿಟ್ಟಬುತ್ತಿ.