ಎಚ್ಚೆತ್ತುಕೊಂಡವನೇ ಯೋಗಿ

ಶ್ರೀಕೃಷ್ಣನು ಭಗವದ್ಗೀತೆಯಲ್ಲಿ, ಯೋಗಿಯು ಮಲಗಿದಾಗ ಎಲ್ಲರೂ ಎಚ್ಚೆತ್ತುಕೊಂಡಿರುತ್ತಾರೆ. ಎಲ್ಲರೂ ಮಲಗಿರುವಾಗ ಯೋಗಿಯು ಎಚ್ಚೆತ್ತುಕೊಂಡಿರುತ್ತಾನೆ' (೨.೬೯) ಎಂದು ಹೇಳಿದ್ದಾನೆ. ಇದರ ಅರ್ಥವೇನು? ಇದರ ಅರ್ಥ ಬಹಳ ಸರಳ. ಎಲ್ಲರೂ ಉದ್ರೇಕಗೊಂಡು ಚಿಂತಿತರಾಗಿದ್ದಾಗ ಯೋಗಿಯು ಸುಖವಾಗಿ ನಿದ್ರೆ ಮಾಡುತ್ತಾನೆ. ಎಲ್ಲವೂ ಒಳ್ಳೆಯದಕ್ಕಾಗಿಯೇ ಆಗುತ್ತದೆ ಮತ್ತು ನಡೆಯುವುದೆಲ್ಲವೂ ಎಲ್ಲರ ಒಳಿತಿಗಾಗಿ ಎಂದು ಯೋಗಿಗೆ ತಿಳಿದಿದೆ. ಯೋಗಿಯಲ್ಲಿ ಈ ವಿಶ್ವಾಸವಿದೆ. ಎಲ್ಲರೂ ಮಲಗಿರುವಾಗ ಯೋಗಿಯು ಎಚ್ಚೆತ್ತುಕೊಂಡಿರುತ್ತಾನೆ ಎಂದರೆ ಯೋಗಿಯು ಜೀವನದ ಸತ್ಯದ ಬಗ್ಗೆ ಎಚ್ಚೆತ್ತುಕೊಂಡಿರುತ್ತಾನೆ ಮತ್ತು ಇತರರೆಲ್ಲರೂ ಜೀವನದ ಸತ್ಯವನ್ನರಿಯದೆ ಮಲಗಿರುತ್ತಾರೆ.ನನ್ನ ಕೊನೆ ಎಂದಾಗುತ್ತದೆ? ನಾನೆಲ್ಲಿಗೆ ಹೋಗುತ್ತೇನೆ? ಜೀವನ ಎಂದರೇನು? ನಾನು ಯಾರು?’ ಎಂದು ಯಾರೂ ಆಲೋಚಿಸಲು ಹೋಗುವುದಿಲ್ಲ. ಜನರ ಮನಸ್ಸಿನಲ್ಲಿ ಈ ರೀತಿಯ ಪ್ರಶ್ನೆಗಳು ಏಳದಿದ್ದರೆ ಅವರು ಮಲಗಿದ್ದಾರೆಂದು ಅರ್ಥ. ಜನರು ಚಲನಚಿತ್ರಗಳನ್ನು ಮತ್ತು ವಿಡಿಯೊ ಆಟಗಳನ್ನು ವೀಕ್ಷಿಸುವುದರಲ್ಲೇ ಕಳೆದುಹೋಗಿದ್ದಾರೆ. ಬಹಳ ವಯಸ್ಸಾದ ನಂತರ ವಿಡಿಯೊ ಆಟಗಳನ್ನು ಆಡಲು ಪ್ರಾರಂಭಿಸುವವರೂ ಇದ್ದಾರೆ. ಮರಣ ಹತ್ತಿರ
ಬರುತ್ತಿದೆಯೆಂದು ಮಾನವ ನೋಡುವುದೇ ಇಲ್ಲ. ನನ್ನ ಮನಸ್ಸಿನ ತುಂಬ ರಾಗ-ದ್ವೇಷಗಳನ್ನು ತುಂಬಿಕೊಂಡಿರುವೆನಲ್ಲ? ನನ್ನ ಮನಸ್ಸನ್ನು ತೊಳೆದು ಶುಚಿಗೊಳಿಸಿಕೊಳ್ಳಲು ನಾನೇನೂ ಮಾಡಿಲ್ಲವಲ್ಲ?' ಎಂದು ಮಾನವ ಆಲೋಚಿಸುವುದೇ ಇಲ್ಲ.ಮನಸ್ಸಿನಲ್ಲಿರುವ ಸಂಸ್ಕಾರಗಳನ್ನು ತೆಗೆದುಹಾಕದಿದ್ದರೆ ಅದೇ ಸಂಸ್ಕಾರಗಳನ್ನು ಮರಣದ ನಂತರವೂ ಸಹ ನಿಮ್ಮೊಡನೆ ತೆಗೆದುಕೊಂಡು ಹೋಗುತ್ತೀರಿ. ಆದ್ದರಿಂದ ಮರಣಿಸಿದಾಗ ಮನಸ್ಸು ಸಂತೋಷವಾಗಿರಬೇಕು, ಆನಂದದಿಂದ ತುಂಬಿರಬೇಕು. ನಿದ್ದೆ ಮಾಡುತ್ತಿರುವವರು ತಮ್ಮ ಮನಸ್ಸಿನ ತುಂಬ ಎಲ್ಲ ಕಸವನ್ನೂ ಹೊತ್ತುಕೊಂಡಿರುತ್ತಾರೆ. ಯೋಗಿಯು ಎಚ್ಚರವಾಗಿ ಜಾಗೃತನಾಗಿರುತ್ತಾನೆ. ಯಾವ ರೀತಿಯ ಕಸವನ್ನೂ ಮನಸ್ಸಿನಲ್ಲಿ ಹೊತ್ತುಕೊಂಡಿರುವುದಿಲ್ಲ. ಆ ವ್ಯಕ್ತಿ ಹಾಗೇಕೆ ಹೇಳಿದ? ಈ ಹೆಂಗಸು ನನಗೇಕೆ ಹಾಗೆ ಹೇಳಿದಳು?’ ಎಂದು ಕುಳಿತು ಆಲೋಚಿಸುವುದಿಲ್ಲ. ಇತರರ ಅಪರಿಪೂರ್ಣತೆಗಳ ಬಗ್ಗೆಯೇ ಆಲೋಚಿಸುತ್ತಲಿದ್ದರೆ ನಿಮ್ಮ ಮನಸ್ಸು ಪೂರ್ಣವಾಗಿ ನಾಶವಾಗುತ್ತದೆ. ಅವರ ಅಪರಿಪೂರ್ಣತೆಗಳನ್ನು ಅವರೇ ನೋಡಿಕೊಳ್ಳಲಿ ಬಿಡಿ. ನಿಮ್ಮ ಮನಸ್ಸನ್ನು, ನಿಮ್ಮ ಅಪರಿಪೂರ್ಣತೆಗಳನ್ನು ನೀವು ನೋಡಿಕೊಳ್ಳಿ.ಇತರರ ತಪ್ಪುಗಳನ್ನು ಸ್ವೀಕರಿಸುವಷ್ಟು ಸಹನೆ ನಿಮ್ಮಲ್ಲಿರಲಿ. ಬಹಳ ಕರುಣೆಯಿದ್ದರೆ ಅವು ಯಾವುದೂ ನಿಮ್ಮ ಮನಸ್ಸಿನೊಳಗೆ ಹೊಕ್ಕುವುದಿಲ್ಲ. ಆಗ ಯೋಗಿಯಂತೆ ಎಚ್ಚೆತ್ತುಕೊಂಡಿರಬಹುದು.