ರಬಕವಿ-ಬನಹಟ್ಟಿ: ಸಾಲಬಾಧೆಯಿಂದ ಬೇಸತ್ತು ನೇಕಾರನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆಯ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಅಶೋಕ ಕಾಲನಿಯಲ್ಲಿ ರವಿವಾರ ರಾತ್ರಿ ನಡೆದಿದೆ.
ಬನಹಟ್ಟಿಯ ಸಂಗಮೇಶ ದೇವೇಂದ್ರಪ್ಪ ಮುರಗೋಡ(45) ಎಂಬ ನೇಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಗಮೇಶ ಪಾವರ್‌ಲೂಮ್ ನೇಯ್ಗೆ ಮಾಡುತ್ತಿದ್ದ. ಇದರಿಂದ ಬರುವ ವೇತನದಲ್ಲಿ ಕುಟುಂಬ ನಿರ್ವಹಣೆಗೆ ಸಾಧ್ಯವಾಗದ ಕಾರಣ ಕೆಲ ಸಹಕಾರಿ ಸಂಘ ಹಾಗು ಖಾಸಗಿ ವ್ಯಕ್ತಿಗಳಿಂದಲೂ ಸಾಲ-ಶೂಲ ಮಾಡಿದ್ದನು. ಕೆಲ ದಿನಗಳಿಂದ ಸರಿಯಾಗಿ ಕೆಲಸ ಮಾಡದೆ ಕುಡಿತದ ಚಟಕ್ಕೂ ಅಂಟಿಕೊಂಡಿದ್ದ ಕಾರಣ ಮಾನಸಿಕವಾಗಿಯೂ ಖಿನ್ನತೆ ಎದುರಿಸುತ್ತಿದ್ದ. ರವಿವಾರ ಸಂಜೆ 7 ಗಂಟೆ ಸುಮಾರಿಗೆ ತಮ್ಮ ಮನೆಯ ಪತ್ರಾಸ ಶೆಡ್‌ನ ಎಂಗಲ್‌ಗೆ ಕುಡಿದ ಮತ್ತಿನಲ್ಲಿ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೃತನ ಪತ್ನಿ ಶಾಂತಾ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ: ರವಿವಾರ ಸಂಜೆ 7 ಗಂಟೆ ಸುಮಾರಿಗೆ ಮೃತ ಸಂಗಮೇಶನ ಪತ್ನಿ ಹಾಗು ಮಕ್ಕಳು ಮಾರುಕಟ್ಟೆಗೆ ತೆರಳಿದ್ದಾರೆ.
ಓರ್ವ ಮಗ ಮೋಹನ ಮಾತ್ರ ಮನೆಯಲ್ಲಿದ್ದನು. ಮಗ್ಗದ ಕಾರ್ಖಾನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಗಿಲು ಹಾಕಿಕೊಂಡು ನೇಣಿಗೆ ಶರಣನಾಗಿದ್ದಾನೆ. ಕೆಲ ಹೊತ್ತಿನ ನಂತರ ಮನೆಯಲ್ಲಿದ್ದ ಮಗನಿಗೆ ಗೊತ್ತಾದ ಸಂದರ್ಭ ತಾಯಿಯನ್ನೂ ಕರೆಸಿ ಬಾಗಿಲು ಮುರಿದು ಒಳ ನೋಡಿದಾಗ ನೇಣು ಸ್ಥಿತಿಯಲ್ಲಿತ್ತೆಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಿಎಸ್‌ಐ ಶಾಂತಾ ಹಳ್ಳಿ, ಎಎಸ್‌ಐ ಎಸ್.ಎಸ್. ಬಾಬಾನಗರ ತಿಳಿಸಿದ್ದಾರೆ.
`ನೇಕಾರನ ಆತ್ಮಹತ್ಯೆ ಬೇಸರ ತಂದಿದೆ. ಪ್ರಕರಣದ ಕುರಿತು ತನಿಖೆಯೊಂದಿಗೆ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ತಿಳಿಸುತ್ತೇನೆ. ಸರ್ಕಾರದಿಂದಲೂ ಪರಿಹಾರ ಒದಗಿಸಲಾಗುವದು’. ಸಮಸ್ಯೆ ಯಾವದೇ ಇದ್ದರೂ ಇಂತಹ ಕೆಟ್ಟ ಪ್ರಸಂಗಗಳಿಗೆ ಕೈ ಹಾಕಬಾರದು’.
ಆರ್.ಬಿ. ತಿಮ್ಮಾಪೂರ, ಉಸ್ತುವಾರಿ ಸಚಿವ, ಬಾಗಲಕೋಟೆ.
`ಸಾಲಬಾಧೆಯಿಂದ ನೇಕಾರನ ಆತ್ಮಹತ್ಯೆ ಗಮನಕ್ಕೆ ಬಂದಿದೆ. ಸೂಕ್ತ ಕ್ರಮ ಕೈಗೊಳ್ಳಾಗುವದು’.
ಗಿರೀಶ ಸ್ವಾದಿ, ತಹಶೀಲ್ದಾರ, ರಬಕವಿ-ಬನಹಟ್ಟಿ.
`ನೇಕಾರರ ಸಮಸ್ಯೆಗಳಿಂದ ಆತ್ಮಹತ್ಯೆ ಪ್ರಕರಣಗಳು ನಿರಂತರವಾಗಿವೆ. ಇವುಗಳ ಕಡಿವಾಣಕ್ಕೆ ಸರ್ಕಾರ ಸಾಲಮನ್ನಾದೊಂದಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ತಕ್ಷಣ ಮುಂದಾಗಬೇಕು. ಮುಂದಿನ ದಿನಗಳು ನೇಕಾರರಿಗೆ ಭೀಕರವಾಗುವ ಸಾಧ್ಯತೆಗಳಿವೆ’.
ರವೀಂದ್ರ ಬಾಡಗಿ, ಅಧ್ಯಕ್ಷರು, ಉತ್ತರ ಕರ್ನಾಟಕ ನೇಕಾರ ಅಭಿವೃದ್ಧಿ ಸಂಘ.