ಕಲಬುರಗಿ(ಸೇಡಂ): ನಾವು ಸೇವಿಸುವ ಆಹಾರ ಔಷಧವಾಗಬೇಕು. ಔಷಧವೇ ಆಹಾರವಾಗಬಾರದು. ನಮ್ಮ ಜೀವನ ಪದ್ಧತಿಗೆ ಹೊಸ ದಿಕ್ಕನ್ನು ಕೊಡಬೇಕಾದರೆ, ಜೀವನ ಪದ್ಧತಿ ಬದಲಾಯಿಸಿಕೊಳ್ಳಬೇಕು, ಆಹಾರ, ಆರೋಗ್ಯ ಹಾಗೂ ನಮ್ಮ ವಿಚಾರಗಳು ಬದಲಾಯಿಸಿಕೊಳ್ಳೋಣ ಎಂದು ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸೇಡಂ ರಸ್ತೆಯ ಬೀರನಳ್ಳಿಯ ಪ್ರಕೃತಿ ನಗರದಲ್ಲಿ ಕೊತ್ತಲ ಸ್ವರ್ಣ ಜಯಂತಿ, ೭ನೇ ಭಾರತೀಯ ಸಂಸ್ಕೃತಿ ಉತ್ಸವದ ೫ನೇ ದಿನದ ಭಾನುವಾರ ಹಮ್ಮಿಕೊಂಡಿದ್ದ ಆಹಾರ-ಆರೋಗ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿ, ದೇಶದ ಜೀವನಾಡಿಯಾಗಿರುವ ಸ್ವಾತಂತ್ರ‍್ಯ ಭಾರತವು ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ. ದೇಶ ಮುಂಬರುವ ದಿನಗಳಲ್ಲಿ ಸ್ವಾವಲಂಬಿ ಬದುಕು ನಡೆಸಬೇಕು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಯಾವ ರೀತಿ ದಾಪುಗಾಲು ಹಾಕಬೇಕು ಎಂಬುದಕ್ಕೆ ಭಾರತೀಯ ಸಂಸ್ಕೃತಿ ಉತ್ಸವವು ಹೊಸ ದಿಶೆ ನೀಡಲಿದೆ ಎಂದರು.
ನಮ್ಮ ಪೂರ್ವಜರು ತಿಳಿಸಿರುವ ಪದ್ಧತಿಯಂತೆ ನಮ್ಮ ವಿಚಾರಗಳು ನಮ್ಮ ಆರೋಗ್ಯವನ್ನು ಕಾಪಾಡುವಂತೆ ಮಾಡುತ್ತವೆ. ಒಳ್ಳೆಯ ಆಹಾರದಿಂದ ಆರೋಗ್ಯ, ಯೋಗದಿಂದ ರೋಗವನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.
ನಮ್ಮ ಹಿಂದಿನ ಆಹಾರ ಪದ್ಧತಿಗಳು ಯಾವ ರೀತಿ ಇದ್ದವು. ದಕ್ಷಿಣ ಕರ್ನಾಟಕಕ್ಕೆ ಹೋದಲ್ಲಿ ರಾಗಿ ಮುದ್ದೆ, ಉತ್ತರ ಕರ್ನಾಟಕಕ್ಕೆ ಬಂದಲ್ಲಿ ಜೋಳದ ರೊಟ್ಟಿ ಪಲ್ಯಾ. ನಿಧಾನವಾಗಿ ನಾವುಗಳು ಇವುಗಳನ್ನು ಮರೆತು ಗೋದಿ, ಭತ್ತದ ಕಡೆಗೆ ವಾಲುತ್ತಿದ್ದೇವೆ. ನಾವು ಯಾವ ರೀತಿಯ ಆಹಾರ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಹಿತವಾಗಿ ಇರಲಿದೆ ಎಂಬುದು ನಾವು ತಿಳಿದುಕೊಳ್ಳುವ ಅಗತ್ಯವಿದೆ. ಹೀಗಾಗಿ ಅಕ್ಕಿ ಗೋಧಿಯನ್ನು ಬಿಟ್ಟು ಜೋಳ, ರಾಗಿ ಸೇವಿಸಬೇಕು ಎಂದು ಹೇಳಿದರು.