ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ದೇವೋಪದೇಶ ಎಲ್ಲರಿಗೂ ಪರಿಚಿತವಾದುದು. ಎಷ್ಟೋ ಜನರು ಅನೇಕ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದ್ದಾರೆ. ಹಾಸಿಗೆಯಲ್ಲಿದ್ದು ಸಹಿಸಲಾರದ ನೋವಿನಿಂದ ಬಳಲುತ್ತಿದ್ದಾರೆ. ಸೆರೆಮನೆಯ ಕತ್ತಲು ಕೋಣೆಯ ನಾಲ್ಕು ಗೋಡೆಗಳ ನಡುವೆ ಎಷ್ಟೋ ಜನ ಅನೇಕ ವರ್ಷಗಳಿಂದ ಸೂರ್ಯನನ್ನು ಕಾಣದೆ ಜೀವಿಸುತ್ತಿದ್ದಾರೆ. ಅನೇಕರು ತಮ್ಮ ಮುದ್ದಿನ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಜನರು ನಿರ್ಭಾಗ್ಯರಾಗಿ ವೇದನೆ-ನೋವುಗಳನ್ನು ಅನುಭವಿಸುತ್ತಿದ್ದಾರೆ. ನಾವು ಇವರನ್ನೆಲ್ಲ ನೋಡಿದಾಗ, ಇವರಿಗಿಂತ ನಮ್ಮ ನೋವು ಕಷ್ಟಗಳು ಕಡಿಮೆ ಎಂದೇ ತಿಳಿಯಬೇಕು.
ನಮಗೆ ಬಂದ ಅನಿರೀಕ್ಷಿತ ಅಥವಾ ನಿರೀಕ್ಷಿತ ಕಷ್ಟಕಾರ್ಪಣ್ಯಗಳು ನಮ್ಮ ಸಹನೆ, ತಾಳ್ಮೆ ಹಾಗೂ ನಂಬಿಕೆಗಳ ಪರೀಕ್ಷೆಯಾಗಿರುತ್ತವೆ. ಮನುಷ್ಯನ ನಂಬಿಕೆಯ ಪರೀಕ್ಷೆಯ ಕುರಿತು ಕುರಾನಿನ ಈ ವಚನದಲ್ಲಿ (ಅಧ್ಯಾಯ ಕಬೂತ ೧-೨), ನಾವು ನಂಬಿದೆವು ಎಂದು ಹೇಳಿದರೆ ಸಾಲದು, ಅವರನ್ನು ಪರೀಕ್ಷಿಸಲಾಗುವುದು. ಅವರ ಹಿಂದಿನವರನ್ನು ಪರೀಕ್ಷಿಸಲಾಗಿದೆ' ಎಂದಿದ್ದರೆ, ಇನ್ನೊಂದು ವಚನದಲ್ಲಿ (ಅಧ್ಯಾಯ ಬಕರ ೧೫೫-೫೬),
ಭಯ-ಹಸಿವುಗಳ ಮೂಲಕ, ಜೀವ-ಬೆಳೆಗಳ ನಷ್ಟಗಳ ಮೂಲಕ ನಿಮ್ಮನ್ನು ಪರೀಕ್ಷಿಸುವೆವು. ಸಹನಶೀಲರಾದವರಿಗೆ ಶುಭವಾಗುತ್ತದೆ’ ಎಂದಿದೆ. ಮನುಷ್ಯರ ಜೀವನದಲ್ಲಿ ಎರಡು ಸ್ಥಿತಿಗಳು ಬಂದೊದಗುತ್ತವೆ. ಒಂದು ಅವನಿಗೆ ಸುಖ-ಸಂತೋಷ ತಂದರೆ ಇನ್ನೊಂದು ಕಷ್ಟನಷ್ಟಗಳನ್ನು ತರುತ್ತದೆ. ದೇವರಲ್ಲಿ ಶ್ರದ್ಧೆ ದೃಢಭಕ್ತಿ ಇದ್ದವನು ಯಾವ ಸ್ಥಿತಿ ಬಂದರೂ ಅದರಿಂದ ಒಳಿತನ್ನು ಪಡೆಯುತ್ತಾನೆ. ಶ್ರದ್ಧೆ ಇಲ್ಲದವನು ಬರೀ ಸುಖ ಸಂತೋಷದಿಂದಾಗಿ ಅಹಂಕಾರಿಯಾಗುತ್ತಾನೆ. ಕುರಾನಿನ ಈ ವಚನದ (ಅಧ್ಯಾಯ ಮೋಮಿನಿನ್ ೪೦:೬೦) ಉಪದೇಶ ನೋಡಿ; ನೀವು ನನ್ನನ್ನು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುತ್ತೇನೆ. ಅಹಂಭಾವ ತೋರಿಸಬೇಡಿರಿ.' ಇನ್ನೊಂದು ವಚನ (ಅಧ್ಯಾಯ ಅತರಾಫ್ ೭:೫೫)
ಭಯ ವಿನಯದೊಂದಿಗೆ ನಿಮ್ಮ ಒಡೆಯನನ್ನು (ದೇವರನ್ನು) ಕರೆದು ಪ್ರಾರ್ಥಿಸಿರಿ’ ಎಂದು ದೇವವಾಣಿಯಾಗಿದೆ. ಯಾತನೆ ಸಂಕಷ್ಟಗಳು ನಮ್ಮಲ್ಲಿಯ ದುರಭಿಮಾನ ದುಡುಕಿನ ಸ್ವಭಾವವನ್ನು ನಿಯಂತ್ರಿಸುತ್ತವೆ. ಅನೇಕ ಸಂತರು, ಶಿವಶರಣರು, ಧರ್ಮಾಚಾರ್ಯರು ಸತ್ತ್ವಪರೀಕ್ಷೆಗೆ ಒಳಗಾಗಿದ್ದಾರೆ. ಅವರೆಲ್ಲ ಧೈರ್ಯ ತಾಳ್ಮೆಯಿಂದ ಸಹಿಸುತ್ತ, ದೇವರಲ್ಲಿ ಪ್ರಾರ್ಥಿಸುತ್ತ, ಲೋಕಮಾನ್ಯರಾಗಿದ್ದಾರೆ. ಪ್ರವಾದಿವರ್ಯ (ಸ) ಅವರ ಉದಾಹರಣೆಯತ್ತ ಗಮನ ಹರಿಸಿದಾಗ, `ಒಂಟೆಯ ಮಾಂಸದ ತುಂಡುಗಳನ್ನು ಅವರ ತಲೆಯ ಮೇಲೆ ಇರಿಸಲಾಯಿತು. ಅವರ ಕಾಲುಗಳು ರಕ್ತಸಿಕ್ತವಾಗಿದ್ದವು. ಅವರ ಮುಖ, ದೇಹದ ಅನೇಕ ಭಾಗಗಳು ತೀವ್ರ ಗಾಯಗೊಂಡಿದ್ದವು. ಅವರನ್ನು ಅವರು ಹುಟ್ಟಿ ಬೆಳೆದ ಮಕ್ಕಾ ಪಟ್ಟಣದಿಂದ ಹೊರಹಾಕಲಾಯಿತು. ಅವರ ಹಲವಾರು ಅನುಯಾಯಿಗಳನ್ನು ಕೊಲ್ಲಲಾಯಿತು. ಅವರ ಅನೇಕ ಮಕ್ಕಳು ತೀರಿಕೊಂಡರು. ಹಸಿವಿನಿಂದ ಬಳಲುತ್ತಿರುವಾಗ ಅವರು ಹೊಟ್ಟೆಯ ಮೇಲೆ ಕಲ್ಲನ್ನು ಕಟ್ಟಿಕೊಳ್ಳುತ್ತಿದ್ದರು. ಅವರನ್ನು ಜಾದೂಗಾರ, ಹುಚ್ಚ, ಸುಳ್ಳುಗಾರ ಎಂದು ಕರೆದು ಜರಿಯಲಾಯಿತು. ಇಂತಹ ಸ್ಥಿತಿಯಲ್ಲಿಯೂ ಪ್ರವಾದಿವರ್ಯರು ತಾಳ್ಮೆ, ಸಹನೆಯಿಂದ ದೇವರಲ್ಲಿ ಪ್ರಾರ್ಥಿಸಿದರು. ಧರ್ಮಚಾರ್ಯರಾಗಿ ಬೆಳಗಿದರು.