ಮಾಘ ಶುದ್ಧ ಸಪ್ತಮಿಯು ರಥಸಪ್ತಮೀ. ಸೂರ್ಯನನ್ನು ಆರಾಧಿಸುವ ದಿವಸ. ಸದ್ಗತಿಗೆ ಹೋಗುವವರು ಸೂರ್ಯನ ಮೂಲಕ ಹೋಗುತ್ತಾರೆ. ಆದ್ದರಿಂದ ಈ ದಿವಸ ಸೂರ್ಯನ ಉಪಾಸನೆ ಮಾಡಬೇಕು.
ಉತ್ತರಾಯಣ ಮಾರ್ಗವನ್ನು ಸದ್ಗತಿಗೆ ಹೋಗುವ ಮಾರ್ಗ ಎಂಬುದಾಗಿ ಕರೆದಿದ್ದಾರೆ. ಉತ್ತರಾಯಣವೆಂದರೆ, ಮಕರ ಮಾಸದಿಂದ ಆರಂಭಿಸಿ ಆರು ತಿಂಗಳ ಕಾಲದಲ್ಲಿ ಸೂರ್ಯನ ಗತಿ ಉತ್ತರ ದಿಕ್ಕಿಗೆ ವಾಲಿಕೊಂಡಿರುತ್ತದೆ. ಈ ಮಾಸದಲ್ಲಿ ಶರೀರ ತ್ಯಜಿಸಿದ ಶ್ರೇಷ್ಠ ಸಾಧಕರು ಸೂರ್ಯನನ್ನು ತಲುಪಿ, ಅಲ್ಲಿಂದಲೂ ಮುಂದೆ ಸಾಗಿ ಬ್ರಹ್ಮಲೋಕಕ್ಕೆ ಹೋಗುತ್ತಾರೆ. ಕ್ರಮೇಣ ಮೋಕ್ಷವನ್ನು ಪಡೆಯುತ್ತಾರೆ. ಈ ಮಾರ್ಗವನ್ನು ಉತ್ತರಾಯಣ ಮಾರ್ಗವೆಂದು ಹೇಳುತ್ತಾರೆ.
ತುಂಬ ಹಿಂದೆ ಮಕರ ಸಂಕ್ರಮಣವೂ, ಉತ್ತರಾಯಣದ ಆರಂಭವೂ ಒಂದೇ ದಿನ ಆಗುತ್ತಿತ್ತು. ಈಗ ಸೂರ್ಯನ ಚಲನೆಯ ವ್ಯತ್ಯಾಸದಿಂದ ಸುಮಾರು ೨೪ ದಿನಗಳಷ್ಟು ಹಿಂದೆ ಉತ್ತರಾಯಣ ಆರಂಭವಾಗುತ್ತದೆ. ಇಂದಿಗೂ ಮಕರ ಸಂಕ್ರಮಣವನ್ನೇ ಉತ್ತರಾಯಣದ ಆರಂಭದ ಪುಣ್ಯಕಾಲವೆಂದು ಆಚರಿಸುವ ರೂಢಿಯಿದೆ. ಮಕರ ಸಂಕ್ರಮಣದ ನಂತರ ಶೂನ್ಯಮಾಸವೆಂದು ಪ್ರಸಿದ್ಧವಾಗಿರುವ ಪುಷ್ಯಮಾಸ ಕಳೆಯುತ್ತಿದ್ದಂತೆಯೇ ಸಿಗುವ ಮೊದಲ ಶುಕ್ಲಪಕ್ಷದ ಸಪ್ತಮಿಯೇ ರಥಸಪ್ತಮೀ. ಏಳು ಅಶ್ವಗಳನ್ನು ಏರಿಕೊಂಡು, ಏಳು ಬಣ್ಣಗಳ ಮಿಶ್ರಣವಾದ ಬಿಳಿಯ ಬಣ್ಣದ ಬೆಳಕನ್ನು ಕೊಡುವ ಸೂರ್ಯನನ್ನು ಆರಾಧಿಸಲು ಈ ಸಪ್ತಮಿ ಪ್ರಶಸ್ತವಾದ ಕಾಲ.
ಶ್ರೇಷ್ಠ ಸಾಧಕನು ಸೂರ್ಯನ ಮೂಲಕ ಉತ್ತರಾಯಣ ಮಾರ್ಗದಲ್ಲಿ ಸಾಗುವುದನ್ನು ಉಪನಿಷತ್ತು ಹೇಳುತ್ತದೆ. ತಪಃಶ್ರದ್ಧೇ ಯೇ ಹ್ಯುಪವಸಂತಿ ಅರಣ್ಯೇ ಶಾಂತಾ ವಿದ್ವಾಂಸೋ ಭೈಕ್ಷ್ಯಚರ್ಯಾಂ ಚರಂತಃ | ಸೂರ್ಯದ್ವಾರೇಣ ತೇ ವಿರಜಾಃ ಪ್ರಯಾಂತಿ || (ಮುಂಡಕ); ಅಥ ಉತ್ತರೇಣ ತಪಸಾ ಬ್ರಹ್ಮಚರ್ಯೇಣ ಶ್ರದ್ಧಯಾ ವಿದ್ಯಯಾ ಆತ್ಮಾನಂ ಅನ್ವಿಷ್ಯ ಆದಿತ್ಯಂ ಅಭಿಜಯಂತೇ | (ಪ್ರಶ್ನ)-ಈ ವಾಕ್ಯಗಳಲ್ಲಿ ತಪಸ್ಸು, ಶ್ರದ್ಧೆ, ಬ್ರಹ್ಮಚರ್ಯ, ಶಮ ಮುಂತಾದ ಶಬ್ದಗಳನ್ನು ಕಾಣುತ್ತೇವೆ. ಅಂದರೆ ಇವೆಲ್ಲ ಗುಣಗಳಿರುವ ಶ್ರೇಷ್ಠ ಸಾಧಕರು ಸೂರ್ಯನನ್ನು ಕುರಿತು ಹೋಗುತ್ತಾರೆ. ಅವರ ಈ ಶ್ರೇಷ್ಠ ಗುಣಗಳೇ ಉತ್ತರಾಯಣ ಮಾರ್ಗದಲ್ಲಿ ಹೋಗಿ ಬ್ರಹ್ಮಲೋಕವನ್ನು ಸೇರಲು ಸಾಧ್ಯ.
ಶ್ರೇಷ್ಠ ಗುಣಗಳು ಮುಖ್ಯ ಕಾರಣವಾದ್ದರಿಂದ ಉತ್ತರಾಯಣದಲ್ಲಿ ಸಾಗುವ ಸಾಧಕರು ಕೆಲವೊಮ್ಮೆ ದಕ್ಷಿಣಾಯನ ಕಾಲದಲ್ಲಿ ಶರೀರ ತ್ಯಜಿಸಿದರೂ ಅದೇ ಮಾರ್ಗದಲ್ಲಿ ಸಾಗುತ್ತಾರೆ. ಯಾಕೆಂದರೆ ಉತ್ತರಾಯಣ ಮಾರ್ಗದ ದೇವತೆಗಳು ದಕ್ಷಿಣಾಯನ ಕಾಲದಲ್ಲೂ ಇರುತ್ತಾರೆ. ಅಲ್ಲದೆ ಜೀವಿಗಳಿಗೆ ಯಾವಾಗಲೂ ಸೂರ್ಯನ ರಶ್ಮಿಯ ಸಂಬಂಧ ಇದ್ದೇ ಇರುತ್ತದೆ. ಆದರೆ ಸೂರ್ಯನೆಂಬ ಹೆಬ್ಬಾಗಿಲನ್ನು ದಾಟಿಯೇ ಬ್ರಹ್ಮಲೋಕಕ್ಕೆ ಹೋಗಬೇಕು. ಬೇರೆ ದಾರಿಯಿಲ್ಲ. ಆದ್ದರಿಂದ ಪ್ರತಿದಿನ ಸೂರ್ಯನನ್ನು ನಮಸ್ಕರಿಸಬೇಕು. ರಥಸಪ್ತಮಿಯ ದಿನ ವಿಶೇಷವಾಗಿ ನಮಸ್ಕರಿಸಬೇಕು.