ಗೋಂಧಳಿ ಪದಗಾರನಿಗೆ ಪದ್ಮಶ್ರೀ ಕಿರೀಟ


ಬಾಗಲಕೋಟೆ: ನಿತ್ಯವೂ ಮನೆಗಳಿಗೆ ಓಡಾಟ, ತಾಯಿ ಅಂಬಾಭವಾನಿ ಸ್ಮರಣೆಯೊಂದೇ ಜೀವನ. ಮದುವೆ, ಮುಂಜವಿ ಸಮಾರಂಭಗಳ ನಂತರ ರಾತ್ರಿಯಿಡೀ ಗೋಂಧಳಿ ಪದಗಳ ಮೂಲಕ ದೈವ ಆರಾಧನೆ.
ಇದು ಅಕ್ಷರದ ಜ್ಞಾನವಿಲ್ಲದಿದ್ದರೂ ಕಲೆಯನ್ನು ಉಸಿರಾಗಿಸಿಕೊಂಡು ಜೀವಿಸಿದ ಡಾ.ವೆಂಕಪ್ಪ ಸುಗತೇಕ ಜೀವನದ ಯಶೋಗಾಥೆ.
೮೧ ವರ್ಷದ ವೆಂಕಪ್ಪರನ್ನು ಪದ್ಮಶ್ರೀ ಅರಿಸಿಕೊಂಡು ಬಂದಿದೆ. ಈ ಮೊದಲು ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಅವರಿಗೆ ಕರ್ನಾಟಕ ಜಾನಪದ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್‌ನಲ್ಲಿ ವೆಂಕಪ್ಪನ ಸಾಧನೆಗಳನ್ನು ಕೊಂಡಾಡಿದ್ದರು.
ರವಿವಾರ ಗಣರಾಜ್ಯೋತ್ಸವ ಪ್ರಯುಕ್ತ ದೆಹಲಿಯಲ್ಲಿ ಜರುಗಲಿರುವ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೂ ವೆಂಕಪ್ಪ ಸುಗತೇಕರ ಅವರಿಗೆ ಅಧಿಕೃತ ಆಹ್ವಾನ ಬಂದಿದ್ದು, ಶನಿವಾರ ಸಂಜೆ ಅವರು ವಿಮಾನದ ಮೂಲಕ ದೆಹಲಿಗೆ ತೆರಳಿದ್ದಾರೆ.
೬೭ ವರ್ಷಗಳಿಂದ ಗೋಂಧಳಿ ಪದಗಳನ್ನು ಹಾಡುತ್ತ ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆ, ಮನೆಗೆ ತೆರಳಿ ದೇವಿ ಹಾಡುಗಳನ್ನು ಹಾಡುತ್ತಿರುವ ವೆಂಕಪ್ಪ ಸುಗತೇಕರಿಗೆ ಇಷ್ಟೆಲ್ಲ ಪ್ರಶಸ್ತಿಗಳು ಬಂದಿದ್ದರೂ ಯಾವುದೇ ಹಮ್ಮು, ಬಿಮ್ಮುಗಳಿಲ್ಲ. ತಮ್ಮ ವಿನಯವಂತಿಕೆ ಮೂಲಕವೇ ದೇಶವೇ ಗಮನಸೆಳೆದಿರುವ ವೆಂಕಪ್ಪ ಅಂಬಾಜಿ ಸುಗತೇಕರ ಸಾಧನೆ ಕಂಡು ಕೋಟೆನಗರಿ ಜನ ಸಂಭ್ರಮಿಸುತ್ತಿದ್ದಾರೆ.