ಬಹುತೇಕ ಜನರು ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋದಾಗ ಪ್ರಾರ್ಥನೆ ಮಾಡುತ್ತಾರೆ. ಈ ಪ್ರಾರ್ಥನೆಯನ್ನು ಏಕೆ ಮಾಡಬೇಕು? ಪ್ರಾರ್ಥನೆಯ ಮೂಲಕ ದೇವರನ್ನು ಏನು ಕೇಳಬೇಕು? ಎಂದು ಅರಿಯದೆ, ಪ್ರಾರ್ಥನೆಯ ಮೂಲಕ ದೇವರನ್ನು ಆ ಕ್ಷಣದ ಅವಶ್ಯಕತೆಗಳನ್ನು ಬೇಡುವುದು ಸರ್ವೇಸಾಮಾನ್ಯ.
ಒಬ್ಬ ಯುವಕ ದೇವರಲ್ಲಿ ನಿತ್ಯವೂ ನಿಷ್ಠೆಯಿಂದ ಪ್ರಾರ್ಥಿಸುತ್ತಾನೆ.. ದೇವರು ಪ್ರತ್ಯಕ್ಷನಾದಾಗ, ಆ ಯುವಕ ದೇವರಲ್ಲಿ ವಿಶೇಷವಾದ ವರ ಬೇಡುತ್ತಾನೆ. ನನ್ನ ಮೊಮ್ಮಗನಿಗೆ ಚಿನ್ನದ ತಟ್ಟೆಯಲ್ಲಿ ಊಟಮಾಡಿಸುವಾಗ, ನಾನು ಸಧೃಢನಾಗಿ ಆರೋಗ್ಯವಾಗಿ ಎಲ್ಲರಿಂದಲೂ ಪ್ರಶಂಶೆ ಪಡೆಯುವಂತೆ ಆಶೀರ್ವಾದ ಬೇಡುತ್ತಾನೆ.
ದೇವರು ವರಕೊಟ್ಟ. ಇಲ್ಲಿಯ ತಾತ್ಪರ್ಯ.. ಮೊಮ್ಮಗನಿಗೆ ಚಿನ್ನದ ತಟ್ಟೆಯಲ್ಲಿ ಊಟ ಮಾಡಿಸುವ ಅಂದರೆ ಐಶ್ವರ್ಯ, ಮದುವೆ, ವಂಶಾಭಿವೃದ್ಧಿ, ಮೊಮ್ಮಗ, ಆರೋಗ್ಯ ಎಲ್ಲವನ್ನು ಬೇಡುವಂತೆ ತರ್ಕಭದ್ದವಾಗಿ ವರ ಪಡೆದ. ಆದರೆ ಇವೆಲ್ಲವೂ ಐಹಿಕ ಸುಖಗಳು. ದೇವರು ಆ ಸುಖಗಳನ್ನೇನೋ ಕೊಟ್ಟ, ಆದರೆ ಅದರ ಜೊತೆ ಅಷ್ಟೇ ದುಃಖವನ್ನು ಇಟ್ಟ. ಮದುವೆಯಾದ, ಮಕ್ಕಳನ್ನು ಪಡೆದ. ಹೆಂಡತಿಯನ್ನು ಕಳೆದುಕೊಂಡ. ಮಕ್ಕಳು ಬೆಳೆದು ದೊಡ್ಡವರಾದರು. ಮೊಮ್ಮಕ್ಕಳನ್ನು ಪಡೆದ, ಕಣ್ಣ ಮುಂದೆ ಮಕ್ಕಳನ್ನು ಕಳೆದುಕೊಂಡ. ಮೊಮ್ಮಗನಿಗೆ ಚಿನ್ನದ ತಟ್ಟೆಯಲ್ಲಿ ಊಟ ಮಾಡಿಸುವಷ್ಟು ಐಶ್ವರ್ಯ ಪಡೆದ, ಆರೋಗ್ಯ ಪಡೆದ, ಆದರೆ ಅದನ್ನು ಒಂಟಿಯಾಗಿ ಅನುಭವಿಸಲು ಆಗದಂಥಾ ಸ್ಥಿತಿಯಲ್ಲಿ ಇಟ್ಟ. ಇಂಥಾ ಐಹಿಕ ಭಾಗ್ಯಗಳನ್ನು ತರ್ಕ ಬದ್ಧವಾದ ವರ ಪಡೆದರೆ ಅದರಿಂದ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ ಎಂಬುದು ಹಿರಣ್ಯಕಶ್ಯಪುವಿನ ವರವೇ ನಮಗೆ ತಿಳಿಸಿಕೊಡುತ್ತದೆ. ಹಾಗಾದರೆ ದೇವರನ್ನು ಏನು ಬೇಡಬೇಕು.
ನಮ್ಮ ಪ್ರಾರ್ಥನೆಗಳು ನಿಷ್ಕಾಮವಾಗಿರಬೇಕು, ನಮ್ಮ ಪ್ರಾರ್ಥನೆಗಳು ಆಧ್ಯಾತ್ಮಿಕ ಮಟ್ಟದಲ್ಲಿದ್ದಾಗ ನಮಗೆ ಪ್ರಾರ್ಥನೆಯ ಲಾಭ ಸಿಗುತ್ತದೆ. ದೇವರಲ್ಲಿ ಪ್ರಾರ್ಥಿಸುವಾಗ ಐಹಿಕ ಸುಖಗಳನ್ನು ಕೇಳುವುದು ಎಂದರೆ ಶಾಶ್ವತನಾದ ಭಗವಂತನಲ್ಲಿ ಅಶಾಶ್ವತವಾದದ್ದನ್ನು ಬೇಡಿದಂತಾಗುತ್ತದೆ. ನಾವು ಪ್ರಾರ್ಥನೆಯಲ್ಲಿ ಕೆಲವು ವ್ಯಾವಹಾರಿಕ ಆಸೆಗಳು ಪೂರ್ಣವಾಗಬೇಕೆಂದು ದೇವರನ್ನು ಪೂಜಿಸುತ್ತಿದ್ದರೆ ಅದು ಸಕಾಮ ಸಾಧನೆಯಾಗಿದೆ. ಆದ್ದರಿಂದ, ಪ್ರಾರ್ಥನೆ ಮಾಡುವಾಗ, ಮೋಕ್ಷ ಸಾಧನೆಗೆ ಪೂರಕವಾದಂತಹ ಪ್ರಾರ್ಥನೆಯನ್ನೇ ದೇವರಲ್ಲಿ ಮಾಡಬೇಕು.
ಹೇ ಭಗವಂತ, ನನ್ನ ಸಾಧನೆಯಲ್ಲಿ ಬರುವ ಅಡೆತಡೆಗಳು ದೂರವಾಗಲಿ. ನಾನು ಜಪ, ತಪ, ಅನುಷ್ಠಾನ ನಿತ್ಯವೂ ಮಾಡುವಂತಾಗಲಿ. ನನ್ನನ್ನು ಸದಾಚಾರವಂತನನ್ನಾಗಿ ಮಾಡು, ನಿನ್ನಲ್ಲಿ ನನ್ನ ಶ್ರದ್ಧೆ ಬೆಳೆಯಲಿ.
ದಿನವಿಡೀ ನಡೆಯುವ ಪ್ರತಿಯೊಂದು ಘಟನೆಯಲ್ಲಿ ನಾನು ಶಾಂತವಾಗಿ, ಸ್ಥಿರವಾಗಿ ಮತ್ತು ಸಂತೋಷವಾಗಿ ಸ್ವೀಕರಿಸಿ ಇರುವಂತಾಗಲಿ. ನನ್ನ ಪ್ರತಿಯೊಂದು ಕ್ರಿಯೆಯೂ ಒಂದು ಸಾಧನೆಯಾಗಲಿ, ನಿನ್ನ ಅಸ್ತಿತ್ವವನ್ನು ನಾನು ಅನುಭವಿಸುವಂತಾಗಲಿ. ನನ್ನಲ್ಲಿ ನಿನ್ನ ಅನನ್ಯ ಭಕ್ತಿಯು ಸೃಷ್ಟಿಯಾಗಲಿ. ಒಂದು ಕ್ಷಣವೂ ನಿನ್ನನ್ನು ಮರೆಯಲು ಬಿಡಬೇಡ. ನಾನು ಎಲ್ಲಿ ತಪ್ಪುತ್ತಿದ್ದರೂ, ನನಗೆ ಅದರ ಅರಿವಾಗಲಿ. ಹೇ ಭಗವಂತಾ, ಅನಿಷ್ಟ ಮತ್ತು ನಕಾರಾತ್ಮಕ ಶಕ್ತಿಗಳಿಂದ ನನ್ನ ರಕ್ಷಣೆ ಮಾಡು. ನಿನ್ನ ನಾಮ ಸಂಕೀರ್ತನೆಯಿಂದ ಸದಾ ನಿನ್ನ ಆರಾಧಿಸುವಂತೆ ಮಾಡು ಎಂಬ ಪ್ರಾರ್ಥನೆಗಳು ನಮ್ಮ ಜೀವನೋನ್ನತಿಗೆ ಕಾರಣವಾಗುತ್ತವೆ.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ದೇವರಿಂದ ವರ ಪಡೆದು ನಮ್ಮ ಉದ್ಧಾರವಾಗಬೇಕೇ ಹೊರತು ಅವನತಿಯಲ್ಲ! ಸರ್ವದಾ ಹರಿ ಭಕ್ತರಾದ ಪ್ರಹ್ಲಾದರಾಜರ, ಧ್ರುವರಾಜರ ಪ್ರಾರ್ಥನೆಗಳು ನಮಗೆ ಅನುಕರಣೀಯ.
ನಮ್ಮ ಮಹರ್ಷಿಗಳು ಸಾರ್ವಕಾಲಿಕವಾಗಿ ಸರ್ವಜನಾಂಗದ ಒಳಿತಿಗಾಗಿ ಅನೇಕ ನಿತ್ಯ, ನೈಮಿತ್ತಿಕ ಆಚರಣೆಗಳನ್ನೂ ತಿಳಿಸಿಕೊಟ್ಟಿದ್ದಾರೆ. ಅವುಗಳನ್ನು ಪಾಲಿಸುತ್ತ `ದೇವರು ನಮಗೆ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸಲಿ’ ಎಂಬ ಆದರ್ಶ ಪ್ರಾರ್ಥನೆಯನ್ನು ಸೂತ್ರಪ್ರಾಯವಾಗಿ ಹೇಳಿ ಅದೇ ಇಹ ಪರಗಳಲ್ಲೂ ನಮ್ಮನ್ನು ರಕ್ಷಿಸುತ್ತದೆ ಎಂಬ ಉನ್ನತ ಸಲಹೆ ನೀಡಿದ್ದಾರೆ.