ಬೆಂಗಳೂರು: ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಟಾಟಾ, ಜಿಂದಾಲ್, ಮಹೀಂದ್ರ ಸೇರಿದಂತೆ ದಿಗ್ಗಜ ಉದ್ಯಮಿಗಳ ಜತೆ ಸಚಿವ ಎಂ. ಬಿ. ಪಾಟೀಲ್ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಉದ್ದೇಶದೊಂದಿಗೆ 2ದಿನಗಳ ಮುಂಬೈ ಪ್ರವಾಸ ಕೈಗೊಂಡಿದ್ದು, ಮೊದಲ ದಿನವಾದ ಇಂದು ಭಾರತದ ಪ್ರಮುಖ ಕೈಗಾರಿಕಾ ಸಂಘಟಿತ ಸಂಸ್ಥೆಗಳಾದ – ಮಹೀಂದ್ರಾ ಗ್ರೂಪ್, ಆರ್‌ಪಿಜಿ ಗ್ರೂಪ್, ಟಾಟಾ ಗ್ರೂಪ್ ಮತ್ತು ಜೆಎಸ್‌ಡಬ್ಲ್ಯೂಗಳ ದಿಗ್ಗಜ ಉದ್ಯಮಿಗಳನ್ನು ಭೇಟಿ ಮಾಡಿದೆ. ನಮ್ಮ ಸರಣಿ ಸಭೆಗಳ ಉದ್ದಕ್ಕೂ, ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ಸರ್ಕಾರದ ಬೆಂಬಲ, ಹೂಡಿಕೆಗಿರುವ ಪೂರಕವಾದ ನೀತಿ, ಉತ್ತೇಜನ, ಪ್ರೋತ್ಸಾಹದ ಕ್ರಮಗಳು, ವಿಶೇಷ ರಿಯಾಯಿತಿಗಳು, ಸೌಲಭ್ಯಗಳೆಲ್ಲವನ್ನೂ ವಿವರಿಸಲಾಯಿತು ಎಂದಿದ್ದಾರೆ.