ಯೋಗ ದಿನ – ನೆನಪಿಟ್ಟುಕೊಳ್ಳಬೇಕು

0
11

ಯೋಗಃ ಕರ್ಮಸು ಕೌಶಲಮ್’ ಭಗವಂತನು ಯೋಗಕ್ಕೆ ಕೊಡುವ ಒಂದು ಸಂಕ್ಷಿಪ್ತ ವಿವರಣೆ. ನಾವು ಮಾಡುವ ಕೆಲಸಗಳಲ್ಲಿ ಒಂದು ವಿಶಿಷ್ಟ ಕೌಶಲ್ಯವೇ ಯೋಗ. ಕರ್ಮಯೋಗದ ಸಂದರ್ಭದಲ್ಲಿ ಈ ಮಾತು ಬಂದಿರುವುದರಿಂದ ಪುಣ್ಯ-ಪಾಪಗಳಿಗೆ ಅಂಟಿಕೊಳ್ಳದಿರುವಂತೆ ಸಮತ್ವ ಬುದ್ಧಿಯಿಂದ ಕರ್ಮ ಮಾಡುವಿಕೆಯೇ ಕರ್ಮದ ಕೌಶಲ. ಪುಣ್ಯ-ಪಾಪಗಳನ್ನು ಉಂಟು ಮಾಡುವ ಸ್ವಭಾವವುಳ್ಳ ಕರ್ಮಗಳಿಂದ ಪುಣ್ಯ-ಪಾಪಗಳು ಉಂಟಾಗದಂತೆ ಎಚ್ಚರಿಕೆ ವಹಿಸಿ ಮಾಡಬೇಕಾಗುತ್ತದೆ.
ಇದಕ್ಕೊಂದು ಉದಾಹರಣೆ ಆಹಾರವನ್ನು ಸಹಜವಾಗಿ ಸ್ವೀಕರಿಸಿದರೆ ಅದರಿಂದ ಪುಣ್ಯ-ಪಾಪಗಳಿವೆ. ಆಹಾರವು ಇನ್ನೊಂದು ಜೀವಿಯ ಹಿಂಸೆಯಿಂದ ತಯಾರಾಗುತ್ತದೆ. ಅಲ್ಲದೇ ಆಹಾರವನ್ನು ಸ್ವೀಕರಿಸುವಾಗ ಮನಸ್ಸಿನಲ್ಲಿ ಉಂಟಾಗುವ ರಾಗವು ಪುಣ್ಯ-ಪಾಪಗಳಿಗೆ ಕಾರಣವಾಗುತ್ತದೆ. ರುಚಿಯಾದ ಆಹಾರವನ್ನು ತಿನ್ನುವಾಗ ರಾಗ ಅಥವಾ ಆಸಕ್ತಿ ಬಂದೇ ಬರುತ್ತದೆ. ಬಾಯಲ್ಲಿ ನೀರು ಬರುವಿಕೆಯೇ ಇದಕ್ಕೆ ಸಾಕ್ಷಿ. ಆಹಾರವನ್ನು ಕುರಿತಾದ ರಾಗವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ತನ್ಮೂಲಕ ಬರುವ ಪಾಪ-ಪುಣ್ಯಗಳನ್ನು ಪರಿಹರಿಸಿಕೊಳ್ಳಲು ಭಗವಂತನು ಒಂದು ಉಪಾಯವನ್ನು ಕೊಟ್ಟಿದ್ದಾನೆ.
ತಿಂದ ಆಹಾರನ್ನೆಲ್ಲ ಪರಮಾತ್ಮನಿಗೆ ಅರ್ಪಣೆ ಮಾಡಬೇಕು. ಇದರಿಂದ ಪುಣ್ಯ-ಪಾಪಗಳು ಉತ್ಪತ್ತಿಯಾಗುವುದು ತಪುö್ಪತ್ತದೆ. ಇದನ್ನು ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿದದಾಸಿ ಯತ್ | ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್ || ಶುಭಾಶುಭ ಫಲೈರೇವಂ ಮೋಕ್ಷಸೇ' ಎಂಬಲ್ಲಿ ಹೇಳಿದ್ದಾನೆ. ಆಹಾರವನ್ನು ತಿನ್ನುತ್ತಿರುವಾಗಲೇ ಹೊಟ್ಟೆಯಲ್ಲಿ ವೈಶ್ವಾನರಾಗ್ನಿಯ ರೂಪದಲ್ಲಿ ಇರುವ ಪರಮಾತ್ಮನಿಗೆ ಅರ್ಪಿಸುತ್ತಾ ಹೋಗಬೇಕು. ಈ ಭೋಜನ ತನಗಲ್ಲ, ತನ್ನೊಳಗಿರುವ ದೇವರಿಗೆ ಈ ಭಾವವು ದೃಢವಾಗಿರಬೇಕು. ಇನ್ನು ಹಿತ-ಮಿತ-ಪವಿತ್ರ ಆಹಾರದ ನಿಯಮಗಳಂತೂ ಇವೆ. ಇವೆಲ್ಲವೂ ಸೇರಿ ಭೋಜನದ ಕೌಶಲ್ಯ. ಯಾವುದೇ ಕೆಲಸ ಮಾಡುವಾಗ ಆ ಕೆಲಸದ ಬಗ್ಗೆ ಪರಿಪೂರ್ಣ ತಿಳಿವಳಿಕೆ, ಶ್ರದ್ಧೆ, ಏಕಾಗ್ರತೆಯಿಂದ ಮಾಡಿದಾಗ ಆ ಕೆಲಸವು ಉತ್ತಮವಾಗುತ್ತದೆ.ಯದೇವ ವಿದ್ಯಯಾ ಕರೋತಿ ಶ್ರದ್ಧಯಾ ಉಪನಿಷದಾ ತದೇವ ವೀರ್ಯವತ್ತರಂ ಭವತಿ’ ಎಂಬುದಾಗಿ ಉಪನಿಷತ್ತು ಹೇಳುತ್ತದೆ. ತಾನು ಕೈಗೆತ್ತಿಕೊಳ್ಳುತ್ತಿರುವ ಕೆಲಸದ ಬಗ್ಗೆ ಪರಿಪೂರ್ಣ ಮಾಹಿತಿ ತನಗಿರಬೇಕು. ತಾನು ಮಾಡುತ್ತಿರುವ ಕೆಲಸ ಭಗವಂತನಿಗೆ ಅರ್ಪಣೆ ಮಾಡಬೇಕು, ಇದರಿಂದ ತನ್ನ ಆತ್ಮೋದ್ಧಾರವಾಗುತ್ತದೆಯೆಂಬುದಾಗಿ ಭಾವಿಸುತ್ತಿರಬೇಕು. ಇದೇ ಶ್ರದ್ಧೆ. ಕೆಲಸ ಮಾಡುತ್ತಿರುವಾಗ ಬೇರೆ ಕಡೆ ಗಮನ ಹರಿಸದೇ ನೂರಕ್ಕೆ ನೂರು ಮನಸ್ಸನ್ನು ಆ ಕೆಲಸದಲ್ಲೇ ತೊಡಗಿಸಬೇಕು. ತನ್ನ ಸಾಮರ್ಥ್ಯ-ಶ್ರಮ-ವಿಶ್ರಾಂತಿಗಳ ಅರಿವಿರಬೇಕು. ಹೀಗೆ ಕೆಲಸಗಳನ್ನು ನಿರ್ವಹಿಸುವಿಕೆ ಕೌಶಲ್ಯವಾಗುತ್ತದೆ, ಇದೇ ಯೋಗವಾಗುತ್ತದೆ.
ನಾಳೆಯೇ ವಿಶ್ವಯೋಗ ದಿನಾಚರಣೆ. ಆಸನ-ಪ್ರಾಣಾಯಾಮ ಮತ್ತು ಜಪ-ಧ್ಯಾನಗಳಂತೆಯೇ ಆಹಾರ-ವ್ಯವಹಾರಗಳಲ್ಲಿಯೂ ಹಿಂದೆ ಹೇಳಿದ ಕೌಶಲ್ಯಗಳು ಸೇರಿಕೊಂಡರೆ ಉತ್ತಮ ಯೋಗಿಯಾಗುತ್ತಾನೆ ಎಂಬುದನ್ನು ನೆನಪಿಸಿಕೊಳ್ಳಬೇಕು.

Previous articleಮಣಿಪುರಕ್ಕೆ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯ
Next articleಇಲಾಖೆ ಅನುಮತಿ ಪಡೆಯದೇ ಸ್ಮಾರ್ಟ್ ಕಾಮಗಾರಿ ನಡೆಸಿತಾ?