ಚಂಚಲ ಮನಸ್ಸು ಎಂದಿಗೂ ಬೇಡ

0
16

ಬೇಕು ಎಂದು ಕೇಳಿದ್ದನ್ನೆಲ್ಲಾ ಸರ್ವಥಾ ನೀಡಬಾರದು. ಶಾಸ್ತ್ರದಲ್ಲಿ ಹೇಳಿರುವ ವೈರಾಗ್ಯವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಾಗದ ಸಂಗತಿಯಲ್ಲ. ಮನಸ್ಸಿಗೆ ಒಳ್ಳೆಯ ಭಾವನೆಗಳನ್ನು ಮೂಡಿಸಿ, ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗುವುದನ್ನೇ ವೈರಾಗ್ಯ ಎಂಬ ಪದದಿಂದ ಕರೆದಿದ್ದಾರೆ.
ಮೂವತ್ತು ವರ್ಷಗಳ ಕಾಲ ಅಖಂಡವಾಗಿ ಯಾವ ಉದ್ದೇಶಕ್ಕಾಗಿ ಪ್ರತಿಕ್ಷಣವೂ ಬೆವರು ಸುರಿಸಿ ಮಣ್ಣು ಹೊತ್ತು ದುಡಿದಿರುತ್ತೀರೋ, ಅಂತಹ ಉದ್ದೇಶವು ಸಫಲವಾಗುವ ಕ್ಷಣದಲ್ಲಿ ಒಂದು ವೇಳೆ ಮನಸ್ಸು ಕೇಳುವ ಆಮಿಷಕ್ಕೆ ಬಲಿಯಾದರೆ ಪರ್ವತದ ತುತ್ತ ತುದಿಯಿಂದ ಕೆಳಕ್ಕೆ ಜಾರಿದಂತೆ. ಪುನಃ ಪರ್ವತವನ್ನು ಹತ್ತಲು ಶಕ್ತಿಯೂ ಕೂಡ ನಿಮ್ಮಲ್ಲಿ ಇರುವುದಿಲ್ಲ.
ನಮ್ಮ ದೇಶದ ದೌರ್ಭಾಗ್ಯವೆಂದರೆ ಶೇಕಡ ೯೯ ಮಂದಿಯಲ್ಲಿ ಏಕಾಗ್ರತೆಯ ವಿಜಯಸ್ತಂಭ ಸ್ಥಾಪನೆಯೇ ಆಗುತ್ತಿಲ್ಲ. ಮನಸ್ಸಿನ ಚಾಂಚಲ್ಯನದಿಯ ಅಲೆಗಳು ಪ್ರವಾಹದ ಸುಳಿಗಳೇ, ರಭಸವಾಗಿ ಎದ್ದು ಬರುತ್ತಿವೆ.
ಆತ್ಮ, ಬುದ್ಧಿ ಹಾಗೂ ಮನಸ್ಸುಗಳ ಸೌರವವನ್ನು ಮರೆತಿದ್ದಾರೆ. ಅದರಲ್ಲಿಯೂ ಕೆಲವು ಮಂದಿ ಹೊರಗಿನ ಅಲಂಕಾರಗಳನ್ನು ಹೆಚ್ಚಿಸಿ, ದೇಹದ ಸೌಂದರ್ಯದ ಬಲೆಗೆ ಸಿಲುಕಿ ಹುಚ್ಚರಾಗಿದ್ದಾರೆ. ತಮ್ಮ ದೇಹದ ಅರ್ಚಕರಾಗಿದ್ದಾರೆ. ನಮ್ಮ ದೇಶದ ಸಂಸ್ಕೃತಿಯ ಬೆನ್ನೆಲುಬು ಇದರಿಂದ ಸವೆಯುತ್ತಿದೆ.
ತನ್ನ ಅಸಾಧಾರಣ ತಪೋಬಲದಿಂದ ಭಗೀರಥನು ದೇವಗಂಗೆಯನ್ನು ಧರೆಗಿಳಿಸಿದನು. ಇವನ ಆದರ್ಶದಲ್ಲಿ ನಿರ್ಭಯರಾಗಿ ಎಂತಹ ಸಾಧನೆಗೂ ನೀವು ಸಿದ್ಧರಾಗಬೇಕು. ವಿಷಯವಾಸನೆಗಳನ್ನು ಬಲಿಗೊಟ್ಟು, ಏಕಾಗ್ರತೆಯ ಚಿತ್ತದುರ್ಗವನ್ನು ಕಟ್ಟಬೇಕು.ಇಲ್ಲದಿದ್ದರೆ ನೀವು ಸುಂದರ ವೇಷದಲ್ಲಿದ್ದರೂ ಭಿಕ್ಷುಕರಾಗುತ್ತೀರಿ. ಮತ್ತೊಬ್ಬರ ದಾಸರಾಗುತ್ತೀರಿ. ಹೀನರು,ದೀನರು, ಪರಾವಲಂಬಿಗಳು ಆದ ಕ್ಷುಲ್ಲಕ ಜೀವನವನ್ನೇ ನಡೆಸಬೇಕಾಗುತ್ತದೆ. ಈ ಮನಶ್ಚಾಂಚಲ್ಯವನ್ನು ನಿಗ್ರಹಿಸಿ ಸಂಪನ್ನ, ಸಮೃದ್ಧ ಒಡೆಯರಾಗಿ ಕೀರ್ತಿಶಾಲಿಗಳಾಗಿರಿ, ಚಾಂಚಲ್ಯ ಎಂಬ ಮನಸ್ಸಿನ ದುರ್ಗುಣದಲ್ಲಿ ಎಲ್ಲಾ ದೌರ್ಬಲ್ಯ, ದೌರ್ಭಾಗ್ಯಗಳು ಸೇರಿಕೊಂಡಿವೆ. ಸಕಲ ದುರ್ಗುಣಗಳ ತವರು ಮನೆಯಂತಿರುವ ಈ ಮನಶ್ಚಾಂಚಲ್ಯವನ್ನು ದೂರ ಮಾಡಿದರೆ ನೀವು ಅತ್ಯದ್ಭುತವ್ಯಕ್ತಿಗಳಾಗಿ ಮೆರೆಯುವಿರಿ.

Previous articleಮತ್ತೆ ಮತದಾರನ ಮುಂದೆ ಮಹದಾಯಿ
Next articleಅರಸೀಕೆರೆ-ಕಣ್ಣೂರು ನಡುವೆ ಬೇಸಿಗೆ ವಿಶೇಷ ರೈಲು