SK Home Ad
Home ಕೃಷಿ/ವಾಣಿಜ್ಯ ಬೆಂಗಳೂರಿನಲ್ಲಿ ‘ಡೀಪ್ ಸೈನ್ಸ್’ ಕ್ರಾಂತಿ: Ev ಬ್ಯಾಟರಿಯಿಂದ ಸ್ಮಾರ್ಟ್ ರಸಗೊಬ್ಬರದವರೆಗೆ

ಬೆಂಗಳೂರಿನಲ್ಲಿ ‘ಡೀಪ್ ಸೈನ್ಸ್’ ಕ್ರಾಂತಿ: Ev ಬ್ಯಾಟರಿಯಿಂದ ಸ್ಮಾರ್ಟ್ ರಸಗೊಬ್ಬರದವರೆಗೆ

0
39
ಬೆಂಗಳೂರಿನಲ್ಲೊಂದು 'ಡೀಪ್ ಸೈನ್ಸ್' ಕ್ರಾಂತಿ: ಸಾಬಿಕ್ ಕೇಂದ್ರದ ವಿಶೇಷತೆಗಳಿವು

ಇವಿ ಸುರಕ್ಷತೆಯಿಂದ ರೈತರ ಹೊಲದವರೆಗೆ: ಬೆಂಗಳೂರಿನಲ್ಲಿ ನಡೆಯುತ್ತಿದೆ ‘ಸಾಬಿಕ್’ ಮಹಾ ಸಂಶೋಧನೆ

ಬೆಂಗಳೂರು : ಐಟಿ ನಗರವೆಂದೇ ಖ್ಯಾತವಾಗಿರುವ ಬೆಂಗಳೂರು ಈಗ ‘ಡೀಪ್ ಸೈನ್ಸ್’ ಹಾಗೂ ಕೈಗಾರಿಕಾ ಸಂಶೋಧನೆಯಲ್ಲೂ ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸುತ್ತಿದೆ. ಇದಕ್ಕೆ ಪೂರಕವಾಗಿ, ಬೆಂಗಳೂರಿನ ಸಾಬಿಕ್ ಟೆಕ್ನಾಲಜಿ ಸೆಂಟರ್ (ಎಸ್‌ಟಿಸಿ-ಬಿ) ಭಾರತದ ಕೈಗಾರಿಕಾ ಮತ್ತು ತಾಂತ್ರಿಕ ಬೆಳವಣಿಗೆಗೆ ಪೂರಕವಾದ ಮುಂದಿನ ಪೀಳಿಗೆಯ ವಸ್ತುಗಳು ಹಾಗೂ ಸುಸ್ಥಿರ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಭಾರತೀಯ ಪರಿಸ್ಥಿತಿಗಳಿಗೆ ತಕ್ಕಂತೆ ಮುಂದಿನ ಪೀಳಿಗೆಯ ವಸ್ತುಗಳು ಹಾಗೂ ಸುಸ್ಥಿರ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಜಾಗತಿಕ ರಾಸಾಯನಿಕ ಕಂಪನಿ ಸಾಬಿಕ್‌ನ ಈ ಸಂಶೋಧನಾ ಕೇಂದ್ರವು 2013ರಲ್ಲಿ ಸುಮಾರು 100 ಮಿಲಿಯನ್ ಡಾಲರ್ ಆರಂಭಿಕ ಹೂಡಿಕೆಯೊಂದಿಗೆ ಕಾರ್ಯಾರಂಭ ಮಾಡಿತ್ತು. 40ಕ್ಕೂ ಹೆಚ್ಚು ಎಕರೆ ಕ್ಯಾಂಪಸ್‌ನಲ್ಲಿ 200ಕ್ಕೂ ಅಧಿಕ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ಸಂಶೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಕೇಂದ್ರದ ಸಂಶೋಧನೆಗಳು ಆಟೋಮೋಟಿವ್, ಪ್ಯಾಕೇಜಿಂಗ್, ಆರೋಗ್ಯ ಸೇವೆ, ವಿದ್ಯುತ್-ಎಲೆಕ್ಟ್ರಾನಿಕ್ಸ್ ಮತ್ತು ಕೃಷಿ ಪೋಷಕಾಂಶ ಕ್ಷೇತ್ರಗಳಿಗೆ ವಿಸ್ತರಿಸಿವೆ.

ವಿದ್ಯುತ್ ವಾಹನಗಳಿಗೆ ಹಗುರ ವಸ್ತುಗಳು : ಇವಿ ಬ್ಯಾಟರಿ ಹೌಸಿಂಗ್, ವಾಹನದ ರಚನಾತ್ಮಕ ಭಾಗಗಳು ಮತ್ತು ಚಾರ್ಜರ್‌ಗಳಿಗೆ ಹಗುರವಾದ, ಜ್ವಾಲೆ ನಿರೋಧಕ ಥರ್ಮೋಪ್ಲಾಸ್ಟಿಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತದ ಬಿಸಿಲು ಮತ್ತು ತೇವಾಂಶದ ಪರಿಸ್ಥಿತಿಗೆ ತಕ್ಕಂತೆ ವಸ್ತುಗಳನ್ನು ಪರೀಕ್ಷಿಸುವ ಹವಾಮಾನ ಪ್ರಯೋಗಾಲಯವೂ ಕೇಂದ್ರದಲ್ಲಿದೆ.

ಆಹಾರ, ಆರೋಗ್ಯ ಮತ್ತು ಸುಸ್ಥಿರತೆ : ಆಹಾರದ ತಾಜಾತನ ಕಾಪಾಡುವ ಪ್ಯಾಕೇಜಿಂಗ್, ಮರುಬಳಕೆಗೆ ಅನುಕೂಲಕರ ಮೊನೊ-ಮೆಟೀರಿಯಲ್ ವಿನ್ಯಾಸಗಳು ಹಾಗೂ ಕ್ರಿಮಿನಾಶಕ ಪ್ರಕ್ರಿಯೆಗಳನ್ನು ತಡೆದುಕೊಳ್ಳುವ ವೈದ್ಯಕೀಯ ಪಾಲಿಮರ್‌ಗಳ ಅಭಿವೃದ್ಧಿಯೂ ನಡೆಯುತ್ತಿದೆ. ಮರುಬಳಕೆಯ ಪ್ಲಾಸ್ಟಿಕ್‌ನಿಂದ ಉನ್ನತ ಕಾರ್ಯಕ್ಷಮತೆಯ ವಸ್ತುಗಳನ್ನು ರೂಪಿಸುವ ಸಂಶೋಧನೆಗೆ ಕೇಂದ್ರ ಬೆಂಬಲ ನೀಡುತ್ತಿದೆ.

ರೈತರಿಗಾಗಿ ಪ್ರಯೋಗಾಲಯದಿಂದ ಹೊಲಕ್ಕೆ : ಕೃಷಿ ಪೋಷಕಾಂಶಗಳ ತಂಡವು ಸೂಕ್ಷ್ಮ ಪೋಷಕಾಂಶಯುಕ್ತ ರಸಗೊಬ್ಬರಗಳು ಮತ್ತು ನಿಯಂತ್ರಿತ ಬಿಡುಗಡೆಯ ಜೈವಿಕ ವಿಘಟನೀಯ ಸೂತ್ರೀಕರಣಗಳ ಮೇಲೆ ಕೆಲಸ ಮಾಡುತ್ತಿದೆ. ಟೊಮೆಟೊ, ಮೆಕ್ಕೆಜೋಳ ಮತ್ತು ಎಲೆಕೋಸು ಬೆಳೆಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಇತ್ತೀಚಿನ ವರದಿಯ ಪ್ರಕಾರ, ಸಾಬಿಕ್ ಭಾರತದಲ್ಲಿ ವಿಶೇಷ ಪಾಲಿಮರ್ ಉತ್ಪಾದನೆ ವಿಸ್ತರಿಸುವ ಯೋಜನೆಯನ್ನೂ ಪರಿಶೀಲಿಸುತ್ತಿದ್ದು, ಬೆಂಗಳೂರಿನ ಕೇಂದ್ರವನ್ನು ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ನವೀನ ಪರಿಹಾರ ರೂಪಿಸುವ ಪ್ರಮುಖ ನೆಲೆಯಾಗಿ ಬಳಸಲಿದೆ.