SK Home Ad
Home ಸಿನಿ ಮಿಲ್ಸ್ ‘ಮೈಮಾಟ’ ಹಾಡು ಮಾಜಿ ಪತ್ನಿಗೆ ಟಾರ್ಗೆಟ್?: ಹರಡುತ್ತಿರುವ ವದಂತಿಗಳಿಗೆ ಚಂದನ್ ಶೆಟ್ಟಿ ನೀಡಿದ ಸ್ಪಷ್ಟನೆ; ಇಲ್ಲಿದೆ...

‘ಮೈಮಾಟ’ ಹಾಡು ಮಾಜಿ ಪತ್ನಿಗೆ ಟಾರ್ಗೆಟ್?: ಹರಡುತ್ತಿರುವ ವದಂತಿಗಳಿಗೆ ಚಂದನ್ ಶೆಟ್ಟಿ ನೀಡಿದ ಸ್ಪಷ್ಟನೆ; ಇಲ್ಲಿದೆ ಡಿಟೇಲ್ಸ್

0
22

ಬೆಂಗಳೂರು: ಗಾಯಕ ಹಾಗೂ ಸಂಗೀತ ಸಂಯೋಜಕ ಚಂದನ್ ಶೆಟ್ಟಿ ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಮೈಮಾಟ’ ಆಲ್ಬಂ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಹಾಡಿನ ಸಾಹಿತ್ಯವು ಮಾಜಿ ಪತ್ನಿ ನಿವೇದಿತಾ ಗೌಡ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ಬರೆಯಲಾಗಿದೆ ಎಂಬ ಊಹಾಪೋಹಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇದೀಗ ಈ ಎಲ್ಲಾ ಗೊಂದಲಗಳಿಗೆ ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ವಿವರಣೆ ನೀಡಿದ್ದು, “ಮೈಮಾಟ ಹಾಡನ್ನು ಕೇವಲ ಮನರಂಜನೆಯ ಉದ್ದೇಶದಿಂದಷ್ಟೇ ರಚಿಸಲಾಗಿದೆ. ಯಾರ ಮನಸ್ಸನ್ನೂ ನೋಯಿಸುವ ಅಥವಾ ನಿರ್ದಿಷ್ಟ ವ್ಯಕ್ತಿಯನ್ನು ಟಾರ್ಗೆಟ್ ಮಾಡುವ ಉದ್ದೇಶ ನನಗಿಲ್ಲ. ಹೊಸ ಮಾದರಿಯ ಸಂಗೀತ ಪ್ರಯತ್ನಿಸಬೇಕು ಎಂಬ ಆಸೆಯಿಂದ ಈ ಹಾಡು ಮಾಡಲಾಗಿತ್ತು. ವಿಶೇಷವೆಂದರೆ, ನನ್ನ ವೈಯಕ್ತಿಕ ಜೀವನದಲ್ಲಾದ ಘಟನೆಗಳಿಗಿಂತ ಮುಂಚೆಯೇ ಈ ಹಾಡಿನ ಸಾಹಿತ್ಯ ಸಿದ್ಧವಾಗಿತ್ತು” ಎಂದು ತಿಳಿಸಿದ್ದಾರೆ.

ಹಾಡು ರಿಲೀಸ್ ಆದ ಬೆನ್ನಲ್ಲೇ ನಿವೇದಿತಾ ಗೌಡ, “ನನ್ನದು ಹಾರರ್ ಕಥೆಯಾಗಿತ್ತು, ಭೂತಕಾಲ ನನ್ನನ್ನು ಬಿಟ್ಟು ಕದಲುತ್ತಿಲ್ಲ” ಎಂಬ ಸಾಲುಗಳಿದ್ದ ಪೋಸ್ಟ್ ಹಂಚಿಕೊಂಡಿದ್ದರು. ಇದರಿಂದಾಗಿ ಇಬ್ಬರ ನಡುವೆ ಪರೋಕ್ಷ ವಾಗ್ವಾದ ನಡೆಯುತ್ತಿದೆ ಎಂಬ ವದಂತಿ ದಟ್ಟವಾಗಿತ್ತು.

ಈ ಕುರಿತು ಬೇಸರ ವ್ಯಕ್ತಪಡಿಸಿದ ಚಂದನ್, ಕೆಲವು ಯೂಟ್ಯೂಬ್ ಚಾನೆಲ್‌ಗಳು ಹಾಗೂ ನೆಟ್ಟಿಗರು ಈ ಹಾಡನ್ನು ತಮ್ಮ ವೈಯಕ್ತಿಕ ಜೀವನಕ್ಕೆ ಜೋಡಿಸಿ ನಕಾರಾತ್ಮಕತೆ ಹರಡುತ್ತಿದ್ದಾರೆ ಎಂದು ಮನವಿ ಮಾಡಿದರು. “ಸಂಗೀತ ಎಂಬುದು ಸೃಜನಶೀಲತೆಯ ಅಭಿವ್ಯಕ್ತಿ. ಪ್ರತಿಯೊಂದು ಹಾಡು ಕಲಾವಿದನ ಸ್ವಂತ ಜೀವನದ ಕಥೆಯಾಗಿರುವುದಿಲ್ಲ. ಅನಗತ್ಯ ಊಹಾಪೋಹಗಳನ್ನು ಹರಡಬೇಡಿ” ಎಂದು ಕೋರಿಕೊಳ್ಳುತ್ತಾ, ಹಾಡಿಗೆ ಸಿಗುತ್ತಿರುವ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ.