SK Home Ad
Home ಸಿನಿ ಮಿಲ್ಸ್ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಹೊಡೆದ ‘418’: ಪ್ರೆಸ್‌ಮೀಟ್‌ನಲ್ಲಿ ಗೆಲುವಿನ ಹರ್ಷ ಹಂಚಿಕೊಂಡ ಚಿತ್ರತಂಡ!

ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಹೊಡೆದ ‘418’: ಪ್ರೆಸ್‌ಮೀಟ್‌ನಲ್ಲಿ ಗೆಲುವಿನ ಹರ್ಷ ಹಂಚಿಕೊಂಡ ಚಿತ್ರತಂಡ!

0
35

ಬೆಂಗಳೂರು: ನಿರ್ದೇಶಕ ಪ್ರಶಾಂತ್ ನೀಲ್ ಅರ್ಪಣೆಯಲ್ಲಿ ಮೂಡಿಬಂದಿರುವ, ಕೀರ್ತನ್ ನಾಡಗೌಡ ಚೊಚ್ಚಲ ನಿರ್ದೇಶನದ ಸೈಕಲಾಜಿಕಲ್-ಸೂಪರ್‌ನ್ಯಾಚುರಲ್ ಹಾರರ್ ಥ್ರಿಲ್ಲರ್ ‘418’ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 23ರಂದು ತೆರೆಕಂಡ ಈ ಚಿತ್ರವು ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಗಳಿಸಿದ್ದು, ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚಿತ್ರತಂಡ ಮಾಧ್ಯಮಗೋಷ್ಠಿ ನಡೆಸಿ ಸಂತಸ ಹಂಚಿಕೊಂಡಿತು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಕೀರ್ತನ್ ನಾಡಗೌಡ, “ನೈಜ ಭಯ ಹುಟ್ಟಿಸಲು ಮುಖವಾಡ ಧರಿಸಿದ ರಾಕ್ಷಸರಾಗಲಿ ಅಥವಾ ಕಿವಿಗಡಚಿಕ್ಕುವ ಶಬ್ದಗಳಾಗಲಿ ಅಗತ್ಯವಿಲ್ಲ. ತಾಯಿಯ ಜೋಗುಳದಂತಹ ಮೃದು ಧ್ವನಿಗೆ ಯಕ್ಷಗಾನದ ಗೆಜ್ಜೆಯ ಸದ್ದು ಬೆರೆಸಿ, ನೈಜ ಧ್ವನಿಗಳ ಮೂಲಕವೇ ಹೊಸ ಮಾದರಿಯ ಭಯಾನಕ ವಾತಾವರಣ ಸೃಷ್ಟಿಸಿದ್ದೇವೆ. ಕೇವಲ ರಕ್ತಪಾತ ತೋರಿಸುವ ಬದಲು ಪ್ರೇಕ್ಷಕರಲ್ಲಿ ಮಾನಸಿಕವಾಗಿ ಆತಂಕ ಮೂಡಿಸುವುದು ನಮ್ಮ ಉದ್ದೇಶವಾಗಿತ್ತು” ಎಂದು ತಿಳಿಸಿದರು.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚೈತ್ರಾ ಜೆ. ಆಚಾರ್, ತಾಯ್ತನ ವಂಚಿತ ಮಹಿಳೆಯ ಅಸಹಾಯಕ ಪಾತ್ರದ ಕುರಿತು ಮಾತನಾಡಿದರು. “ಸಮಾಜವು ಹೆಣ್ಣಿನ ಮೌಲ್ಯವನ್ನು ತಾಯ್ತನದ ಆಧಾರದ ಮೇಲೆ ಅಳೆಯುವ ಧೋರಣೆಯನ್ನು ಈ ಪಾತ್ರ ಬಿಂಬಿಸುತ್ತದೆ. ಆ ನಿರಾಸೆ ಮಾನಸಿಕ ಕುಸಿತಕ್ಕೆ ತಳ್ಳುವ ಸನ್ನಿವೇಶವನ್ನು ಭಾವನಾತ್ಮಕವಾಗಿ ಅಭಿನಯಿಸುವುದು ಒಂದು ವಿಶಿಷ್ಟ ಸವಾಲಾಗಿತ್ತು” ಎಂದು ತಮ್ಮ ಅನುಭವ ಹಂಚಿಕೊಂಡರು.


ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ವೈ. ರವಿಶಂಕರ್ ಹಾಗೂ ನವೀನ್ ಯೆರ್ನೇನಿ ನಿರ್ಮಿಸಿರುವ ಈ ಚಿತ್ರದಲ್ಲಿ ರಮೇಶ್ ಇಂದಿರಾ, ಪ್ರೀತಿ ಪಗಡಾಲ ಸೇರಿದಂತೆ ದೊಡ್ಡ ತಾರಾಗಣವಿದೆ. ದಿನೇಶ್ ದಿವಾಕರನ್ ಛಾಯಾಗ್ರಹಣ ಹಾಗೂ ವೆಂಕಿ ಜಿ.ಜಿ. ಅವರ ಹಿನ್ನೆಲೆ ಸಂಗೀತ ಚಿತ್ರದ ಹಾರರ್ ವಾತಾವರಣವನ್ನು ಮತ್ತಷ್ಟು ದಟ್ಟವಾಗಿಸಿದೆ.