ಬೆಂಗಳೂರು: ಕಿರುತೆರೆಯ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಅಮ್ಮ ಮತ್ತು ಮಗನ ಭಾವನಾತ್ಮಕ ಬಾಂಧವ್ಯದ ಕಥಾಹಂದರ ಹೊಂದಿರುವ ‘ಗೌರಿ ಪುತ್ರ’ ಎಂಬ ನೂತನ ಕೌಟುಂಬಿಕ ಮೆಗಾ ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ‘ಜೀವನ ಸಿರಿಯಾದ ಅಮ್ಮನಿಗೆ ತವರಿನ ಸಿರಿಯನ್ನ ಕೊಡಿಸೋಕೆ ಬರ್ತಿದ್ದಾನೆ ಗೌರಿಪುತ್ರ’ ಎಂಬ ಅಡಿಬರಹದೊಂದಿಗೆ ಬಿಡುಗಡೆಯಾಗಿರುವ ಈ ಧಾರಾವಾಹಿಯ ಪ್ರೋಮೋಗಳು ಈಗಾಗಲೇ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿವೆ.
ಕಲರ್ಸ್ ಕನ್ನಡದ ‘ರಾಮಾಚಾರಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟ ರಿತ್ವಿಕ್ ಕೃಪಾಕರ್ ಈ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇವರಿಗೆ ಜೋಡಿಯಾಗಿ ‘ಗಟ್ಟಿಮೇಳ’ ಖ್ಯಾತಿಯ ನಟಿ ಮಹತಿ ಭಟ್ ನಾಯಕಿಯಾಗಿ ಅಭಿನಯಿಸುತ್ತಿದ್ದು, ಈ ಹೊಸ ಜೋಡಿಯ ಅಭಿನಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಈ ಧಾರಾವಾಹಿಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಅನು ಪ್ರಭಾಕರ್ ಅವರು ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪ್ರಬುದ್ಧ ಅಭಿನಯವು ಈ ಭಾವನಾತ್ಮಕ ಕಥೆಗೆ ಮತ್ತಷ್ಟು ಮೆರುಗು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಟ-ನಟಿಯರ ಆಯ್ಕೆಯ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಯಿಯ ಸ್ವಾಭಿಮಾನ ಹಾಗೂ ಮಗನ ಅತಿಯಾದ ಪ್ರೀತಿಯ ಸುತ್ತ ಸಾಗುವ ‘ಗೌರಿ ಪುತ್ರ’ ಧಾರಾವಾಹಿಯ ಪ್ರಸಾರದ ದಿನಾಂಕ ಮತ್ತು ಸಮಯವನ್ನು ವಾಹಿನಿಯು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.






















