SK Home Ad
Home ಸುದ್ದಿ ರಾಜ್ಯ ಭರವಸೆ ಬೇಡ, ಲಿಖಿತ ಆದೇಶ ಬೇಕು; ಅ. 22ರಿಂದ ಮತ್ತೆ ಹೆದ್ದಾರಿ ತಡೆ!

ಭರವಸೆ ಬೇಡ, ಲಿಖಿತ ಆದೇಶ ಬೇಕು; ಅ. 22ರಿಂದ ಮತ್ತೆ ಹೆದ್ದಾರಿ ತಡೆ!

0
29

ಧಾರವಾಡ: ಸಕ್ಕರೆ ಕನಿಷ್ಠ ಮಾರಾಟ ಬೆಲೆ 60 ರೂ. ನಿಗದಿಪಡಿಸಬೇಕು, ಪ್ರತಿ ಟನ್ ಕಬ್ಬಿಗೆ 5.500 ರೂ ದರ ನಿಗದಿಪಡಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡಿರುವ ರೈತರು ರವಿವಾರ ಸಂಜೆ ಧಾರವಾಡ ಸಮೀಪದ ತೇಗೂರ ಗ್ರಾಮ ತಲುಪಿದ್ದು, ತಮ್ಮ ಬೇಡಿಕೆ ಈಡೇರಿಸಲು 4 ದಿನ ಗಡುವು ನೀಡಿದ್ದಾರೆ.

ತಮ್ಮ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ಸರ್ಕಾರವು ವಿಫಲವಾದರೆ ಅ. 22ರಿಂದ ಮತ್ತೊಂದ ಹಂತದ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೋರಾಟದ ನೇತೃತ್ವವಹಿಸಿದ್ದ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ, ಗೌರವಾಧ್ಯಕ್ಷ ಶಶಿಕಾಂತ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆ. 29ರಂದು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಸ್ಪಂದಿಸದೇ ಇದ್ದುದರಿಂದ ಹತ್ತರಗಿ ಸೇರಿ ನಾನಾ ಕಡೆಗಳಲ್ಲಿ ಹೆದ್ದಾರಿ ತಡೆ ನಡಸಲಾಯಿತು. ಬಳಿಕ ಪಾದಯಾತ್ರೆ ಮಾಡಿಕೊಂಎಉ ಧಾರವಾಡ ಹತ್ತಿರದವರೆಗೂ ಬಂದರೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಕಾರಾತ್ಮಕ ಸ್ಪಂದಿಸಿಲ್ಲ. ಬೇಡಿಕೆ ಈಡೇರಿಕೆ ಘೋಷಣೆ ಮಾಡಿಲ್ಲ. ಆದರೆ ನಾವು ಇಷ್ಟಕ್ಕೆ ಸುಮ್ಮನಿರುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯುತ್ತದೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಘೋಷಣೆ ಮಾಡಿದರು.

ಮಾತುಕತೆಗೆ ಬಾರದ ಪ್ರತಿನಿಧಿಗಳ ಧೋರಣೆಗೆ ಕಿಡಿ: ರೈತರ ಪಾದಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಎಸ್ಪಿ ಗುಂಜನ್ ಆರ್ಯ ಹಾಗೂ ಹು-ಧಾ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ಭಾನುವಾರ ಯರಿಕೊಪ್ಪ ಬಳಿ ರೈತ ಮುಖಂಡರಾದ ಚೂನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಅವರೊಂದಿಗೆ ಮಾತುಕತೆ ನಡೆಸಿದರು. ಬೇಡಿಕೆ ಈಡೇರಿಸುವ ಕುರಿತು ಖಚಿತ ಲಿಖಿತ ಭರವಸೆ ನೀಡಿದರೆ ಮಾತ್ರ ಪಾದಯಾತ್ರೆ ಮೊಟಕುಗೊಳಿಸುವುದಾಗಿ ರೈತ ಮುಖಂಡರು ಸ್ಪಷ್ಟಪಡಿಸಿದರು.

ಆದರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಬಿಜೆಪಿ ಶಾಸಕರ ಪ್ರತಿನಿಧಿಗಳು ತೇಗೂರಿಗೆ ಬಂದು ಸ್ಪಷ್ಟ ಉತ್ತರ ನೀಡದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ದಸರಾ ಬಳಿಕ ಅ. 22ರಿಂದ ಧಾರವಾಡ ಹೊರವಲಯದ ಯರಿಕೊಪ್ಪ ಬಳಿ ಹೆದ್ದಾರಿ ತಡೆ ನಡೆಸುವುದಾಗಿ ಘೋಷಿಸಿದರು.