ಹುಬ್ಬಳ್ಳಿ: ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾನುವಾರ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಅನಿರೀಕ್ಷಿತವಾಗಿ ಮುಖಾಮುಖಿಯಾದರು. ಇಬ್ಬರೂ ನಾಯಕರು ಪರಸ್ಪರ ಸೌಜನ್ಯದಿಂದ ಮಾತನಾಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಛಬ್ಬಿ ಗ್ರಾಮದ ಖಾಸಗಿ ಮನೆಯೊಂದರಲ್ಲಿ ಈ ಭೇಟಿ ನಡೆದಿದೆ. ಗ್ರಾಮದಲ್ಲಿ ಚಾತುರ್ಮಾಸದ ಅಂಗವಾಗಿ ಆಯೋಜಿಸಿದ್ದ ಕ್ಷಮಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಯತ್ನಾಳ್ ಅವರು ಖಾಸಗಿ ಮನೆಯೊಂದರಲ್ಲಿ ಉಪಾಹಾರ ಸೇವಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ವಿಜಯೇಂದ್ರ ಅವರು ಯತ್ನಾಳ್ ಅವರನ್ನು ಭೇಟಿಯಾದರು.
ಈ ವೇಳೆ ಇಬ್ಬರೂ ನಾಯಕರು ಪರಸ್ಪರ ಉಭಯಕುಶಲೋಪರಿ ವಿಚಾರಿಸಿದರು. ಬಹಳ ದಿನಗಳ ನಂತರ ಭೇಟಿಯಾಗಿರುವುದಾಗಿ ಹೇಳಿಕೊಂಡು, ಹೇಗಿದ್ದೀರಿ ಎಂದು ಸೌಜನ್ಯಪೂರ್ವಕವಾಗಿ ಮಾತನಾಡಿದರು ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದ್ದ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿತ್ತು. ಇದಾದ ಬಳಿಕ ಉಭಯ ನಾಯಕರ ನಡುವೆ ರಾಜಕೀಯವಾಗಿ ಅಂತರ ಹೆಚ್ಚಾಗಿತ್ತು.
ಈ ಹಿನ್ನೆಲೆಯಲ್ಲಿ ಯತ್ನಾಳ್ ಮತ್ತು ವಿಜಯೇಂದ್ರ ಅವರ ಮುಖಾಮುಖಿ ಭೇಟಿ ರಾಜಕೀಯ ಮಹತ್ವ ಪಡೆದುಕೊಂಡಿದೆ. ಇಬ್ಬರೂ ನಾಯಕರು ಸೌಜನ್ಯದಿಂದ ಮಾತನಾಡಿರುವುದು ಗಮನ ಸೆಳೆದಿದ್ದರೂ, ಈ ಭೇಟಿಯು ರಾಜಕೀಯವಾಗಿ ಹೊಸ ಬೆಳವಣಿಗೆಗೆ ನಾಂದಿಯಾಗಲಿದೆಯೇ ಎಂಬ ಚರ್ಚೆ ಆರಂಭವಾಗಿದೆ. ಆದರೆ, ಉಭಯ ನಾಯಕರ ನಡುವೆ ಯಾವುದೇ ರಾಜಕೀಯ ಮಾತುಕತೆ ನಡೆದಿರುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.



















