ಬೆಳಗಾವಿ: ನಮಗೂ ಮನೆಗೆ ಹೋಗುವ ಆತುರವಿದೆ. ಹಬ್ಬ ಆಚರಿಸಬೇಕಿದೆ. ಆದರೆ, ಬೆಳೆದ ಕಬ್ಬಿಗೆ ಬೆಲೆ ಸಿಗದೆ ಬರಿಗೈಯಲ್ಲಿ ಹಿಂದಿರುಗುವುದು ಹೇಗೆ? ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಹೋರಾಟದ ಸ್ಥಳಕ್ಕೆ ಬಂದು ದರ ಘೋಷಿಸಲಿ; ಖರೀದಿಯ ಜವಾಬ್ದಾರಿ ವಹಿಸಲಿ. ಬೇಡಿಕೆ ಈಡೇರಿದರೆ ಸಾಮೂಹಿಕವಾಗಿ ಹೋರಾಟ ಹಿಂತೆಗೆದುಕೊಳ್ಳುತ್ತೇವೆ’ ಎಂದು ರೈತ ಮುಖಂಡ ಚೂನಪ್ಪ ಪೂಜೇರಿ ಎಚ್ಚರಿಸಿದ್ದಾರೆ.
ಕಬ್ಬು ಬೆಳೆಗಾರರ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಭಾನುವಾರ ಕಿತ್ತೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದೊಂದಿಗೆ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದರು. ಆದರೆ, ಸರ್ಕಾರದ ಪ್ರಸ್ತಾವಗಳನ್ನು ಸಾರ್ವಜನಿಕವಾಗಿ ರೈತರ ಮುಂದಿಡಬೇಕು; ಮುಂದಿನ ತೀರ್ಮಾನ ಅವರ ವಿಶ್ವಾಸ ಪಡೆದೇ ಆಗಬೇಕು ಎಂದು ಸ್ಪಷ್ಟಪಡಿಸಿದರು.
‘ಜೋಶಿ ಅವರು ಬಂದು ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆಯಿಂದ ಕಾಯುತ್ತಿದ್ದೇವೆ. ಶಾಸಕರು, ಅಧಿಕಾರಿಗಳು ಹಾಗೂ ನಿಯೋಗದ ಮೂಲಕ ಚರ್ಚೆ ನಡೆಸುವ ಸಂದೇಶಗಳು ಬರುತ್ತಿವೆ. ಇದು ಈಗ ಜನಾಂದೋಲನವಾಗಿದೆ. ರೈತರ ನಿರೀಕ್ಷೆಗೆ ಸ್ಪಷ್ಟ ಉತ್ತರ ಬೇಕು’ ಎಂದು ತಿಳಿಸಿದರು.
ಬನ್ನಿ, ಶಿಸ್ತಿನ ಹೊಣೆ ನಮ್ಮದು: ಹೋರಾಟದ ಸ್ಥಳಕ್ಕೆ ಜೋಶಿ ಅವರು ಭೇಟಿ ನೀಡುವಂತೆ ಆಹ್ವಾನಿಸಿದ ಪೂಜೇರಿ, ಸಭೆ ಶಾಂತಿಯುತವಾಗಿ ನಡೆಸುವ ಜವಾಬ್ದಾರಿ ಸಂಘಟನೆ ಮತ್ತು ತಮ್ಮದು ಎಂದು ಭರವಸೆ ನೀಡಿದರು.
‘ಯಾವುದೇ ಸಣ್ಣ ಗಲಾಟೆಯೂ ಆಗದಂತೆ ರೈತರನ್ನು ಶಿಸ್ತಿನಿಂದ ಕೂಡಿಸುತ್ತೇವೆ. ತಾವು ಬಂದು ರೈತರನ್ನು ರಕ್ಷಿಸುವ ನಿರ್ಧಾರ ಪ್ರಕಟಿಸಿ. ಬೆಲೆ ಮತ್ತು ಖರೀದಿಯ ಜವಾಬ್ದಾರಿ ವಹಿಸಿಕೊಂಡರೆ ಹೋರಾಟ ಹಿಂತೆಗೆದುಕೊಳ್ಳಲು ಸಿದ್ಧ’ ಎಂದು ಹೇಳಿದರು.
ರಾಜ್ಯ ಸರ್ಕಾರವೂ ತಕ್ಷಣ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆಯಬೇಕು. ರೈತರ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ರಾಜ್ಯದ ಎಲ್ಲ ಸಂಸದರೂ ಈ ವಿಚಾರದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
ಕಾರ್ಖಾನೆ ಆರಂಭಕ್ಕೆ ವಿಳಂಬವಾದರೆ ಕಬ್ಬಿಗೆ ಹಾನಿ: ದರದ ಅನಿಶ್ಚಿತತೆ ಹಾಗೂ ಕಬ್ಬು ನುರಿಸುವ ಕಾರ್ಯ ಆರಂಭದಲ್ಲಿನ ವಿಳಂಬ ರೈತರ ಸಂಕಷ್ಟ ಹೆಚ್ಚಿಸುತ್ತದೆ ಎಂದು ಪೂಜೇರಿ ಆತಂಕ ವ್ಯಕ್ತಪಡಿಸಿದರು.
‘ಮಳೆ ಕೊರತೆ, ವಿದ್ಯುತ್ ಸಮಸ್ಯೆ ಹಾಗೂ ಹೆಚ್ಚುತ್ತಿರುವ ಕೃಷಿ ವೆಚ್ಚದ ನಡುವೆ ರೈತರು ಬೆಳೆ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ಒಂದು ಟನ್ ಕಬ್ಬು ಬೆಳೆಯಲು 5,500 ವೆಚ್ಚವಾಗುತ್ತದೆ. ಕೃಷಿಗೆ ಬೇಕಾದ ವಸ್ತುಗಳ ಬೆಲೆ ಹೆಚ್ಚಾಗಿದೆ. ವರ್ಷಗಟ್ಟಲೆ ಪರಿಹಾರಕ್ಕಾಗಿ ಕಾಯುತ್ತಲೇ ಇರಲು ಸಾಧ್ಯವಿಲ್ಲ’ ಎಂದರು.
ಹಬ್ಬದ ದಿನಗಳು ಸಮೀಪಿಸುತ್ತಿದ್ದರೂ ರೈತರು ಮನೆ ಬಿಟ್ಟು ಹೋರಾಟದಲ್ಲಿ ಉಳಿಯಬೇಕಾಗಿದೆ. ಸರ್ಕಾರಗಳು ತ್ವರಿತ ನಿರ್ಧಾರ ಕೈಗೊಂಡರೆ ರೈತರಿಗೂ ನೆಮ್ಮದಿಯಿಂದ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ ಎಂದರು.
ಕಿತ್ತೂರಿನಿಂದ ಪಾದಯಾತ್ರೆ ಮುಂದುವರಿಸಿ, ಅಧಿಕಾರಿಗಳು ಮಂಡಿಸುವ ಸರ್ಕಾರದ ಪ್ರಸ್ತಾವಗಳನ್ನು ರೈತರ ಸಮ್ಮುಖದಲ್ಲಿ ಚರ್ಚಿಸಲಾಗುವುದು. ಪರಿಹಾರ ದೊರೆಯದಿದ್ದರೆ ಅಕ್ಟೋಬರ್ 22ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ರೈತ ಸಮಾವೇಶ ನಡೆಸಲಾಗುವುದು ಎಂದು ಎಚ್ಚರಿಸಿದರು.
‘ನಮ್ಮ ಮುಂದಿನ ಹೆಜ್ಜೆಯನ್ನು ರೈತರೇ ಸಾಮೂಹಿಕವಾಗಿ ನಿರ್ಧರಿಸುತ್ತಾರೆ. ಸರ್ಕಾರ ಈಗಲಾದರೂ ಸ್ಪಷ್ಟ ನಿರ್ಧಾರದೊಂದಿಗೆ ಮುಂದೆ ಬರಬೇಕು’ ಎಂದು ಆಗ್ರಹಿಸಿದರು.



















