ಹುಬ್ಬಳ್ಳಿ: ಸ್ಟಿಂಗ್ ಆಪರೇಶನ್ ಪ್ರಕರಣದ ಹಿಂದೆ ದೊಡ್ಡ ಜಾಲವಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ, ತಪ್ಪಿತಸ್ಥರು ಎಂತಹ ಪ್ರಭಾವಿಗಳಿದ್ದರೂ ಶಿಕ್ಷಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು ಮತ್ತು ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಶನ್ ನಡೆಸುವ ಇಂತಹ ಬೆಳವಣಿಗೆಗಳು ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತವೆ.
ಇಂದಿನ ರಾಜಕಾರಣದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಬೇಕು. ಸತ್ಯ ಹೊರಬರಬೇಕಾದರೆ ಸಿಬಿಐ ತನಿಖೆ ಅಗತ್ಯ ಎಂದರು.
ದೇವರಾಜ ಅರಸು ಅವರ ಕಾಲದಲ್ಲಿ ಭೂ ಸುಧಾರಣೆಗೆ ಒತ್ತು ನೀಡಲಾಗಿತ್ತು. ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ದೊರೆತಿತ್ತು. ಆದರೆ, ಈಗ ಸ್ಟಿಂಗ್ ಆಪರೇಶನ್ ಪ್ರಕರಣಗಳಿಂದ ಕರ್ನಾಟಕ ದೇಶದ ಗಮನ ಸೆಳೆಯುತ್ತಿರುವುದು ದುರದೃಷ್ಟಕರ. ಶಾಸಕರು ಮತ್ತು ಸಚಿವರು ಸಮಾಜಕ್ಕೆ ಮಾದರಿಯಾಗಿರಬೇಕು. ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು ಎಂದರು.
ಹಿಂದೆ ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ನಡೆದಾಗ ಅವರು ರಾಜೀನಾಮೆ ನೀಡಿದ್ದರು. ಈಗಿನ ಪ್ರಕರಣದಲ್ಲಿಯೂ ಸತ್ಯಾಸತ್ಯತೆ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರವನ್ನು ಸಿಬಿಐ ತನಿಖೆಗೆ ಒತ್ತಾಯಿಸುವುದಾಗಿ ಹೇಳಿದರು.




















