ದಾವಣಗೆರೆ: ಸ್ವಾತಂತ್ರ್ಯಾನಂತರ ಸುಮಾರು 66 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಮುಂದಿನ ಚುನಾವಣೆಯ ನಂತರ ಕಾಂಗ್ರೆಸ್ ಕಚೇರಿಗೆ ದೀಪ ಹಚ್ಚಲು ಒಬ್ಬ ವ್ಯಕ್ತಿಯೂ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಘಟಕಗಳ ವತಿಯಿಂದ ಆಯೋಜಿಸಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗ, ಸಿಬಿಐ, ಆದಾಯ ತೆರಿಗೆ ಇಲಾಖೆ, ನೀಟ್ ಪರೀಕ್ಷೆ ಹಾಗೂ ನ್ಯಾಯಾಂಗ ಸೇರಿದಂತೆ ವಿವಿಧ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರಂತರವಾಗಿ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಇಂತಹ ಆರೋಪಗಳ ಮೂಲಕ ಕಾಂಗ್ರೆಸ್ ಕಳಪೆ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾಗಿದ್ದು, ಈ ಅವಧಿಯಲ್ಲಿ ಜನತಾದಳ, ಬಿಜೆಪಿ, ಕಮ್ಯುನಿಸ್ಟ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಕಾರ್ಯನಿರ್ವಹಿಸಿವೆ. ಆದರೆ, ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ವಿವಾದಕ್ಕೆ ಎಳೆದು ತರುವ ರೀತಿಯ ಆರೋಪಗಳನ್ನು ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಸಾಂವಿಧಾನಿಕ ಸಂಸ್ಥೆಗಳ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸ್ಥೆಗಳ ಕಾರ್ಯವೈಖರಿ ಕುರಿತು ಪ್ರಶ್ನಿಸುವುದಕ್ಕೂ, ರಾಜಕೀಯ ಉದ್ದೇಶದಿಂದ ಆಧಾರರಹಿತ ಆರೋಪಗಳನ್ನು ಮಾಡುವುದಕ್ಕೂ ವ್ಯತ್ಯಾಸವಿದೆ. ಕಾಂಗ್ರೆಸ್ ನಾಯಕರು ಈ ವ್ಯತ್ಯಾಸವನ್ನು ಅರಿತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತ್ರ ಎಸ್ಐಆರ್ ಹಾಗೂ ಪೌರತ್ವದ ವಿಚಾರದಲ್ಲಿ ಭಯವಿದೆ. ರಾಹುಲ್ ಗಾಂಧಿ ಅವರು 1994ರಲ್ಲಿ ಬ್ರಿಟಿಷ್ ಪೌರತ್ವ ಪಡೆದಿದ್ದರು ಎಂಬ ಆರೋಪವಿದೆ. ಭಾರತೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತೀಯ ನಾಗರಿಕರಾಗಿರುವುದು ಕಡ್ಡಾಯ ಎಂಬ ಕಾನೂನಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದೆ. ಕಾನೂನಿನ ವಿಚಾರವನ್ನು ಮರೆಮಾಚಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಅನರ್ಹತೆಯ ಭೀತಿ ಎದುರಾಗಿದೆ ಎಂದು ಆರೋಪಿಸಿದರು.




















